ನವದೆಹಲಿ: ಕಳೆದೊಂದು ವಾರದಿಂದ ಭಾರತದಲ್ಲಿ ಕೊವಿಡ್ ಕೇಸುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿ ಮೋದಿ, ಸ್ಥಳೀಯವಾಗಿ ಕಂಟೇನ್ಮೆಂಟ್ ನಿಯಮ ಕಡ್ಡಾಯ ಪಾಲಿಸಿ. ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ ಹೆಚ್ಚು ಆದ್ಯತೆ ನೀಡಿ. ಹೋಂ ಐಸೋಲೇಷನ್‌ನಲ್ಲಿ ಟ್ರ್ಯಾಕಿಂಗ್, ಟ್ರೀಟ್ಮೆಂಡ್ನತ್ತ ಗಮನ ಹರಿಸಿ ಎಂದು ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಟೆಲಿ ಮೆಡಿಸಿನ್ ಸೌಲಭ್ಯ ಒದಗಿಸಿದೆ. ಕೊವಿಡ್ ಸೋಂಕಿತರಿಗೆ ಟೆಲಿ ಮೆಡಿಸಿನ್ ಸೌಲಭ್ಯ ಸಹಕಾರಿಯಾಗಿದೆ. ಆರೋಗ್ಯ ಕ್ಷೇತ್ರದ ತುರ್ತು ಮೂಲಸೌಲಭ್ಯ ಹೆಚ್ಚಿಸಲಾಗಿದೆ. ಎಲ್ಲಾ ರೀತಿಯ ಪ್ರಭೇದ ಎದುರಿಸಲು ಕೇಂದ್ರ ಸಿದ್ಧವಿದೆ. ಎಲ್ಲಾ ರಾಜ್ಯಗಳ ಜೊತೆ ಸಹಕರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಇಂತಹ ಸಂದರ್ಭದಲ್ಲಿ ಆಯುರ್ವೇದ ಪದ್ಧತಿ ಸಹಕಾರಿ. ಸಾಂಪ್ರದಾಯಿಕ, ಮನೆ ಔಷಧಗಳು ಉಪಯೋಗಕಾರಿಯಾಗಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಎಲ್ಲರೂ ಸಹಕರಿಸಿ ಎಂದು ಸಭೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು 15ರಿಂದ 18 ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ ಹಾಕುವಿಕೆಯನ್ನು ವೇಗಗೊಳಿಸಲು ಪ್ರಧಾನ ಮಂತ್ರಿ ಮೋದಿ ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದ್ದಾರೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ), ಚರಂಜಿತ್ ಚನ್ನಿ (ಪಂಜಾಬ್), ಎನ್ ರಂಗಸ್ವಾಮಿ (ಪುದುಚೇರಿ), ಭೂಪೇಶ್ ಬಘೇಲ್ (ಛತ್ತೀಸ್‌ಗಢ) ಮತ್ತು ಬಿಪ್ಲಬ್ ದೇಬ್ (ತ್ರಿಪುರ) ಪಾಲ್ಗೊಂಡಿದ್ದರು. ಹಾಗೇ, ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಬಸವರಾಜ ಬೊಮ್ಮಾಯಿ (ಕರ್ನಾಟಕ) ಮತ್ತು ಜೋರಮ್ತಂಗ (ಮಿಜೋರಾಂ) ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Surge in Covid Cases: ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
Published On - 6:38 pm, Thu, 13 January 22