Narendra Modi: ಬ್ರಿಟನ್ ಪ್ರಧಾನಿ ಸುನಕ್‌ಗೆ ಮೋದಿ ದೂರವಾಣಿ ಕರೆ; ರಾಯಭಾರ ಕಚೇರಿಗಳಿಗೆ ರಕ್ಷಣೆ ಕಲ್ಪಿಸಲು ಆಗ್ರಹ

| Updated By: ಡಾ. ಭಾಸ್ಕರ ಹೆಗಡೆ

Updated on: Apr 14, 2023 | 11:09 AM

ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ ಪ್ರಧಾನಿ ಮೋದಿ ಗುರುವಾರ ರಾತ್ರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದು ವ್ಯಾಪಾರ, ಆರ್ಥಿಕ ಕ್ಷೇತ್ರ ಸೇರಿದಂತೆ ವಿವಿಧ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಬ್ರಿಟನ್‌ನಲ್ಲಿನ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗಳ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾಪವಾಯಿತು.

Narendra Modi: ಬ್ರಿಟನ್ ಪ್ರಧಾನಿ ಸುನಕ್‌ಗೆ ಮೋದಿ ದೂರವಾಣಿ ಕರೆ; ರಾಯಭಾರ ಕಚೇರಿಗಳಿಗೆ ರಕ್ಷಣೆ ಕಲ್ಪಿಸಲು ಆಗ್ರಹ
ರಿಷಿ ಸುನಕ್ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Follow us on

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ (Rishi Sunak) ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ರಾತ್ರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದು ವ್ಯಾಪಾರ, ಆರ್ಥಿಕ ಕ್ಷೇತ್ರ ಸೇರಿದಂತೆ ವಿವಿಧ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಬ್ರಿಟನ್‌ನಲ್ಲಿನ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗಳ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾಪವಾಯಿತು. ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಆಗ್ರಹಿಸಿದ ಮೋದಿ, ದಾಳಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಿಷಿ ಸುನಕ್, ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

‘ಭಾರತ-ಬ್ರಿಟನ್​ ಮಾರ್ಗಸೂಚಿ 2030’ರ ಭಾಗವಾಗಿ ಹಲವಾರು ದ್ವಿಪಕ್ಷೀಯ ವಿಚಾರಗಳಿಗೆ ಸಂಬಂಧಿಸಿ ಆಗಿರುವ ಪ್ರಗತಿಯ ಬಗ್ಗೆ ಉಭಯ ನಾಯಕರು ಪರಾಮರ್ಶೆ ನಡೆಸಿದರು. ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಹಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಶೀಘ್ರ ನಿರ್ಣಯ ಕೈಗೊಳ್ಳುವ ಬಗ್ಗೆ ಉಭಯ ನಾಯಕರು ಒಲವು ವ್ಯಕ್ತಪಡಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಆರ್ಥಿಕ ವಂಚನೆ ಪ್ರಕರಣ ಎದುರಿಸುತ್ತಿರುವ ಹಾಗೂ ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವವರ ವಿಷಯವನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಆರ್ಥಿಕ ಅಪರಾಧಿಗಳನ್ನು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರಾಗುವಂತೆ ಮಾಡುವ ನಿಟ್ಟಿನಲ್ಲಿ ಅವರನ್ನು ಗಡಿಪಾರು ಮಾಡುವ ವಿಚಾರದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ಕೋರಿದರು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿತಮಿಳು ಹೊಸ ವರ್ಷಾಚರಣೆಯಲ್ಲಿ ಮೋದಿ ಭಾಗಿ; ತಮಿಳುನಾಡಿನ ಸಂಸ್ಕೃತಿಯನ್ನು ಹಾಡಿ ಹೊಗಳಿದ ಪ್ರಧಾನಿ

2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವಂತೆ ಸುನಕ್ ಅವರನ್ನು ಮೋದಿ ದೂರವಾಣಿ ಮಾತುಕತೆ ವೇಳೆ ಆಹ್ವಾನಿಸಿದರು. ಇದೇ ವೇಳೆ, ಭಾರತದ ಜಿ20 ಅಧ್ಯಕ್ಷತೆಯಲ್ಲಿ ಆಗಿರುವ ಪ್ರಗತಿಯನ್ನು ರಿಷಿ ಸುನಕ್ ಶ್ಲಾಘಿಸಿದರು. ಭಾರತದ ಉಪಕ್ರಮಗಳು ಮತ್ತು ಅವುಗಳ ಯಶಸ್ಸಿಗೆ ಬ್ರಿಟನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪುನರುಚ್ಚರಿಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಉತ್ತರ ಭಾರತದಲ್ಲಿ ಆಚರಿಸುವ ಬೈಸಾಖಿ ಹಬ್ಬದ ಮುನ್ನಾದಿನದಂದು ಸುನಕ್ ಮತ್ತು ಬ್ರಿಟನ್​​ನಲ್ಲಿರುವ ಭಾರತೀಯ ಸಮುದಾಯಕ್ಕೆ ಮೋದಿ ಅವರು ಶುಭಾಶಯಗಳನ್ನು ತಿಳಿಸಿದರು ಎಂದೂ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Thu, 13 April 23