ರಷ್ಯಾ -ಉಕ್ರೇನ್ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian president Volodymyr Zelensky)ಯವರೊಟ್ಟಿಗೆ ಮಾತನಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆಯೇ ಅವರು ಝೆಲೆನ್ಸ್ಕಿಯವರೊಂದಿಗೆ ಫೋನ್ನಲ್ಲಿ ಚರ್ಚೆ ನಡೆಸಲಿದ್ದಾರೆ. ಅಂದಹಾಗೇ, ಯುದ್ಧ ಶುರುವಾದ ನಂತರ ಇದು ಎರಡನೇ ಬಾರಿಗೆ ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷರೊಂದಿಗೆ ಮಾತನಾಡುತ್ತಿರುವುದು. ಈಗಾಗಲೇ ಎರಡು ಬಾರಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರೊಟ್ಟಿಗೆ ಫೋನ್ನಲ್ಲಿ ಮಾತುಕತೆ ನಡೆಸಿದ್ದರು.
ಉಕ್ರೇನ್ ಮೇಲೆ ಫೆ.24ರಿಂದ ರಷ್ಯಾ ಆಕ್ರಮಣ ಮಾಡುತ್ತಿದೆ. ಅದಾದ ಎರಡನೇ ದಿನಕ್ಕೆ ಅಂದರೆ ಫೆ.26ರಂದು ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ನಡುವೆ ಚರ್ಚೆ ನಡೆದಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ನಿರ್ಣಯಕ್ಕೆ ಮತಹಾಕಲು ಭಾರತ ಒಪ್ಪಿರಲಿಲ್ಲ. ಅಂದರೆ ಪರ ಅಥವಾ ವಿರೋಧವಾಗಿ ಮತದಾನ ಮಾಡದೆ ತಟಸ್ಥ ನೀತಿ ಕಾಯ್ದುಕೊಂಡಿತ್ತು. ಇದಾದ ಬಳಿಕ ಝೆಲೆನ್ಸ್ಕಿಯವರು ಪ್ರಧಾನಿ ಮೋದಿಯವರೊಟ್ಟಿಗೆ ಮಾತನಾಡಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಉಕ್ರೇನ್ಗೇ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ಯಾರಿಗೂ ಪರವಾಗಿ-ವಿರೋಧವಾಗಿ ನಿಲುವು ವ್ಯಕ್ತಪಡಿಸಿಲ್ಲ. ಶಾಂತಿಯಿಂದ ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸಿಕೊಳ್ಳಿ ಎಂಬ ಸಲಹೆಯನ್ನು ನೀಡುತ್ತಲೇ ಇದೆ. ಅದರೊಂದಿಗೆ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಎರಡೂ ದೇಶಗಳ ಬೆಂಬಲ ಪಡೆಯುತ್ತಿದ್ದು, ಆಪರೇಶನ್ ಗಂಗಾ ಮೂಲಕ ಈಗಾಗಲೇ ಮುಕ್ಕಾಲು ಪಾಲು ವಿದ್ಯಾರ್ಥಿಗಳನ್ನು ವಾಪಸ್ ಕರೆತಂದಿದೆ. ಉಕ್ರೇನ್ಗೆ ಮಾನವೀಯ ನೆರವನ್ನೂ ನೀಡುತ್ತಿದೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ತಾವೂ ಸಹಾಯ ಮಾಡುವುದಾಗಿ ರಷ್ಯಾ ಕೂಡ ಸಮ್ಮತಿ ನೀಡಿದೆ.
ಇದನ್ನೂ ಓದಿ: Russia-Ukraine War Live: ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಬದಲಾದ ಪೋಷಕರ ಮನಸ್ಥಿತಿ; ಸ್ವದೇಶದಲ್ಲೇ ಶಿಕ್ಷಣಕ್ಕೆ ಆಗ್ರಹ
Published On - 9:29 am, Mon, 7 March 22