ಜ.4ಕ್ಕೆ ಪ್ರಧಾನಿ ಮೋದಿ ತ್ರಿಪುರಾ ಭೇಟಿ; ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಿದ ಬಿಎಸ್​ಎಫ್​

| Updated By: Lakshmi Hegde

Updated on: Jan 02, 2022 | 12:55 PM

ಕಾರ್ಯಕ್ರಮದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. 

ಜ.4ಕ್ಕೆ ಪ್ರಧಾನಿ ಮೋದಿ ತ್ರಿಪುರಾ ಭೇಟಿ; ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಿದ ಬಿಎಸ್​ಎಫ್​
ಪ್ರಧಾನಿ ನರೇಂದ್ರ ಮೋದಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಜನವರಿ 4ರಂದು ತ್ರಿಪುರಕ್ಕೆ ಭೇಟಿ ನೀಡಲಿದ್ದು, ತನ್ನಿಮಿತ್ತ ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಬಿಗಿ ಭದ್ರತೆ ಕಲ್ಪಿಸಿದ ಬಗ್ಗೆ ಗಡಿ ಭದ್ರತಾ ಪಡೆ (BSF) ದೃಢಪಡಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ಎಫ್​​ನ 120 ಬೆಟಾಲಿಯನ್​​​ ಕಮಾಂಡಂಟ್​ ರತ್ನೇಶ್ ಕುಮಾರ್​, ಸಾಮಾನ್ಯವಾಗಿ ಗಡಿ ಭಾಗಗಳಿಗೆ ವಿವಿಐಪಿಗಳು ಭೇಟಿ ನೀಡುವ ವೇಳೆ ಭದ್ರತೆಯನ್ನು ಹೆಚ್ಚಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಗಡಿ ಭಾಗಗಳಲ್ಲಿ ಗಸ್ತು ಪ್ರಮಾಣವನ್ನೂ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಜನವರಿ 4ರಂದು ಈಶಾನ್ಯ ರಾಜ್ಯ ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಅಗರ್ತಲಾದ ಮಹಾರಾಜ ಬೀರ್​ ಬಿಕ್ರಮ್​ ವಿಮಾನ ನಿಲ್ದಾಣದ ಹೊಸ ಟರ್ಮಿನಲ್​ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ಹೊಸ ಟರ್ಮಿನಲ್​ ಕಟ್ಟಡ ಉದ್ಘಾಟನೆಯೊಂದಿಗೆ ಈ ಬೀರ್​ ಬಿಕ್ರಮ್​ ವಿಮಾನ ನಿಲ್ದಾಣವೂ ಕೂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರುತ್ತದೆ. 3400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್ ಕಟ್ಟಡ ಉದ್ಘಾಟನೆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಗರ್ತಲಾದ ಸ್ವಾಮಿ ವಿವೇಕಾನಂದ ಸ್ಟೇಡಿಯಂನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.  ಪ್ರಧಾನಿ ಭೇಟಿ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್​ ಕುಮಾರ್ ದೇಬ್​, ತ್ರಿಪುರ ವಿಮಾನ ನಿಲ್ದಾಣದ ಟರ್ಮಿನಲ್​ ಕಟ್ಟಡ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವುದನ್ನು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.  ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷ ಅರವಿಂದ್ ಸಿಂಗ್​ ಡಿಸೆಂಬರ್​ 15ರಂದು ತ್ರಿಪುರಕ್ಕೆ ಭೇಟಿ ನೀಡಿ, ಅಲ್ಲಿ ಟರ್ಮಿನಲ್​ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ್ದರು.  ಇದು ಸುಮಾರು 1200 ಪ್ರಯಾಣಿಕರು ಒಂದು ಬಾರಿಗೆ ಸೇರಬಹುದಾದ ವಿಮಾನ ನಿಲ್ದಾಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿ ಇದೆಯೇ, ತಾಕತ್ತಿದ್ದರೆ ಬಹಿರಂಗವಾಗಿ ಸ್ಪಷ್ಟಪಡಿಸಲಿ; ಸಿಟಿ ರವಿ ಸವಾಲ್