20 Years of Parliament Attack: ಸಂಸತ್ತಿನ ಮೇಲೆ ದಾಳಿ ನಡೆದ ಆ ಕರಾಳ ದಿನಕ್ಕೆ 20 ವರ್ಷ; ಘಟನೆ ನೆನಪಿಸಿಕೊಂಡು ಟ್ವೀಟ್ ಮಾಡಿದ ಪ್ರಧಾನಮಂತ್ರಿ, ರಾಷ್ಟ್ರಪತಿ

| Updated By: Lakshmi Hegde

Updated on: Dec 13, 2021 | 3:09 PM

2001ರ ಡಿಸೆಂಬರ್​ 13ರಂದು ಭಾರತದ ಸಂಸತ್ತಿನ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರಸಂಘಟನೆಗಳಾದ ಜೈಷ್​-ಇ-ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾದ​  ಭಯೋತ್ಪಾದಕರು ದಾಳಿ ನಡೆಸಿದ್ದರು. 

20 Years of Parliament Attack: ಸಂಸತ್ತಿನ ಮೇಲೆ ದಾಳಿ ನಡೆದ ಆ ಕರಾಳ ದಿನಕ್ಕೆ 20 ವರ್ಷ; ಘಟನೆ ನೆನಪಿಸಿಕೊಂಡು ಟ್ವೀಟ್ ಮಾಡಿದ ಪ್ರಧಾನಮಂತ್ರಿ, ರಾಷ್ಟ್ರಪತಿ
ಸಾಂಕೇತಿಕ ಚಿತ್ರ (ರಾಯಿಟರ್ಸ್ ಫೋಟೋ)
Follow us on

ಭಾರತದ ಸಂಸತ್ ಮೇಲೆ ದಾಳಿ (Parliament attack) ನಡೆದು ಇಂದಿಗೆ ಸರಿಯಾಗಿ 20 ವರ್ಷ. ದೇಶದ ಇತಿಹಾಸದ ಕರಾಳದಿನಗಳಲ್ಲಿ ಇದೂ ಒಂದು. 2001ರಲ್ಲಿ ನಡೆದ ಸಂಸತ್​ ದಾಳಿಯ ಕ್ಷಣಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​ ಸೇರಿ ಹಲವು ಗಣ್ಯರು ನೆನಪಿಸಿಕೊಂಡಿದ್ದಾರೆ ಹಾಗೇ ಅಂದಿನ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.  ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 2001ರಲ್ಲಿ ಸಂಸತ್​ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಗೆ ನನ್ನ ಗೌರವ ಪೂರ್ವಕ ಶ್ರದ್ಧಾಂಜಲಿ. ಅಂದಿನ ಅವರ ಸೇವೆ ಮತ್ತು ಸರ್ವೋಚ್ಛ ಬಲಿದಾನ ಇಂದಿಗೂ ಕೂಡ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.  

ಹಾಗೇ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರೂ ಕೂಡ ಸಂಸತ್ತಿನ ಮೇಲಿನ ದಾಳಿಯನ್ನು ನೆನಪು ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.  ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದ ಸಂಸತ್ತಿನ ಮೇಲೆ 2001ರಲ್ಲಿ ಉಗ್ರರು ದಾಳಿ ನಡೆಸಿದರು. ಈ ವೇಳೆ ವೀರೋಚಿತವಾಗಿ ಹೋರಾಡಿ, ತಮ್ಮ ಪ್ರಾಣವನ್ನೇ ಸಮರ್ಪಿಸಿದ ವೀರ ಯೋಧರಿಗೆ ನನ್ನ ಗೌರವ ನಮನಗಳು. ಇಡೀ ದೇಶ ಯಾವತ್ತಿಗೂ ಅವರಿಗೆ ಕೃತಜ್ಞವಾಗಿರಬೇಕು ಎಂದು ಹೇಳಿದ್ದಾರೆ. ಇನ್ನುಳಿದಂತೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಸಾರಿಗೆ ಸಚಿವ ನಿತಿನ್​ ಗಡ್ಕರಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜಕೀಯ ಗಣ್ಯರು  ಟ್ವೀಟ್ ಮೂಲಕ 2001ರ ಪಾರ್ಲಿಮೆಂಟ್ ದಾಳಿಯನ್ನು ನೆನಪಿಸಿಕೊಂಡು, ಹುತಾತ್ಮರಾದ ವೀರಯೋಧರನ್ನು ಸ್ಮರಿಸಿದ್ದಾರೆ.

2001ರ ಡಿಸೆಂಬರ್​ 13ರಂದು ಭಾರತದ ಸಂಸತ್ತಿನ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರಸಂಘಟನೆಗಳಾದ ಜೈಷ್​-ಇ-ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾದ​  ಭಯೋತ್ಪಾದಕರು ದಾಳಿ ನಡೆಸಿದ್ದರು.  ಸಂಸತ್ತಿನ ಆವರಣದೊಳಗೆ ಪ್ರವೇಶ ಪಡೆಯಲು ನಿಗದಿ ಪಡಿಸಿರುವ ಸ್ಟಿಕರ್​ನ್ನು ತಮ್ಮ ವಾಹನಕ್ಕೆ ಅಂಟಿಸಿಕೊಂಡು ಬಂದಿದ್ದ ಈ ಉಗ್ರರು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದವರಾಗಿದ್ದರು. ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕಲಾಪ 40 ನಿಮಿಷ ಮುಂದೂಡಲ್ಪಟ್ಟಿದ್ದ ಸಮಯದಲ್ಲೇ ಈ ದಾಳಿ ನಡೆದಿತ್ತು. ಕಟ್ಟಡದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಎಲ್.ಕೆ.ಆಡ್ವಾಣಿ ಸೇರಿ 100ಕ್ಕೂ ಹೆಚ್ಚು ಮಂದಿ ಒಳಗೇ ಇದ್ದರು. ಅಂದು ಉಗ್ರರ ದಾಳಿ ಬಗ್ಗೆ ಮೊದಲು ಎಚ್ಚರಿಸಿದ್ದು ಕಾನ್​ಸ್ಟೆಬಲ್​ ಕಮಲಾ ಕುಮಾರಿ ಎಂಬುವರು ಮತ್ತು ಅವರ ದಾಳಿಗೆ ಮೊದಲು ಬಲಿಯಾಗಿದ್ದು ಕೂಡ ಅವರೇ ಆಗಿದ್ದಾರೆ.  ಭಯೋತ್ಪಾದಕರು ಸಂಸತ್ತಿನ ಒಳಗೆ ಪ್ರವೇಶ ಮಾಡದಂತೆ ತಡೆಯುವ ಪ್ರಯತ್ನದಲ್ಲಿ ರಕ್ಷಣಾ ಪಡೆಗಳ 9 ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಹಾಗೇ, ಅಂದು ದಾಂಗುಡಿಯಿಟ್ಟಿದ್ದ ಐವರು ಉಗ್ರರನ್ನು ರಕ್ಷಣಾ ಸಿಬ್ಬಂದಿ ಕೊಂದುಹಾಕಿದ್ದರು.  ದಾಳಿಯ ಮುಖ್ಯ ರೂವಾರಿ ಅಫ್ಜಲ್​ ಗುರುವನ್ನು 2013ರಲ್ಲಿ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗಿದೆ.

ಇದನ್ನೂ ಓದಿ: ಕಾರ್ಖಾನೆಗಳಿಗೆ ವಿದ್ಯುತ್ ಬಿಲ್ ವಿನಾಯಿತಿ ನೀಡಿದಂತೆ ಧಾರ್ಮಿಕ ಕೇಂದ್ರಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಪರಿಷತ್​ನಲ್ಲಿ ಮನವಿ

Published On - 3:09 pm, Mon, 13 December 21