‘ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಮಾತು ಸ್ಫೂರ್ತಿದಾಯಕವಾಗಿತ್ತು’-ವ್ಯಂಗಭರಿತವಾಗಿ ಹೊಗಳಿದ ಪಿ.ಚಿದಂಬರಂ
G7 Summit 2021: ಜಿ7 ಶೃಂಗಸಭೆಯಲ್ಲಿ ಈ ಬಾರಿ ಅಧ್ಯಕ್ಷತೆ ವಹಿಸಿದ್ದ ಯುಕೆ, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ದೇಶಗಳ ನಾಯಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿತ್ತು. ಈ ಜಿ7 ಶೃಂಗಸಭೆಯಲ್ಲಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಮಾತನಾಡಿದ್ದರು.
ದೆಹಲಿ: ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಭಾಷಣ ಮಾಡಿದ್ದನ್ನು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೊಗಳಿದ್ದಾರೆ. ಜಿ7 ಶೃಂಗಸಭೆಯಲ್ಲಿ ಮೋದಿಯವರ ಮಾತು ತುಂಬ ಸ್ಫೂರ್ತಿದಾಯಕವಾಗಿತ್ತು ಮತ್ತು ವಿಡಂಬನಾತ್ಮಕವಾಗಿತ್ತು ಎಂದು ಹೇಳಿದ್ದಾರೆ. ಹೀಗಂದ ಮಾತ್ರಕ್ಕೆ ಪಿ.ಚಿಂದಬರಂ ಮೋದಿಯವರನ್ನು ಹೊಗಳಿದ್ದಾರೆ ಎಂದುಕೊಳ್ಳಬೇಡಿ. ಅವರು ತೀರ ವ್ಯಂಗ್ಯಭರಿತವಾಗಿ ಹೀಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಧಾನಿ ಮೋದಿಯವರು ವಿಶ್ವಕ್ಕೆ ಏನನ್ನು ಬೋಧಿಸುತ್ತಾರೋ.. ಅದನ್ನು ಭಾರತದಲ್ಲೂ ಜಾರಿಗೊಳಿಸಬೇಕು. ಇಲ್ಲದಿದ್ದರೆ ಅವರು ಜಗತ್ತಿನ ಎದುರು ಆಡುವ ಮಾತುಗಳು ತೀರ ವಿಡಂಬನಾತ್ಮಕ, ವಿಪರ್ಯಾಸ ಎನ್ನಿಸುತ್ತವೆ. ಇದೀಗ ನೋಡಿ ಜಿ7 ಸಭೆಯಲ್ಲಿ ಭೌತಿಕವಾಗಿ ಭಾಗವಹಿಸದ ಅತಿಥಿಯೆಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ. ಇದನ್ನು ನೋಡಲು ನಿಜಕ್ಕೂ ಬೇಸರ ಎನ್ನಿಸುತ್ತದೆ. ಆದರೆ ಹೀಗೆ ಯಾಕಾಯಿತು ಎಂಬುದನ್ನು ಮೋದಿಯವರು ಅವರಿಗೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಕೊರೊನಾ ಸೋಂಕಿನ ವಿರುದ್ಧ ಭಾರತ ವಿಭಿನ್ನವಾಗಿ ಹೋರಾಡುತ್ತಿದೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಶೃಂಗಸಭೆಯಲ್ಲಿ ಮಾತನಾಡುವಂತೆ ಆಹ್ವಾನಿಸಲಾಯಿತು. ಆದರೆ ಅತಿ ಹೆಚ್ಚು ಸೋಂಕಿನ ಪ್ರಮಾಣ ಮತ್ತು ಅತಿ ಕಡಿಮೆ ಲಸಿಕೆ ವಿತರಣೆ ನಡೆದ ದೇಶವೆಂದರೆ ಅದು ನಮ್ಮದೇ ಎಂದು ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಜಿ7 ಶೃಂಗಸಭೆಯಲ್ಲಿ ಈ ಬಾರಿ ಅಧ್ಯಕ್ಷತೆ ವಹಿಸಿದ್ದ ಯುಕೆ, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ದೇಶಗಳ ನಾಯಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿತ್ತು. ಈ ಜಿ7 ಶೃಂಗಸಭೆಯಲ್ಲಿ ವರ್ಚ್ಯುವಲ್ ಆಗಿ ಮಾತನಾಡಿದ್ದ ನರೇಂದ್ರ ಮೋದಿಯವರು, ಸರ್ವಾಧಿಕಾರ, ಭಯೋತ್ಪಾದನೆ, ಹಿಂಸಾತ್ಮಕ ಉಗ್ರವಾದ ಮತ್ತು ಆರ್ಥಿಕ ದಬ್ಬಾಳಿಕೆಗಳನ್ನು ಹತ್ತಿಕ್ಕುವಲ್ಲಿ ಭಾರತ ಜಿ7 ಮತ್ತು ಅದರ ಮಿತ್ರ ಪಕ್ಷಗಳೊಂದಿಗೆ ಸದಾ ಮೈತ್ರಿ ಮಾಡಿಕೊಳ್ಳುತ್ತದೆ ಎಂದೂ ಹೇಳಿದ್ದರು.
ಇದನ್ನೂ ಓದಿ: G7 Summit 2021: ಜಿ7 ಶೃಂಗಸಭೆಯಲ್ಲಿ ‘ಒಂದು ಭೂಮಿ, ಒಂದು ಆರೋಗ್ಯ’ ಮಂತ್ರ ಉಚ್ಛರಿಸಿದ ಪ್ರಧಾನಿ ನರೇಂದ್ರ ಮೋದಿ
PM Modis speech at G7 meeting inspiring said Congress leader P Chidambaram