ನೌಶೇರಾ ಗಡಿ ಪ್ರದೇಶ ತಲುಪಿದ ಪ್ರಧಾನಿ ಮೋದಿ; ಯೋಧರೊಂದಿಗೆ ದೀಪಾವಳಿ ಆಚರಣೆ
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 10.30ರ ಹೊತ್ತಿಗೇ ರಾಜೌರಿಯನ್ನು ತಲುಪಿದ್ದಾರೆ. ಹಾಗೇ, ಗಡಿಯಲ್ಲಿರುವ ಔಟ್ಪೋಸ್ಟ್ಗೆ ತೆರಳಿ ಅಲ್ಲಿನ ಸೈನಿಕರೊಟ್ಟಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ.
ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಜಮ್ಮುವಿನ ರಾಜೌರಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಅಲ್ಲಿಂದ ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಣೆ ನಡೆಸಲು ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ನಿನ್ನೆಯೇ ಜಮ್ಮುವಿಗೆ ಆಗಮಿಸಿದ್ದು, ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 10.30ರ ಹೊತ್ತಿಗೇ ರಾಜೌರಿಯನ್ನು ತಲುಪಿದ್ದಾರೆ. ಹಾಗೇ, ಗಡಿಯಲ್ಲಿರುವ ಔಟ್ಪೋಸ್ಟ್ಗೆ ತೆರಳಿ ಅಲ್ಲಿನ ಸೈನಿಕರೊಟ್ಟಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೀಗೆ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಣೆ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. 2014ರಲ್ಲಿ ಪ್ರಧಾನಮಂತ್ರಿಯಾದಾಗಿನಿಂದಲೂ ದೀಪಾವಳಿಯನ್ನು ಯೋಧರೊಂದಿಗೆ ಆಚರಣೆ ಮಾಡುತ್ತಿದ್ದಾರೆ. ಈ ಹಿಂದಿನ ದೀಪಾವಳಿಯನ್ನು ಅವರು ಉತ್ತರಾಖಂಡ್, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ಜಮ್ಮು-ಕಾಶ್ಮೀರದ ಗಡಿಗಳಲ್ಲಿ ಯೋಧರೊಂದಿಗೆ ಆಚರಿಸಿದ್ದರು. 2019ರಲ್ಲಿಯೂ ರಾಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.
ಇಂದು ಯೋಧರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸುವ ವೇಳೆ ಮಿಲಿಟರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು. ಇನ್ನು ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಲೇ ಇದೆ. ಈ ಕಾರ್ಯಾಚರಣೆ ವೇಳೆ ಹಲವು ಯೋಧರೂ ಮೃತಪಟ್ಟಿದ್ದಾರೆ. 4 ತಿಂಗಳಲ್ಲಿ 14 ಯೋಧರು ಹುತಾತ್ಮರಾಗಿದ್ದಾರೆ. ಅಲ್ಲೀಗ ಇಂಥ ಸನ್ನಿವೇಶ ಇರುವ ಹೊತ್ತಲ್ಲಿ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಜಮ್ಮು-ಕಾಶ್ಮೀರ ಪ್ರವಾಸ ಹಮ್ಮಿಕೊಂಡು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೇಶದ ಜನರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಬೆಳಗ್ಗೆಯೇ ಟ್ವೀಟ್ ಮಾಡಿರುವ ಅವರು, ದೇಶದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಹೊತ್ತು ತರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.
Published On - 11:37 am, Thu, 4 November 21