PM Modi: ₹ 530 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಕೋಲ್ಕತ್ತಾದ ಸಿಎನ್‌ಸಿಐ 2ನೇ ಕ್ಯಾಂಪಸ್ಅನ್ನು ಇಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
Modi CNCI Inauguration: ಪ್ರಧಾನಿ ಮೋದಿ ಇಂದು (ಶುಕ್ರವಾರ) ಕೋಲ್ಕತ್ತಾದ ಸಿಎನ್‌ಸಿಐ ಆಸ್ಪತ್ರೆಯ ಎರಡನೇ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಪಂಜಾಬ್‌ನಲ್ಲಿ ನಡೆದ ಭದ್ರತಾ ಲೋಪದ ನಂತರ ಪ್ರಧಾನಿ ಕಾಣಿಸಿಕೊಳ್ಳುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕೋಲ್ಕತ್ತಾದಲ್ಲಿನ (Kolkata) ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (ಸಿಎನ್‌ಸಿಐ) ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು (ಶುಕ್ರವಾರ) ಉದ್ಘಾಟಿಸಲಿದ್ದಾರೆ. ಜನವರಿ 5 ರಂದು ಪಂಜಾಬ್‌ನಲ್ಲಿ (Punjab) ವರದಿಯಾದ ಭದ್ರತಾ ಲೋಪ ಪ್ರಕರಣದ ನಂತರ ಪ್ರಧಾನಿ ಭಾಗವಹಿಸುವ ಮೊದಲ ಕಾರ್ಯಕ್ರಮ ಇದಾಗಿದೆ. ಅಂದು ಪ್ರಧಾನಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ಮತ್ತು ಫಿರೋಜ್‌ಪುರದಲ್ಲಿ ₹42,750 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನಡೆಸಬೇಕಿತ್ತು. ಆದರೆ ಭದ್ರತಾ ಕಾರಣದಿಂದ ಪ್ರಧಾನಿ ಮರಳಿದ್ದರು. ಆ ಘಟನೆಯ ನಂತರ ಪ್ರಧಾನಿ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದು, ಇದು ವರ್ಚುವಲ್ ಮಾಧ್ಯಮದ ಮೂಲಕ ನಡೆಯಲಿದೆ.
ಗುರುವಾರ ಟ್ವಿಟರ್‌ನಲ್ಲಿ ಮೋದಿ ಈ ಕುರಿತು ಮಾಹಿತಿ ನೀಡಿದ್ದು, ಸಿಎನ್‌ಸಿಐ (CNCI) ಕ್ಯಾಂಪಸ್‌ನ ಉದ್ಘಾಟನಾ ಕಾರ್ಯಕ್ರಮವು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಹೇಳಿದ್ದಾರೆ. ‘‘ಈ ಸಂಸ್ಥೆಯು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ’’ ಎಂದು ಅವರು ನುಡಿದಿದ್ದಾರೆ.
At 1 PM tomorrow, 7th January, I will join the programme to inaugurate the second campus of Chittaranjan National Cancer Institute in Kolkata. This Institute will augment healthcare capacities in Eastern India and in the Northeast. https://t.co/M853GC1T2b
— Narendra Modi (@narendramodi) January 6, 2022
ಪ್ರಧಾನ ಮಂತ್ರಿ ಕಚೇರಿ (PMO) ಹೇಳಿಕೆಯ ಪ್ರಕಾರ, ಸಿಎನ್ಸಿಐಯ ಎರಡನೇ ಕ್ಯಾಂಪಸ್ಅನ್ನು ಮೋದಿಯವರ ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಮತ್ತು ನವೀಕರಿಸುವ ಮಹತ್ವಾಕಾಂಕ್ಷಿ ಚಿಂತನೆಯಡಿ ನಿರ್ಮಿಸಲಾಗಿದೆ. ‘‘ಸಿಎನ್ಸಿಐನಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ವಿಸ್ತರಣೆಯ ಅಗತ್ಯತೆ ಇತ್ತು. ಈ ಅಗತ್ಯವನ್ನು ಎರಡನೇ ಕ್ಯಾಂಪಸ್ ಮೂಲಕ ಪೂರೈಸಲಾಗುವುದು’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯ ವೈಶಿಷ್ಟ್ಯವೇನು? ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಸುಮಾರು ₹ 530 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಸುಮಾರು ₹ 400 ಕೋಟಿ ಮೊತ್ತವನ್ನು ಕೇಂದ್ರವು ಒದಗಿಸಿದೆ. ಉಳಿದ ಮೊತ್ತವನ್ನು ಪಶ್ಚಿಮ ಬಂಗಾಳ ಸರ್ಕಾರವು 75:25 ಅನುಪಾತದಲ್ಲಿ ನೀಡಿದೆ. ಈ ಆಸ್ಪತ್ರೆಯು ಕ್ಯಾನ್ಸರ್ ರೋಗನಿರ್ಣಯ, ಹಂತ, ಚಿಕಿತ್ಸೆ ಮತ್ತು ಆರೈಕೆಗಾಗಿ 400 ಹಾಸಿಗೆಗಳ ಸಮಗ್ರ ಕ್ಯಾನ್ಸರ್ ಕೇಂದ್ರವಾಗಿದೆ. ನ್ಯೂಕ್ಲಿಯರ್ ಮೆಡಿಸಿನ್ (ಪಿಇಟಿ), 3.0 ಟೆಸ್ಲಾ ಎಂಆರ್‌ಐ, ಎಂಡೋಸ್ಕೋಪಿ ಸೂಟ್ ಮತ್ತು ರೇಡಿಯೊನ್ಯೂಕ್ಲೈಡ್ ಥೆರಪಿ ಯೂನಿಟ್‌ನಂತಹ ಆಧುನಿಕ ಸೌಲಭ್ಯಗಳು ಸಿಎನ್‌ಸಿಐನ ಹೊಸ ಕ್ಯಾಂಪಸ್‌ನಲ್ಲಿವೆ.
ಇತ್ತೀಚೆಗೆ ಅಂದರೆ ಜನವರಿ 4 ರಂದು ಮೋದಿ ಅವರು ಮಣಿಪುರ ಮತ್ತು ತ್ರಿಪುರಾದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಚುನಾವಣಾ ಕಣದಲ್ಲಿರುವ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಅವರು ಐದು ರಾಷ್ಟ್ರೀಯ ಹೆದ್ದಾರಿಗಳು ಮತ್ತು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಸೇರಿದಂತೆ 22 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದರು. ನಂತರ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಮಹಾರಾಜ ಬಿರ್ ಬಿಕ್ರಮ್ (MBB) ವಿಮಾನ ನಿಲ್ದಾಣದಲ್ಲಿ ಸಮಗ್ರ ಟರ್ಮಿನಲ್ ಅನ್ನು ಉದ್ಘಾಟಿಸಿದ್ದರು.
ಇದನ್ನೂ ಓದಿ:
Published On - 9:00 am, Fri, 7 January 22