PM Modi in Varanasi: ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ, ಮಹಾದೇವನಿಗೆ ಖುಷಿಯಾಗಿದೆ: ವಾರಾಣಸಿಯಲ್ಲಿ ಪ್ರಧಾನಿ ಮೋದಿ ಹರ್ಷ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಿದ್ದಾರೆ. ಗುರುವಾರ ರಾತ್ರಿಯೇ ವಾರಾಣಸಿಗೆ ಬಂದಿಳಿದ ಮೋದಿ, ಶಿವಪುರ-ಫುಲ್ವಾರಿಯಾ-ಲಹರ್ತಾರಾ ಹೆದ್ದಾರಿಯನ್ನು ಪರಿಶೀಲಿಸಿದರು. ಇದೀಗ ಬಿಎಚ್‌ಯುನಲ್ಲಿ ನಡೆದ ‘ಸಂಸದ್ ಸಂಸ್ಕೃತ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ್ದಾರೆ.

PM Modi in Varanasi: ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ, ಮಹಾದೇವನಿಗೆ ಖುಷಿಯಾಗಿದೆ: ವಾರಾಣಸಿಯಲ್ಲಿ ಪ್ರಧಾನಿ ಮೋದಿ ಹರ್ಷ
ಬಿಎಚ್​ಯುನಲ್ಲಿ ಪ್ರಧಾನಿ ಮೋದಿ
Follow us
Ganapathi Sharma
|

Updated on:Feb 23, 2024 | 11:35 AM

ವಾರಾಣಸಿ, ಫೆಬ್ರವರಿ 23: ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ, ಮಹಾದೇವನಿಗೆ ಈಗ ಖುಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ವಾರಾಣಸಿಯಲ್ಲಿ (Varanasi) ಬಿಎಚ್‌ಯುನಲ್ಲಿ ನಡೆದ ‘ಸಂಸದ್ ಸಂಸ್ಕೃತ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ನಂತರ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ಉಪಸ್ಥಿತರಿದ್ದರು. ಕಾಶಿಯು ಜ್ಞಾನದ ರಾಜಧಾನಿಯಾಗಿದೆ. ಇಂದು ಕಾಶಿಯ ಶಕ್ತಿ ಮತ್ತು ಸ್ವರೂಪ ಮತ್ತೆ ಸುಧಾರಿಸುತ್ತಿದೆ. ಕಾಶಿಯಲ್ಲಿ ಇದನ್ನು ಮಹಾದೇವನೇ ಮಾಡಿಸುತ್ತಿದ್ದಾನೆ. ಎಲ್ಲೆಲ್ಲಿ ಮಹಾದೇವನ ಆಶೀರ್ವಾದವಿದೆಯೋ ಅಲ್ಲಿ ಭೂಮಿ ಸುಭಿಕ್ಷವಾಗಿರುತ್ತದೆ ಎಂದು ಮೋದಿ ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವ ಶಕ್ತಿಯೇ ಆಧಾರ. ವಾರಾಣಸಿಯಲ್ಲಿ ಕಾಶಿ ‘ಸಂಸದ್ ಸಂಸ್ಕೃತ ಸ್ಪರ್ಧೆ’ಯ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ಎಕ್ಸ್​ ಸಂದೇಶ

ನಾನು ಸೇವಕನಷ್ಟೇ: ಮೋದಿ

ಕಾಶಿಯನ್ನು ಇನ್ನಷ್ಟು ಸುಂದರಗೊಳಿಸಲಾಗುವುದು. ಇಲ್ಲಿ ರಸ್ತೆಗಳನ್ನು, ಸೇತುವೆಗಳನ್ನು ನಿರ್ಮಿಸಲಾಗುವುದು. ಕಟ್ಟಡಗಳನ್ನು ಸಹ ನಿರ್ಮಿಸಲಾಗುವುದು. ಇವೆಲ್ಲವುಗಳಿಗಿಂತಲೂ ಮೊದಲು ನಾನು ಇಲ್ಲಿನ ಜನರನ್ನು ಸುಂದರಗೊಳಿಸಬೇಕು, ಪ್ರತಿ ಮನಸ್ಸನ್ನು ಸುಂದರಗೊಳಿಸಬೇಕು. ನಾನು ಬರೇ ಸೇವಕನಷ್ಟೇ. ಒಬ್ಬ ಸೇವಕನಾಗಿ ಈ ಎಲ್ಲ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಕಾಶಿಯ ಕುರಿತ ಸಂಪೂರ್ಣ ಮಾಹಿತಿಯುಳ್ಳ ಪುಸ್ತಕ ಬಿಡುಗಡೆ

ಕಾರ್ಯಕ್ರಮದಲ್ಲಿ, ಕಾಶಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಎರಡು ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು. ಕಳೆದ 10 ವರ್ಷಗಳಲ್ಲಿ ಕಾಶಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಶಿಯನ್ನು ಇನ್ನಷ್ಟು ಸುಂದರಗೊಳಿಸಲಾಗುತ್ತಿದೆ. ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ ಎಂದು ಮೋದಿ ಹೇಳಿದರು. ಪ್ರಾಚೀನವಾದ ಕಾಶಿಯ ಗುರುತನ್ನು ಯುವ ಪೀಳಿಗೆ ಜವಾಬ್ದಾರಿಯುತವಾಗಿ ಬಲಪಡಿಸುತ್ತಿದೆ. ಇದು ಹೃತ್ಪೂರ್ವಕ ಸಂತೃಪ್ತಿಯನ್ನು ನೀಡುತ್ತದೆ ಮತ್ತು ಹೆಮ್ಮೆಯ ಭಾವನೆಯನ್ನು ನೀಡುತ್ತದೆ. ಅಮೃತ ಕಾಲ್ನಲ್ಲಿ ಎಲ್ಲಾ ಯುವಕರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ತಡರಾತ್ರಿ ವಾರಾಣಸಿಯ ರಸ್ತೆ ಪರಿಶೀಲಿಸಿದ ಪ್ರಧಾನಿ ಮೋದಿ

ಕಾಶಿ ನಮ್ಮ ನಂಬಿಕೆಯ ತೀರ್ಥ ಕ್ಷೇತ್ರವಷ್ಟೇ ಅಲ್ಲ: ಮೋದಿ

‘ನಮ: ಪಾರ್ವತಿ ಪತಯೇ ಹರ ಹರ ಮಹಾದೇವ್’ ಎಂಬ ಘೋಷಣೆಯೊಂದಿಗೆ ಮೋದಿ ಭಾಷಣ ಆರಂಭಿಸಿದರು. ಕಾಶಿ ನಮ್ಮ ನಂಬಿಕೆಯ ತೀರ್ಥಕ್ಷೇತ್ರ ಮಾತ್ರವಲ್ಲ, ಇದು ಭಾರತದ ಸನಾತನ ಪ್ರಜ್ಞೆಯ ಜಾಗೃತಿ ಕೇಂದ್ರವಾಗಿದೆ. ಭಾರತದ ಸಮೃದ್ಧಿಯ ಕಥೆಯನ್ನು ಪ್ರಪಂಚದಾದ್ಯಂತ ಹೇಳುತ್ತಿದ್ದ ಕಾಲವೊಂದಿತ್ತು. ಅದರ ಹಿಂದೆ ಭಾರತದ ಆರ್ಥಿಕ ಶಕ್ತಿ ಮಾತ್ರವಲ್ಲ, ಹಿಂದೆ ನಮ್ಮ ಸಾಂಸ್ಕೃತಿಕ ಏಳಿಗೆ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಏಳಿಗೆಯೂ ಇತ್ತು. ಕಾಶಿಯಂತಹ ನಮ್ಮ ಯಾತ್ರಾ ಸ್ಥಳಗಳು ಮತ್ತು ವಿಶ್ವನಾಥ ಧಾಮದಂತಹ ನಮ್ಮ ದೇವಾಲಯಗಳು ರಾಷ್ಟ್ರದ ಪ್ರಗತಿಗೆ ತ್ಯಾಗದ ಸ್ಥಳಗಳಾಗಿವೆ ಎಂದು ಮೋದಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Fri, 23 February 24