
ನವದೆಹಲಿ, ಅಕ್ಟೋಬರ್ 1: ದುಬೈ–ಟೆಲ್ ಅವೀವ್ ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್‌ಪಿಟ್ ಘಟನೆಯ ವೇಳೆ ಧೈರ್ಯ ತೋರಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಅವರು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿಸಲು ಸಾಧ್ಯವಾಯಿತು ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಕ್ಯಾಪ್ಟನ್ ಮಚ್ಚರ್ ಅಪಾರ ಧೈರ್ಯದಿಂದ ಇತರ ಪ್ರಯಾಣಿಕರ ಜೀವಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಕ್ರಮಗಳು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ನೆರವಾದವು ಎಂದು ಮೋದಿ ತಿಳಿಸಿದ್ದಾರೆ. ಮಚ್ಚರ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಬೋಯಿಂಗ್ 737 MAX 8 ವಿಮಾನದಲ್ಲಿ ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ಗಂಭೀರ ಘಟನೆ ನಡೆದಿದೆ. ಸಹ-ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ದಾಳಿಯಲ್ಲಿ ಗಾಯಗೊಂಡರೂ ಮಚ್ಚರ್ ಹೇಗೋ ಕಷ್ಟಪಟ್ಟು ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಯಿತು ಎಂದು ವರದಿಯಾಗಿದೆ.
ಬಾಗಿಲು ತೆರೆದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ನೆರವಾದರು. ಬಳಿಕ ವಿಮಾನದಲ್ಲಿದ್ದ ಇತರ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು. ಗಾಯಗೊಂಡ ಕ್ಯಾಪ್ಟನ್ ಮಚ್ಚರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ:
ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಪೈಲಟ್
ಘಟನೆಯ ಸಂದರ್ಭದಲ್ಲಿ ವಿಮಾನವು 7700 ತುರ್ತು ಸಂಕೇತವನ್ನು ಕಳುಹಿಸಿತು. ನಂತರ 7500 ಸಂಕೇತಕ್ಕೆ ಬದಲಾಯಿಸಲಾಗಿದ್ದು, ಇದು ವಿಮಾನದಲ್ಲಿ ಅಕ್ರಮ ಹಸ್ತಕ್ಷೇಪ ಅಥವಾ ಅಪಹರಣದ ಸಾಧ್ಯತೆಯನ್ನು ಸೂಚಿಸುವ ಕೋಡ್ ಆಗಿದೆ. ಇದರಿಂದ ವಿಮಾನದ ಬಗ್ಗೆ ಭದ್ರತಾ ಆತಂಕ ಹೆಚ್ಚಾಗಿತ್ತು. ವಿಮಾನವು ಸೌದಿ ಅರೇಬಿಯಾದತ್ತ ತಿರುಗಿ ತಬೂಕ್‌ನಲ್ಲಿ ಇಳಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಘಟನೆಯ ನಿಖರ ಕಾರಣ ಮತ್ತು ಸಹ-ಪೈಲಟ್‌ನ ಉದ್ದೇಶದ ಕುರಿತು ತನಿಖೆ ನಡೆಯುತ್ತಿದೆ.
ಮೋದಿ ಪೋಸ್ಟ್
Captain Smit Machchhar is a HERO.
In the face of the gravest danger and despite being seriously injured, he showed immense courage and an unwavering resolve to protect the lives of others.
His valour helped save hundreds of lives and avert a great tragedy.
India is proud of…
— Narendra Modi (@narendramodi) October 1, 2026
ಈ ಘಟನೆ ಬಳಿಕ ವಿಮಾನದ ಭದ್ರತಾ ವ್ಯವಸ್ಥೆ, ಕಾಕ್‌ಪಿಟ್‌ನಲ್ಲಿನ ಪರಿಸ್ಥಿತಿ ಮತ್ತು ತುರ್ತು ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ. ಘಟನೆಯ ಸಂಪೂರ್ಣ ಚಿತ್ರಣ ತನಿಖೆ ಪೂರ್ಣಗೊಂಡ ನಂತರವೇ ಸ್ಪಷ್ಟವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 am, Thu, 1 October 26