
ನವದೆಹಲಿ, ಆಗಸ್ಟ್ 30: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 137ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಭಾರತೀಯರ ನವೀನ ಆಲೋಚನೆಗಳು, ಇತಿಹಾಸದ ಡಿಜಿಟಲೀಕರಣ, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ, ಮಹಿಳಾ ಸಬಲೀಕರಣ ಹಾಗೂ ನವೋದ್ಯಮ ಕೃಷಿಯ ಯಶೋಗಾಥೆಗಳನ್ನು ಹಂಚಿಕೊಂಡರು.
ಮುಂಬೈ ಮೂಲದ ಕೃಷ್ಣ ಶೇಷಾದ್ರಿ ಅವರು ಆರಂಭಿಸಿರುವ www.bharatrajya.comವೆಬ್‌ಸೈಟ್ ಅನ್ನು ಪ್ರಧಾನಿ ಶ್ಲಾಘಿಸಿದರು. ಈ ಪೋರ್ಟಲ್‌ನಲ್ಲಿ ಯಾವುದೇ ವರ್ಷವನ್ನು ಆಯ್ಕೆ ಮಾಡಿದರೆ, ಆ ಕಾಲಘಟ್ಟದಲ್ಲಿ ಭಾರತದ ಯಾವ ಪ್ರದೇಶವನ್ನು ಯಾವ ರಾಜವಂಶ ಆಳುತ್ತಿತ್ತು (ಚೋಳ, ಪಲ್ಲವ, ತ್ರಿಭುವನ ಮಹಾದೇವಿ, ಹೇಮು ಮುಂತಾದವರ ಇತಿಹಾಸ) ಎಂಬ ವಿವರ ಸುಲಭವಾಗಿ ಸಿಗುತ್ತದೆ.
ದೇಶದ ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸಲು ಕಲಾಕಾರರು, ಸಂಗೀತಗಾರರು, ವಿದ್ಯಾರ್ಥಿಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಪ್ರಭಾವಿ ಹಾಡುಗಳು, ಬೀದಿ ನಾಟಕಗಳು ಹಾಗೂ ಆಕರ್ಷಕ ಘೋಷಣೆಗಳನ್ನು (Slogans) ರೂಪಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು.
ಮತ್ತಷ್ಟು ಓದಿ: Mann Ki Baat: ಕರ್ನಾಟಕದ ಹುಲಿ ವೇಷ ಕುಣಿತ ಹಾಡಿ ಹೊಗಳಿದ ಪ್ರಧಾನಿ ಮೋದಿ
ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಬಲ ನೀಡುವ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಂಗಳೂರಿನ ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಉಲ್ಲೇಖಿಸಿದರು. ಜತೆಗೆ ತಾನು ದುಡಿದಿರುವ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಿದ್ದು, ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಸಾಕ್ಷಿ ಎಂದರು.
ಚಿಕ್ಕಮಗಳೂರಿನ ಅವಕಾಡೊ ಟ್ರೆಂಡ್: ಕಾಫಿ ಮತ್ತು ಕಾಳುಮೆಣಸಿನ ತೋಟಗಳ ನಡುವೆ ಪರ್ಯಾಯ ಬೆಳೆಯಾಗಿ ಅವಕಾಡೊ (ಬೆಣ್ಣೆಹಣ್ಣು) ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ಚಿಕ್ಕಮಗಳೂರಿನ ರೈತರ ಯಶಸ್ಸನ್ನು ಶ್ಲಾಘಿಸಿದರು.
ಜಾಗತಿಕ ‘ಸೂರ್ಯಪಥ ತಿರಂಗಾ’: ಈ ಬಾರಿಯ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಬರೋಬ್ಬರಿ ೮ ಕೋಟಿ ಸೆಲ್ಫಿಗಳು ಅಪ್‌ಲೋಡ್ ಆಗಿದ್ದು, ಫಿಜಿಯ ಸುವಾದಿಂದ ಹಿಡಿದು ಅಮೆರಿಕ, ಯುರೋಪ್‌ನಾದ್ಯಂತ ತ್ರಿವರ್ಣ ಧ್ವಜ ರಾರಾಜಿಸಿದೆ.
ವಿದ್ಯಾರ್ಥಿಗಳಿಂದ ಬಾಹ್ಯಾಕಾಶ ಸಾಧನೆ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ೧೦೦ ವಿದ್ಯಾರ್ಥಿನಿಯರು ‘ಮಿಷನ್ ಶಕ್ತಿ ಸ್ಯಾಟ್’ ಅಡಿಯಲ್ಲಿ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಕಳುಹಿಸಲು ಸಜ್ಜಾಗುತ್ತಿರುವುದನ್ನು ಪ್ರಧಾನಿ ಹೆಮ್ಮೆಯಿಂದ ಪ್ರಸ್ತಾಪಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:48 am, Sun, 30 August 26