Surge in Covid Cases: ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿ ಪರಾಮರ್ಶಿಸಿದರು.
ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿ ಪರಾಮರ್ಶಿಸಿದರು. ಕಳೆದ 24 ಗಂಟೆಗಳಲ್ಲಿ ದಿನವೊಂದಕ್ಕೆ 1.6 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಏಳು ದಿನಗಳ ಹಿಂದೆ 27,553 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಡಿಸೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯೊಂದನ್ನು ನಡೆಸಿ, ಕೊರೊನಾ ಸೋಂಕಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅಧಿಕಾರಿಗಳಿಗೆ ಎಚ್ಚರ ಮತ್ತು ಜಾಗೃತವಾಗಿರುವಂತೆ ಸೂಚಿಸಿದ್ದರು.
ಜನರು ಕೊವಿಡ್ ಸುರಕ್ಷೆಯ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂದು ಪ್ರಧಾನಿ ಎಚ್ಚರಿಸಿದ್ದರು. ಪ್ರಧಾನಿ ಈ ಸಭೆ ನಡೆಸಿದ ನಂತರದ ದಿನಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಸಾಗಿವೆ. ಪ್ರತಿದಿನದ ಸೋಂಕು ಪ್ರಕರಣಗಳು ಒಂದು ಲಕ್ಷ ದಾಟುತ್ತಿದೆ. ಬೆಂಗಳೂರು, ಮುಂಬೈ ಮತ್ತು ಬೆಂಗಳೂರು ಮಹಾನಗರಗಳ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದು ಸರ್ಕಾರಕ್ಕೆ ಸಮಸ್ಯೆ ತಂದೊಡ್ಡಿದೆ.
ಇನ್ನೊಂದು ತಿಂಗಳಲ್ಲಿ ಚುನಾವಣೆ ಎದುರಿಸಲಿರುವ, ಭಾರತದಲ್ಲಿ ಅತಿಹೆಚ್ಚು ಜನಸಂದಣಿ ಇರುವ ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಫೆಬ್ರುವರಿ 10ರಿಂದ ವಿವಿಧ ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆ ಪರಿಶೀಲಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿತ್ತು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಮಾವೇಶ, ರೋಡ್ಶೋ ಮತ್ತು ಸಭೆಗಳನ್ನು ಜನವರಿ 15ರವರೆಗೆ ನಡೆಸಬಾರದು ಎಂದು ಹೇಳಿದೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ರಾಜಕೀಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸೂಚಿಸಿದೆ. ಪ್ರತಿ ಮತಗಟ್ಟೆಗೆ 1,250 ಜನರು ಇರುವಂತೆ ಎಚ್ಚರಹಿಸಲಾಗಿದ್ದು, ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಚುನಾವಣಾ ಸಿಬ್ಬಂದಿ ಮತ್ತು ಮತದಾರರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ಹೇಳಿದೆ. ಒಮಿಕ್ರಾನ್ ರೂಪಾಂತರಿಯು ಡೆಲ್ಟಾ ರೂಪಾಂತರಿಗಿಂತಲೂ ಮೂರುಪಟ್ಟು ಹೆಚ್ಚು ತೀವ್ರವಾಗಿ ಸೋಂಕು ಉಂಟು ಮಾಡಬಲ್ಲದು ಎಂದು ಸರ್ಕಾರವು ಎಚ್ಚರಿಸಿದೆ.
ಇದನ್ನೂ ಓದಿ: ಒಮಿಕ್ರಾನ್ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಕೊವಿಡ್ ಉಲ್ಬಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆ ಇದನ್ನೂ ಓದಿ: ವೈದ್ಯರಿಗೆ ಕೊವಿಡ್ ಪಾಸಿಟಿವ್; ಪಟನಾ ಏಮ್ಸ್ನಲ್ಲಿ ಕೆಲವು ಶಸ್ತ್ರಚಿಕಿತ್ಸೆ ಸ್ಥಗಿತ