ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ‘ಹ್ಯೂಮನ್ಸ್ ಆಫ್ ಬಾಂಬೆ’ (Humans Of Bombay) ಸಾಮಾನ್ಯವಾಗಿ ಪರಿಚಯವಿರುತ್ತದೆ. ಹಲವು ವಿಚಾರಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಪ್ರೇರಣಾದಾಯಿ ಕಥೆಗಳನ್ನು ಈ ಪೇಜ್ ಹಂಚಿಕೊಳ್ಳುತ್ತದೆ. ಇದರ ಸ್ಥಾಪಕಿ ಕರಿಷ್ಮಾ ಮೆಹ್ತಾ. ಅವರು ಖ್ಯಾತ ತಾರೆಯರು, ನಾಯಕರು ಹಾಗೂ ಉದ್ದಿಮೆದಾರರನ್ನು ಸಂದರ್ಶಿಸಿದ್ದಾರೆ. ಆ ಸಂದರ್ಶನಗಳು ‘ಹ್ಯೂಮನ್ಸ್ ಆಫ್ ಬಾಂಬೆ’ಯಲ್ಲಿ ಪ್ರಸಾರವಾಗಿದ್ದು, ಅಪಾರ ಖ್ಯಾತಿ ಗಳಿಸಿವೆ. ಇದೇ ಮಾದರಿಯಲ್ಲಿ ಕರಿಷ್ಮಾ (Karishma Mehta) ಮೂರು ವರ್ಷಗಳ ಹಿಂದೆ ಕರಿಷ್ಮಾ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಸಂದರ್ಶಿಸಿದ್ದರು. ಈ ಸಣ್ಣ ಸಂದರ್ಶನವು ದೇಶಾದ್ಯಂತ ಹಲವು ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 2019ರಲ್ಲಿ ನಡೆದಿದ್ದ ಸಂದರ್ಶನದ ಬಗ್ಗೆ ಕೆಲವು ಕುತೂಹಲಕರ ಮಾಹಿತಿಯನ್ನು ಈಗ ಕರಿಷ್ಮಾ ಹಂಚಿಕೊಂಡಿದ್ದಾರೆ. ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಕರಿಷ್ಮಾ ಮೆಹ್ತಾ ತಮ್ಮ ಬರಹದಲ್ಲಿ ಪ್ರಧಾನಿ ಮೋದಿ ಸಂದರ್ಶಿಸುವ ಅವಕಾಶ ಬಂದಿದ್ದರ ಬಗ್ಗೆ ತಿಳಿಸಿದ್ದಾರೆ. ‘‘ಪ್ರಧಾನಿ ಮೋದಿಯವರನ್ನು ಸಂದರ್ಶಿಸುವ ಅವಕಾಶ ಲಭಿಸಿದಾಗ ನನಗೆ 27 ವರ್ಷ. 22 ನಿಮಿಷಗಳ ಆ ಸಂದರ್ಶನ ನನ್ನ ಜೀವನದಲ್ಲಿ ದೊಡ್ಡ ತಿರುವು ನೀಡಿತು’’ ಎಂದು ಅವರು ಬರೆದಿದ್ದಾರೆ.
ಆದರೆ ಈ ತಿರುವು ಹೇಗೆ ಎಂಬುದನ್ನು ಕರಿಷ್ಮಾರೇ ವಿವರಿಸಿದ್ದಾರೆ. ‘‘ಆ ಸಂದರ್ಶನ ನಮ್ಮ ಕೆಲಸಗಳಿಗೆ ಸಿಕ್ಕ ಮನ್ನಣೆ, ನಿಜ. ಆದರೆ ಪ್ರಧಾನಿ ಮೋದಿ ಸಂದರ್ಶನದ ವಿಡಿಯೋಗೆ ಜನರು ಋಣಾತ್ಮಕವಾಗಿ ಪ್ರತಿಕ್ರಿಯಿಸಿದರು. ಅರ್ಥಾತ್ ಎಲ್ಲರೂ ತಮ್ಮ ದ್ವೇಷವನ್ನು (ಹೇಟ್) ವ್ಯಕ್ತಪಡಿಸತೊಡಗಿದರು. ಯೂಥ್ ಮ್ಯಾಗಜಿನ್ ಒಂದು ಸಂದರ್ಶನದ ಫೋಟೋವನ್ನು ಮುಖಪುಟದಲ್ಲಿ ಹಾಕಿ, ಕೆಟ್ಟ ಹೆಡ್ಲೈನ್ ನೀಡಿದರು. ಇದರಿಂದ ಹಲವು ಆರೋಪಗಳು, ಏಕಪಕ್ಷೀಯ ನಿಂದನೆಗಳು ಬರತೊಡಗಿದವು’’ ಎಂದು ಮೆಹ್ತಾ ಬರೆದಿದ್ದಾರೆ.
ಇದರಿಂದ ಕಲಿತ ಪಾಠದ ಬಗ್ಗೆ ಬರೆದಿರುವ ಕರಿಷ್ಮಾ, ‘‘ಆ ಸಮಯದಲ್ಲಿ ನಾನು ಮೌನದ ಅರ್ಥವನ್ನು ತಿಳಿದೆ. ಮತ್ತು ಕಠಿಣ ಪರಿಶ್ರಮ ಒಂದಲ್ಲ ಒಂದು ದಿನ ಪ್ರತಿಫಲ ನೀಡುತ್ತದೆ ಎಂದು ಅರ್ಥಮಾಡಿಕೊಂಡೆ’’ ಎಂದಿದ್ದಾರೆ.
ಪ್ರಧಾನಿ ಮೋದಿ ಕರಿಷ್ಮಾಗೆ ಕೇಳಿದ ಮೊದಲ ಪ್ರಶ್ನೆ ಏನು?
ತಮ್ಮ ಬರಹವನ್ನು ವಿಶೇಷ ವಿಚಾರದೊಂದಿಗೆ ಕರಿಷ್ಮಾ ಕೊನೆಗೊಳಿಸಿದ್ದಾರೆ. ‘‘ಸಂದರ್ಶನದ ಬಗ್ಗೆ ಮತ್ತಷ್ಟು ಕುತೂಹಲಕರ ವಿಚಾರಗಳನ್ನು ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ. ಆದರೆ ಪ್ರಧಾನಿ ಮೋದಿ ಸಂದರ್ಶನ ಆರಂಭಿಸಿದಾಗ ಕೇಳಿದ ಮೊದಲ ಪ್ರಶ್ನೆ ಏನು ಗೊತ್ತೇ? ಕೆಮ್ ಚೊ ಮೆಹ್ತಾ ಜೀ?’’ ಎಂದು ಬರೆದಿದ್ದಾರೆ ಕರಿಷ್ಮಾ.
‘‘ಕೆಮ್ ಚೊ ಮೆಹ್ತಾ ಜೀ’’ ಎಂದರೆ ಗುಜರಾತಿ ಭಾಷೆಯಲ್ಲಿ ‘‘ಹೇಗಿದ್ದೀರಿ ಕರಿಷ್ಮಾ ಅವರೆ?’’ ಎಂದರ್ಥ. ಪ್ರಧಾನಿ ಈ ಪ್ರಶ್ನೆಯನ್ನು ಕೇಳುವುದಕ್ಕೂ ಒಂದು ಕಾರಣವಿದೆ. ಮೋದಿ ಹಾಗೂ ಕರಿಷ್ಮಾರ ತವರೂರು ಒಂದೇ. ಗುಜರಾತ್. ಹೌದು, ಗುಜರಾತ್ನ ಈರ್ವರೂ ಮೊದಲ ಬಾರಿಗೆ ಸಂದರ್ಶನದಲ್ಲಿ ಭೇಟಿಯಾದಾಗ ಪ್ರಧಾನಿ ಕರಿಷ್ಮಾರನ್ನು ಗುಜರಾತಿಯಲ್ಲಿ ಹೇಗಿದ್ದೀರಿ ಎಂದು ಕೇಳಿದ್ದಾರೆ. ಇದನ್ನು ಬರೆದುಕೊಳ್ಳುತ್ತಾ ಕರಿಷ್ಮಾ, ನಸು ನಗುವಿನ ಎಮೋಜಿಯನ್ನು ಹಂಚಿಕೊಂಡು ಬರಹವನ್ನು ಮುಕ್ತಾಯಗೊಳಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:
Kailash Yatra: ಕೈಲಾಸ- ಮಾನಸ ಸರೋವರ ಯಾತ್ರೆಗೆ ಹೊಸ ಮಾರ್ಗ ಶೀಘ್ರ ಕಾರ್ಯಾರಂಭ; ಇದರ ವಿಶೇಷಗಳೇನು?
Published On - 3:28 pm, Fri, 25 March 22