ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

| Updated By: ganapathi bhat

Updated on: Jun 26, 2021 | 9:02 PM

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಅಭಿವೃದ್ದಿ ಬಗ್ಗೆ ತಮ್ಮ ಕನಸಿನ ಯೋಜನೆಗಳನ್ನು ಎಲ್ಲರೆದೆರು ಬಿಚ್ಚಿಟ್ಟಿದ್ದಾರೆ. ಅಯೋಧ್ಯೆಯು ಜಾಗತಿಕ ಆಧ್ಯಾತ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿ ಅಭಿವೃದ್ದಿಯಾಗಬೇಕು ಎನ್ನುವುದು ಪ್ರಧಾನಿ ಮೋದಿ ಬಯಕೆಯಾಗಿದೆ.

ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ದೆಹಲಿ: ಅಯೋಧ್ಯೆಯ ಅಭಿವೃದ್ದಿ, ಭವ್ಯ, ಸುಂದರ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು (ಜೂನ್ 26) ಪರಿಶೀಲನಾ ಸಭೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮುಂದಿನ 3ರಿಂದ 4 ವರ್ಷದಲ್ಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ. ಅಯೋಧ್ಯೆಯ ಅಭಿವೃದ್ದಿ ಬಗ್ಗೆ ತಮ್ಮ ಕನಸಿನ ಪ್ಲ್ಯಾನ್ ಏನು ಎನ್ನುವುದನ್ನು ಪ್ರಧಾನಿ ಮೋದಿ ಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ.

ಅಯೋಧ್ಯೆಯ ಸಮಗ್ರ ಅಭಿವೃದ್ದಿಯ ಪ್ಲ್ಯಾನ್ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇವತ್ತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವಪ್ರಸಾದ್ ಮೌರ್ಯ, ದಿನೇಶ್ ಶರ್ಮಾ, ಸಚಿವರು, ಅಧಿಕಾರಿಗಳು ಸೇರಿದಂತೆ 13 ಮಂದಿ ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಅಭಿವೃದ್ದಿ ಬಗ್ಗೆ ತಮ್ಮ ಕನಸಿನ ಯೋಜನೆಗಳನ್ನು ಎಲ್ಲರೆದೆರು ಬಿಚ್ಚಿಟ್ಟಿದ್ದಾರೆ. ಅಯೋಧ್ಯೆಯು ಜಾಗತಿಕ ಆಧ್ಯಾತ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿ ಅಭಿವೃದ್ದಿಯಾಗಬೇಕು ಎನ್ನುವುದು ಪ್ರಧಾನಿ ಮೋದಿ ಬಯಕೆಯಾಗಿದೆ.

ಮುಂದಿನ ಜನಾಂಗಕ್ಕೆ ಜೀವನದಲ್ಲಿ ಒಮ್ಮೆಯಾದರೂ, ಅಯೋಧ್ಯೆಗೆ ಭೇಟಿ ನೀಡುವ ಆಸೆ ಬರುವಂತೆ ಅಭಿವೃದ್ದಿ ಮಾಡಬೇಕು. ಅಯೋಧ್ಯೆಯು ಪ್ರತಿಯೊಬ್ಬ ಭಾರತೀಯನ ಸಾಂಸ್ಕೃತಿಕ ಆತ್ಮಸಾಕ್ಷಿಯನ್ನು ಎಚ್ಚರಿಸುವಂತಿರಬೇಕು. ಅಯೋಧ್ಯೆಯು ಆಧ್ಯಾತ್ಮಿಕ ಹಾಗೂ ಸುಂದರ ನಗರವಾಗಬೇಕು. ನಮ್ಮ ಅತ್ಯುತ್ತಮ ಸಂಪ್ರದಾಯ ಹಾಗೂ ಹೊಸ ಅಭಿವೃದ್ಧಿಯ ರೂಪಾಂತರವಾಗಬೇಕು. ಅಯೋಧ್ಯೆಯು ಪ್ರತಿಯೊಬ್ಬ ಭಾರತೀಯನ ಹಾಗೂ ಭಾರತೀಯರಿಗಾಗಿ ಇರುವ ನಗರವಾಗಬೇಕು. ಅಯೋಧ್ಯೆಯು ಭವಿಷ್ಯದ ಮೂಲಸೌಕರ್ಯಗಳನ್ನು ಹೊಂದಿ, ಪ್ರವಾಸಿಗರು, ಯಾತ್ರಾರ್ಥಿಗಳು ಸೇರಿದಂತೆ ಎಲ್ಲರಿಗೂ ಅನುಕೂಲತೆಯನ್ನು ಒದಗಿಸಬೇಕು. ಪ್ರಭು ಶ್ರೀರಾಮನಿಗೆ ಹೇಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇತ್ತೋ ಹಾಗೆಯೇ, ಅಯೋಧ್ಯೆಯ ಅಭಿವೃದ್ದಿ ಕಾರ್ಯಗಳು ಜನರ ಆರೋಗ್ಯಪೂರ್ಣ ಸಹಭಾಗಿತ್ವದಲ್ಲಿ ನಡೆಯಬೇಕು ಎಂದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಮುಂದಿನ ಮೂರು ವರ್ಷದಲ್ಲಿ ಭವ್ಯ, ಸುಂದರ, ಅದ್ಭುತ ಶ್ರೀರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಪ್ಲ್ಯಾನ್ ಸಿದ್ದವಾಗಿದೆ. ಈ ವರ್ಷದ ಆಕ್ಟೋಬರ್ ನೊಳಗೆ ರಾಮಮಂದಿರದ ತಳಪಾಯ (ಫೌಂಡೇಷನ್) ನಿರ್ಮಿಸುವ ಕಾರ್ಯ ಪೂರ್ಣವಾಗಲಿದೆ. ಅಯೋಧ್ಯೆಯ ಸಮಗ್ರ ಬದಲಾವಣೆಗೆ ಯುಪಿ ಸರ್ಕಾರ ಪ್ಲ್ಯಾನ್ ಸಿದ್ದಪಡಿಸಿದೆ. ಸಾವಿರಾರು ಜನರ ಅಭಿಪ್ರಾಯ ಪಡೆದು ವಿಷನ್ ಡಾಕ್ಯೂಮೆಂಟ್ ಸಿದ್ದಪಡಿಸಲಾಗಿದೆ.

ಅಯೋಧ್ಯೆಯಲ್ಲಿ ಈಗ ಶ್ರೀರಾಮಮಂದಿರ ಮಾತ್ರವಲ್ಲ, ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ಶುರುವಾಗಿವೆ. ಅಯೋಧ್ಯೆಯ ರೂಪುರೇಷೆಯನ್ನು ಬದಲಾಯಿಸಿ ಸಮಗ್ರ ಅಭಿವೃದ್ದಿಗೆ ನೀಲನಕಾಶೆಯನ್ನು ಯುಪಿ ಸರ್ಕಾರ ಸಿದ್ದಪಡಿಸಿದೆ. ಯುಪಿ ಸರ್ಕಾರದ ಪ್ಲ್ಯಾನ್ ಪ್ರಕಾರ, ಅಯೋಧ್ಯೆಯಲ್ಲಿ ವೈದಿಕ ನಗರ, ತೀರ್ಥ ನಗರ, ಹೆರಿಟೇಜ್ ಸಿಟಿ, ಸಾಮರಸ ಅಯೋಧ್ಯೆ, ಸ್ಮಾರ್ಟ್ ಸಿಟಿ ನಿರ್ಮಾಣವಾಗಲಿವೆ. 1,200 ಎಕರೆ ವಿಶಾಲ ಭೂ ಪ್ರದೇಶದಲ್ಲಿ ವೈದಿಕ್ ಸಿಟಿಯನ್ನು ನಿರ್ಮಾಣ ಮಾಡಲಾಗುತ್ತೆ. ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿರುವಂತೆ ಬೇರೆ ಬೇರೆ ದೇಶಗಳು ಹಾಗೂ ಭಾರತದ ವಿವಿಧ ರಾಜ್ಯಗಳ ಭವನವನ್ನು ನಿರ್ಮಾಣ ಮಾಡಲಾಗುತ್ತೆ.

ಈ ಭವನಗಳಲ್ಲಿ ವಿದೇಶ, ವಿವಿಧ ರಾಜ್ಯಗಳಿಂದ ಬರುವ ಭಕ್ತರು, ಪ್ರವಾಸಿಗಳು ತಂಗುವ ವ್ಯವಸ್ಥೆ ಮಾಡಲಾಗುತ್ತೆ. ಅಯೋಧ್ಯೆಯಲ್ಲಿ ಸೋಲಾರ್ ಸಿಟಿಯನ್ನು ನಿರ್ಮಿಸಲಾಗುತ್ತೆ. ಅಯೋಧ್ಯೆಯನ್ನು ಜಾಗತಿಕ ಧಾರ್ಮಿಕ ಹಾಗೂ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸಬೇಕು ಎನ್ನುವುದು ಯುಪಿ ಸರ್ಕಾರ ಸಿದ್ದಪಡಿಸಿರುವ ಬ್ಲೂ ಪ್ರಿಂಟ್ ನಲ್ಲಿರುವ ಪ್ರಮುಖ ಅಂಶ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತೆ. ಇದಕ್ಕೆ ಕೇಂದ್ರ ಸರ್ಕಾರ 250 ಕೋಟಿ ರೂ ಹಣ ನೀಡಿದರೆ, ಯುಪಿ ಸರ್ಕಾರವು 1300 ಕೋಟಿ ರೂ. ಹಣ ನೀಡಲಿದೆ. ಅಯೋಧ್ಯೆಯ ಪ್ರವೇಶಕ್ಕೆ 9 ದ್ವಾರಗಳನ್ನು ನಿರ್ಮಿಸಲಾಗುತ್ತೆ.

ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾಮಗಾರಿಯು 2023 ರ ಅಂತ್ಯದಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ. ಬಳಿಕ ಮುಂದಿನ ವರ್ಷಗಳಲ್ಲಿ ಕೋಟಿಗಟ್ಟಲೇ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆ ಇದೆ. ಕೆಲ ಮಹತ್ವದ ಪ್ರಾಜೆಕ್ಟ್ ಗಳನ್ನು ರಾಮಮಂದಿರ ನಿರ್ಮಾಣಕ್ಕೂ ಮುನ್ನವೇ ಪೂರ್ಣಗೊಳಿಸುವ ಗುರಿಯನ್ನು ಯುಪಿ ಸರ್ಕಾರ ಹಾಕಿಕೊಂಡಿದೆ.

ವಾರಣಾಸಿಯಂತೆ ಸರಯೂ ನದಿ ಹಾಗೂ ನದಿದಂಡೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಲಾಗುತ್ತೆ. 84 ಕೋಸಿ ಪರಿಕ್ರಮ ಮಾರ್ಗವನ್ನು ಅಭಿವೃದ್ದಿಪಡಿಸಲಾಗುತ್ತೆ. ಶ್ರೀರಾಮನ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತೆ. ಈಗಾಗಲೇ ಅರ್ಧ ಡಜನ್ ನಷ್ಟು ಪ್ರಸಿದ್ದ ಹೋಟೇಲ್ ಗಳು ಅಯೋಧ್ಯೆಯಲ್ಲಿ ಫೈವ್ ಸ್ಟಾರ್ ಹೋಟೇಲ್ ತೆರೆಯುವ ಆಸಕ್ತಿ ವ್ಯಕ್ತಪಡಿಸಿವೆ.

ಅಯೋಧ್ಯೆಯು ಬಿಜೆಪಿಯ ಸಾಂಸ್ಕೃತಿಕ, ರಾಜಕೀಯ ಅಜೆಂಡಾದಲ್ಲಿರುವ ಕ್ಷೇತ್ರ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಗೆ ಅಯೋಧ್ಯೆಯೇ 30 ವರ್ಷಗಳ ಕಾಲ ಹೋರಾಟದ ಅಜೆಂಡಾ ಆಗಿತ್ತು. ಹೀಗಾಗಿ ಈಗ ಮತ್ತೆ ಮುಂದಿನ ಯುಪಿ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣದ ಪ್ರಗತಿಯನ್ನು ದೇಶದ ಜನರ ಮುಂದಿಡಬೇಕೆಂದು ಬಿಜೆಪಿ ಬಯಸಿದೆ. ಇದಕ್ಕಾಗಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಯುಪಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನವೇ ರಾಮಮಂದಿರದ ತಳಪಾಯ (ಫೌಂಡೇಷನ್) ಕಾಮಗಾರಿ ಮುಗಿಸಲಾಗುತ್ತೆ. ಬಳಿಕ 6-8ತಿಂಗಳಿನಲ್ಲಿ ಮಂದಿರದ ನೆಲಮಹಡಿ ಕಾಮಗಾರಿ ಪೂರ್ಣಗೊಳಿಸುವ ಪ್ಲ್ಯಾನ್ ಇದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ಭವ್ಯ, ಸುಂದರ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ಅಯೋಧ್ಯೆಯಲ್ಲಿ ಈಗ 2 ಶಿಫ್ಟ್ ನಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾದಿಂದ ಕಾಮಗಾರಿಗೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಲ್‌ ಅಂಡ್ ಟಿ ಕಂಪನಿ, ಬಾಲಾಜಿ ಕನಸ್ಟ್ರಕ್ಷನ್ ಕಂಪನಿ ಹಾಗೂ ಟಾಟಾ ಕನ್ಸಲ್ಟೆಂಟ್ ಇಂಜಿನಿಯರ್ಸ್ ಕಂಪನಿಗಳು ರಾಮಮಂದಿರ ನಿರ್ಮಾಣಗ ಹೊಣೆಯನ್ನು ಹೊತ್ತಿಕೊಂಡಿವೆ. ಚಂದ್ರಕಾಂತ್ ಸೋಮಪುರ ರಾಮಮಂದಿರದ ಪ್ರಧಾನ ಶಿಲ್ಪಿ. ಮಂದಿರದ ತಳಪಾಯ ನಿರ್ಮಾಣ ಮುಗಿದ ಬಳಿಕ ಮುಂದಿನ 26 ತಿಂಗಳಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಲ್ ಅಂಡ್ ಟಿ ಕಂಪನಿ ಹೇಳಿದೆ.

ಹೀಗಾಗಿ 2023ರ ಅಂತ್ಯಭಾಗ ಇಲ್ಲವೇ 2024ರ ಪ್ರಾರಂಭದಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣವಾಗಲಿದೆ. 2024ರ ಮಾರ್ಚ್ ಬಳಿಕ ಲೋಕಸಭಾ ಚುನಾವಣೆ ಘೋಷಣೆಯಾಗುತ್ತೆ. ಅದಕ್ಕೂ ಮುನ್ನವೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಬೇಕು ಎನ್ನುವುದು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಪ್ಲ್ಯಾನ್ . ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸಾಧನೆಯನ್ನು ದೇಶದ ಜನರ ಮುಂದಿಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವೋಟ್ ಗಳಿಕೆ ಕೂಡ ವೃದ್ದಿಯಾಗುತ್ತೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿದೆ. ಈ ಮೂಲಕ ಸ್ವಾಮಿ ಕಾರ್ಯದ ಜೊತೆಗೆ ತಮ್ಮ ವೋಟ್ ಗಳಿಕೆ ಕಾರ್ಯವನ್ನು ಮಾಡಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಇದನ್ನೂ ಓದಿ: ಪ್ರಧಾನಿ ಮೋದಿಯವರಿಂದ ಅಯೋಧ್ಯೆ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ; ರೂಪುರೇಷೆ, ಕಾರ್ಯಪ್ರಗತಿ ವಿವರಿಸಿದ ಸಿಎಂ ಯೋಗಿ

ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ರಾಜಾಸ್ಥಾನದಿಂದ ತಿಳಿಕೆಂಪು ಬಣ್ಣದ ಕಲ್ಲು: ಇ-ಹರಾಜಿಗೆ ಮುಂದಾದ ಸರ್ಕಾರ

Published On - 8:37 pm, Sat, 26 June 21