ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಪ್ರತಿ ದಿನ ಮುಂಜಾನೆ 1 ಗಂಟೆ ವಿಶೇಷ ಮಂತ್ರ ಪಠಿಸುವ ಪ್ರಧಾನಿ ಮೋದಿ
PM Modi 11-day anushthaan: ಪ್ರಧಾನಿ ಮೋದಿ ಪ್ರತಿದಿನ ಬೆಳಿಗ್ಗೆ ‘ಬ್ರಾಹ್ಮೀ ಮುಹೂರ್ತ'ದಲ್ಲಿ 1 ಗಂಟೆ 11 ನಿಮಿಷಗಳ ಕಾಲ ಮಂತ್ರವನ್ನು ಪಠಿಸುತ್ತಾರೆ. ಬೆಳಗ್ಗೆ 3:40ಕ್ಕೆ ಸರಿಯಾಗಿ ಮೋದಿ ಮಂತ್ರ ಪಠಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆ, ಜನವರಿ 20: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 11 ದಿನಗಳ ‘ಅನುಷ್ಠಾನ’ದ ಭಾಗವಾಗಿ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಕಾಲ ವಿಶೇಷ ಮಂತ್ರವನ್ನು ಪಠಿಸುತ್ತಿದ್ದಾರೆ. ಜನವರಿ 12 ರಂದು ಅನುಷ್ಠಾನ ಆರಂಭಿಸಿರುವ ಮೋದಿ, ಜೀವನದಲ್ಲಿ ಹಿಂದೆಂದೂ ಅನುಭವಿಸದಂಥ ವಿಶೇಷ ಅನುಭೂತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸಾಧನವಾಗಿ ಆಯ್ಕೆ ಮಾಡಿದ್ದಾರೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಅವರು 11 ದಿನಗಳ ಧಾರ್ಮಿಕ ಅನುಷ್ಠಾನ ಕೈಗೊಳ್ಳುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಧಾರ್ಮಿಕ ಅನುಷ್ಠಾನದ ಭಾಗವಾಗಿ ಮೋದಿ ಅವರು ಪ್ರತಿ ದಿನ ಒಂದು ಗಂಟೆ ಕಾಲ ಮಂತ್ರ ಪಠಣ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಯಾವಾಗ ಮಂತ್ರವನ್ನು ಪಠಿಸುತ್ತಾರೆ?
ಪ್ರಧಾನಿ ಮೋದಿ ಪ್ರತಿದಿನ ಬೆಳಿಗ್ಗೆ ‘ಬ್ರಾಹ್ಮೀ ಮುಹೂರ್ತ’ದಲ್ಲಿ 1 ಗಂಟೆ 11 ನಿಮಿಷಗಳ ಕಾಲ ಮಂತ್ರವನ್ನು ಪಠಿಸುತ್ತಾರೆ. ಬೆಳಗ್ಗೆ 3:40ಕ್ಕೆ ಸರಿಯಾಗಿ ಮೋದಿ ಮಂತ್ರ ಪಠಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿಗೆ ವಿಶೇಷ ಮಂತ್ರ ಹೇಳಿಕೊಟ್ಟವರು ಯಾರು?
ಪ್ರಧಾನಿ ಮೋದಿಯವರು ಪ್ರತಿದಿನ ಪಠಿಸುವ ವಿಶೇಷ ಮಂತ್ರವನ್ನು ಕೆಲವು ಅಧ್ಯಾತ್ಮ ಸಾಧಕರು ಅವರಿಗೆ ಹೇಳಿಕೊಟ್ಟಿದ್ದಾರೆ ಎನ್ನಲಾಗಿದೆ. ಮಂತ್ರವನ್ನು ಪಠಿಸುವುದು ಅವರ 11 ದಿನಗಳ ‘ಅನುಷ್ಠಾನ’ದ ಪ್ರಮುಖ ಅಭ್ಯಾಸಗಳಲ್ಲಿ ಒಂದಾಗಿದೆ. 11 ದಿನಗಳ ವಿಶೇಷ ಧಾರ್ಮಿಕ ಅನುಷ್ಠಾನ ಕೈಗೊಂಡಿದ್ದಕ್ಕೆ ಪ್ರಧಾನ ಮಂತ್ರಿಯ ಬಗ್ಗೆ ವಿವಿಧ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧ್ಯಾತ್ಮ ಸಾಧಕರು ಇತ್ತೀಚೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರ ಈ ನಡೆಯು ದೇಶದಲ್ಲಿ ಸರ್ವಾಂಗೀಣ ಉತ್ಸಾಹವನ್ನು ಸೃಷ್ಟಿಸಿದೆ ಎಂದು ನಿಕೇತನ ಆಶ್ರಮದ ಚಿದಾನಂದ ಸರಸ್ವತಿ ಅಭಿಪ್ರಾಯಪಟ್ಟಿದ್ದಾರೆ. ಅವರಂತಹ ಪ್ರಧಾನಿಯನ್ನು ಪಡೆದಿರುವುದು ನಮ್ಮ ಅದೃಷ್ಟ. 500 ವರ್ಷಗಳ ಹೋರಾಟ ಮತ್ತು ತ್ಯಾಗ ಬಲಿದಾನದ ನಂತರ ದೇವಾಲಯ ತಲೆ ಎತ್ತುತ್ತಿದೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಅವರು ಮೋದಿಯವರ ಘೋಷಣೆಯು ಅವರು ಅಪರೂಪದ ಆಡಳಿತಗಾರ ಮಾತ್ರವಲ್ಲ, ಅಪ್ರತಿಮ ಆರಾಧಕರೂ ಎಂಬುದನ್ನು ತೋರಿಸುತ್ತದೆ ಎಂದು ಹೇಳಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
11 ದಿನಗಳ ಅನುಷ್ಠಾನದ ವೇಳೆ ಪ್ರಧಾನ ಮಂತ್ರಿ ಶಿಸ್ತಿನ ದಿನಚರಿಯನ್ನು ಅನುಸರಿಸುತ್ತಾರೆ ಮತ್ತು ಅವರು ನೆಲದ ಮೇಲೆ ಮಲಗುತ್ತಾರೆ. ಗೋ ಪೂಜೆ ಮತ್ತು ಹಸುಗಳಿಗೆ ಆಹಾರ ನೀಡುವಂತಹ ದೈನಂದಿನ ಭಕ್ತಿ ಕಾರ್ಯಗಳಲ್ಲಿ ತೊಡಗುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ: ಅಯೋಧ್ಯೆಯ ಅರ್ಚಕ ಸತ್ಯೇಂದ್ರ ದಾಸ್ ಸ್ಪಷ್ಟೀಕರಣ
ಅವರು ದೇಶದಾದ್ಯಂತ ಮಹತ್ವದ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ರಾಮಾಯಣ ಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮಹಾರಾಷ್ಟ್ರದ ನಾಸಿಕ್‌ನ ರಾಮಕುಂಡ್ ಮತ್ತು ಶ್ರೀ ಕಾಳರಾಮ್ ದೇವಾಲಯ, ಗುರುವಾಯೂರಿನ ಕೃಷ್ಣ ದೇವಾಲಯ ಮತ್ತು ಕೇರಳದ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಾಲಯ ಮತ್ತು ಆಂಧ್ರಪ್ರದೇಶದ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರು ಇಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯ ಮತ್ತು ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ