ಇಸ್ರೋ ರಾಕೆಟ್ ಲಾಂಚ್‌ಗಿಂತ ರಾಹುಲ್ ರೀ-ಲಾಂಚ್ ಹೆಚ್ಚಾಗಿದೆ: ಪ್ರಧಾನಿ ಮೋದಿ ವ್ಯಂಗ್ಯ, ಕಾಂಗ್ರೆಸ್ ವಿರುದ್ಧ ಕಿಡಿ

ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಸ್ರೋ ರಾಕೆಟ್ ಲಾಂಚ್‌ಗಳಿಗಿಂತ ರಾಹುಲ್ ಅವರ "ವಿಫಲ ಉತ್ಪನ್ನದ ಮರು-ಉಡಾವಣೆ" ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ದೇಶದ ಪ್ರಗತಿಯನ್ನು ಪಣಕ್ಕಿಟ್ಟು, ವಿದೇಶಗಳಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಕೀಳಾಗಿ ಬಿಂಬಿಸುತ್ತಿದೆ ಎಂದು ಆರೋಪಿಸಿದರು. ಅರ್ಬನ್ ನಕ್ಸಲ್ ಪ್ರಭಾವದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ ಎಂದರು

ಇಸ್ರೋ ರಾಕೆಟ್ ಲಾಂಚ್‌ಗಿಂತ ರಾಹುಲ್ ರೀ-ಲಾಂಚ್ ಹೆಚ್ಚಾಗಿದೆ: ಪ್ರಧಾನಿ ಮೋದಿ ವ್ಯಂಗ್ಯ, ಕಾಂಗ್ರೆಸ್ ವಿರುದ್ಧ ಕಿಡಿ
ಮೋದಿ-ರಾಹುಲ್ ಗಾಂಧಿ
Image Credit source: Scroll.in

Updated on: Oct 23, 2026 | 8:01 AM

ನವದೆಹಲಿ, ಅಕ್ಟೋಬರ್ 23:ಜಗತ್ತು ಇಂದು ಸ್ಥಿರತೆ ಮತ್ತು ನವ ವ್ಯವಸ್ಥೆಗಾಗಿ ಎದುರುನೋಡುತ್ತಿರುವಾಗ, ಭಾರತದಲ್ಲಿ ಕೆಲವರು ಕೇವಲ ಅರಾಜಕತೆ ಹಾಗೂ ಅವ್ಯವಸ್ಥೆಯ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ವಿಶ್ವ ಶೃಂಗಸಭೆಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಅತ್ಯಂತ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷವು ಒಂದು ಕುಟುಂಬವನ್ನು ವೈಫಲ್ಯದ ಕಲೆಯಿ೦ದ ರಕ್ಷಿಸಲು ಇಡೀ ದೇಶದ ಪ್ರಗತಿ ಮತ್ತು ಘನತೆಯನ್ನೇ ಪಣಕ್ಕಿಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ವಿಫಲ ಉತ್ಪನ್ನದ ಮರು-ಉಡಾವಣೆ’ ವ್ಯಂಗ್ಯ:

ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತೀವ್ರ ವ್ಯಂಗ್ಯವಾಡಿದ ಪ್ರಧಾನಿ, “ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲೂ ವರ್ಷಕ್ಕೆ ಇಷ್ಟೊಂದು ರಾಕೆಟ್‌ಗಳು ಲಾಂಚ್ ಆಗುವುದಿಲ್ಲ, ಆದರೆ ಕಾಂಗ್ರೆಸ್ ಮಾತ್ರ ತನ್ನ ‘ವಿಫಲ ಉತ್ಪನ್ನ’ವನ್ನು ಪದೇ ಪದೇ ಲಾಂಚ್ ಮಾಡಲು ಶತಪ್ರಯತ್ನ ನಡೆಸುತ್ತಿದೆ. ತನ್ನ ಪಕ್ಷವನ್ನು ತಾನೇ ನಾಶ ಮಾಡಿಕೊಳ್ಳುವುದರ ಬಗ್ಗೆ ನಮಗೆ ತಕರಾರಿಲ್ಲ, ಆದರೆ ಒಂದು ಕುಟುಂಬದ ವೈಫಲ್ಯವನ್ನು ಮುಚ್ಚಿಹಾಕಲು ಭಾರತದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಅವಹೇಳನ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

ವಿದೇಶಗಳಲ್ಲಿ ದೇಶದ ಮಾನ ಹರಾಜು:

“ಈ ಜನರು ವಿದೇಶಗಳಿಗೆ ಹೋಗಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ಕೀಳಾಗಿ ಬಿಂಬಿಸುತ್ತಾರೆ. ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವಂತೆ ವಿದೇಶಿ ಶಕ್ತಿಗಳನ್ನು ಬಹಿರಂಗವಾಗಿ ಬೇಡಿಕೊಳ್ಳುತ್ತಾರೆ. ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ, ದ್ರಾಕ್ಷಿ ಹುಳಿ ಎಂಬ ಕಾರಣಕ್ಕೆ ಇಡೀ ದ್ರಾಕ್ಷಿ ಬಳ್ಳಿಯನ್ನೇ ನಾಶ ಮಾಡಲು ಹೊರಟಿದ್ದಾರೆ” ಎಂದು ಟೀಕಿಸಿದರು.

ಇದನ್ನೂ ಓದಿ: 30 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ‘ವೋಟ್ ಚೋರಿ’ ಆರೋಪ ಸೋಲು ಮುಚ್ಚಿಕೊಳ್ಳುವ ನೆಪ ಎಂದ ಗೃಹ ಸಚಿವ

ಕಾಂಗ್ರೆಸ್ ಪಕ್ಷದೊಳಗೆ ನೆಹರೂ-ಗಾಂಧಿ ಕುಟುಂಬವು ಹೊರೆಯಾಗಿ ಪರಿಣಮಿಸಿದೆ ಎಂದ ಪ್ರಧಾನಿ, “ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು ಈ ಸತ್ಯವನ್ನು ಖಾಸಗಿ ಮಾತುಕತೆಗಳಲ್ಲಿ ಒಪ್ಪಿಕೊಳ್ಳುತ್ತಾರೆ. ಸಂಸತ್ತಿನಲ್ಲಿ ಸರ್ಕಾರದ ನೀತಿಗಳನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ಬಯಸುವ ಹಲವು ಪ್ರತಿಭಾನ್ವಿತ ಯುವ ಸಂಸದರಿದ್ದಾರೆ. ಆದರೆ, ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಮುಂಚೂಣಿಯಲ್ಲಿಡಲು ಕಾಂಗ್ರೆಸ್ ಇಡೀ ಸದನದ ಕಲಾಪವನ್ನೇ ನಡೆಯಲು ಬಿಡದೆ ಇತರರ ಅವಕಾಶವನ್ನು ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದರು.

ಪೋಸ್ಟ್​

ಕಾಂಗ್ರೆಸ್ ತನ್ನ ಸ್ವಂತ ಅಸ್ತಿತ್ವ ಕಳೆದುಕೊಂಡು ಮಿತ್ರಪಕ್ಷಗಳ ಮತಗಳ ಮೇಲೆ ಅವಲಂಬಿತವಾಗಿರುವ ‘ಪರಾವಲಂಬಿ’  ಪಕ್ಷವಾಗಿದೆ ಎಂದು ಕರೆದ ಅವರು, “ಕಾಂಗ್ರೆಸ್‌ನ ಆಲೋಚನಾ ಶಕ್ತಿಯನ್ನು ಅರ್ಬನ್ ನಕ್ಸಲರು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಹಳ್ಳಿ-ಕಾಡುಗಳಲ್ಲಿ ವಿನಾಶ ಸೃಷ್ಟಿಸುತ್ತಿದ್ದ ಮನಸ್ಥಿತಿಯ ಜನರು ಈಗ ಪಕ್ಷವನ್ನು ಆವರಿಸಿಕೊಂಡು ಇಡೀ ದೇಶವನ್ನು ಅಸ್ಥಿರಗೊಳಿಸಲು ಹವಣಿಸುತ್ತಿದ್ದಾರೆ” ಎಂದು ಕಟುವಾಗಿ ಎಚ್ಚರಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:24 am, Fri, 23 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us