ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ರಾಜಾಸ್ಥಾನದಿಂದ ತಿಳಿಕೆಂಪು ಬಣ್ಣದ ಕಲ್ಲು: ಇ-ಹರಾಜಿಗೆ ಮುಂದಾದ ಸರ್ಕಾರ
ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ತಕ್ಷಣವೇ ಭರತ್ಪುರ ಪ್ರದೇಶದ ಬನ್ಸಿ ಪಹಾರ್ಪುರ್ನಲ್ಲಿ ಕಲ್ಲಿನ ಗಣಿಗಾರಿಕೆಗೆ ಅವಕಾಶ ನೀಡಲು ಆನ್ಲೈನ್ ಹರಾಜು ಕರೆಯಲಾಗುವುದು ಎಂದು ರಾಜಸ್ಥಾನ ಸರ್ಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಜೈಪುರ: ಅಯೋಧ್ಯೆ ರಾಮಮಂದಿರ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ದೇಗುಲ ನಿರ್ಮಾಣ ಕಾರ್ಯಕ್ಕೆ ವ್ಯಾಪಕವಾಗಿ ಬೇಡಿಕೆಯಲ್ಲಿದ್ದ ವಿಶೇಷ ತಿಳಿಕೆಂಪು ಬಣ್ಣದ ಅಮೃತಶಿಲೆಯ ಗಣಿಗಾರಿಕೆಗೆ ಅವಕಾಶ ನೀಡಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ತಕ್ಷಣವೇ ಭರತ್ಪುರ ಪ್ರದೇಶದ ಬನ್ಸಿ ಪಹಾರ್ಪುರ್ನಲ್ಲಿ ಕಲ್ಲಿನ ಗಣಿಗಾರಿಕೆಗೆ ಅವಕಾಶ ನೀಡಲು ಆನ್ಲೈನ್ ಹರಾಜು ಕರೆಯಲಾಗುವುದು ಎಂದು ರಾಜಸ್ಥಾನ ಸರ್ಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಬಂಧ್ ಬರೆಥಾ ಅಭಯಾರಣ್ಯದ 398 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಿನ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿದ ತಕ್ಷಣ ಗಣಿ ವಲಯಗಳ ಹರಾಜು ಆರಂಭಿಸಲಾಗುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆಗಾರಿಕೆಗಾಗಿ ತಿಳಿಕೆಂಪು ಕಲ್ಲು ಸಿಗುವ 70 ವಲಯಗಳನ್ನು ಗುರುತಿಸಲಾಗುವುದು. ಇದರಿಂದ ರಾಜ್ಯ ಸರ್ಕಾರಕ್ಕೆ ₹ 500 ಕೋಟಿ ಆದಾಯ ಸಿಗುವ ಸಾಧ್ಯತೆಯಿದೆ ಎಂದು ರಾಜಸ್ಥಾನ ಸರ್ಕಾರದ ಗಣಿ ಮತ್ತು ಪೆಟ್ರೋಲಿಯಂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಹೇಳಿದರು.
ಪ್ರಸ್ತುತ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ನಿರ್ಬಂಧವಿದೆ. ಆದರೆ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ಈ ವಲಯದಲ್ಲಿ ಶಾಸನಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದರೆ ಅಯೋಧ್ಯೆ ದೇಗುಲಕ್ಕೆ ಕಾನೂನಿನ ಪ್ರಕಾರವೇ ಅಮೃತಶಿಲೆ ಸಿಗುತ್ತದೆ ಎಂದು ಮಾಹಿತಿ ನೀಡಿದರು. 2016ರಲ್ಲಿ ರಾಜಸ್ಥಾನದ ಅಭಯಾರಣ್ಯದಲ್ಲಿ ಗಣಿಗಾರಿಕೆಯನ್ನು ನಿರ್ಬಂಧಿಸಲಾಗಿತ್ತು. ಆದರೂ ಅಕ್ರಮವಾಗಿ ಇಲ್ಲಿಂದ ಕಲ್ಲು ಸಾಗಿಸುವ ಕ್ರಿಯೆ ನಡೆಯುತ್ತಲೇ ಇತ್ತು. ಭರತ್ಪುರದ ಪ್ರಸಿದ್ಧ ತಿಳಿಗೆಂಪು ಬಣ್ಣದ ಶಿಲೆ ಕಳ್ಳ ಮಾರುಕಟ್ಟೆಯಲ್ಲಿ ಸಿಗುತ್ತಲೇ ಇತ್ತು.
ಅಯೋಧ್ಯೆಯ ರಾಮಮಂದಿರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ದೇಗುಲ ನಿರ್ಮಾಣ ಚಟುವಟಿಕೆಗೆ ಈ ಶಿಲೆಗೆ ಉತ್ತಮ ಬೇಡಿಕೆಯಿದೆ. ಧೋಲ್ಪುರ್ದಲ್ಲಿ ಸಿಗುವ ಶಿಲೆಯು ಬನ್ಸಿ ಪಹಾರ್ಪುರ ಶಿಲೆಗೆ ಅತ್ಯಂತ ಸನಿಹವಾದುದು ಎಂದು ಹೇಳಲಾಗುತ್ತದೆ. ಕೇಂದ್ರ ಪರಿಸರ ಇಲಾಖೆಯು ಜೂನ್ 11ರಂದು ಬನ್ಸಿ ಪಹಾರ್ಪುರ ಪ್ರದೇಶವನ್ನು ಅಭಯಾರಣ್ಯ ಸ್ಥಾನಮಾನದಿಂದ ಬದಲಿಸುವ ನಿರ್ಧಾರ ಪ್ರಕಟಿಸಿತು. ಈ ಪ್ರದೇಶದಲ್ಲಿ ಶಾಸನಾತ್ಮಕವಾಗಿ ಗಣಿಗಾರಿಕೆಗೆ ಅವಕಾಶ ಸಿಕ್ಕರೆ ಸಾವಿರಾ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ. ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಪ್ರಸ್ತಾವವನ್ನು ರಾಜಸ್ಥಾನದ ವನ್ಯಜೀವಿ ಮಂಡಳಿಯು ಕಳೆದ ಫೆಬ್ರುವರಿಯಲ್ಲಿ ಅನುಮೋದಿಸಿದೆ.
ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವು ಈ ಬೆಳವಣಿಗೆಗೂ ರಾಮ ಮಂದಿರ ನಿರ್ಮಾಣಕ್ಕೂ ನೇರ ಸಂಬಂಧ ಇದೆ ಎಂಬ ವರದಿಗಳನ್ನು ತಳ್ಳಿಹಾಕಿದೆ. ರಾಮಮಂದಿರಕ್ಕೆ ಶಿಲೆ ತರುವ ವಿಚಾರದಲ್ಲಿ ಇದ್ದ ತಾಂತ್ರಿಕ ತೊಡಕು ಈಗ ಪರಿಹಾರವಾಗಿದೆ ಎಂದು ಅಯೋಧ್ಯೆಯ ವಿಶ್ವ ಹಿಂದೂ ಪರಿಷತ್ನ ನಾಯಕ ತ್ರಿಲೋಕಿ ನಾಥ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ. ಬನ್ಸಿ ಪಹಾರ್ಪುರ್ ಪ್ರದೇಶದಿಂದ ಸಾವಿರಾರು ಟನ್ ಶಿಲೆಯನ್ನು ಈವರೆಗೆ ದೇಶದ ವಿವಿಧೆಡೆ ದೇವಾಲಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಆದರೆ ಸರಬರಾಜು ಪ್ರಮಾಣ ಸಾಲುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕಲ್ಲುಗಳಿಗಾಗಿ ಹಲವು ದಿನಗಳಿಂದ ಬೇಡಿಕೆಯಿತ್ತು. ಆದರೆ ಕಳೆದ ಸೆಪ್ಟೆಂಬರ್ನಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಗ್ರಹಿಸಿದ್ದ ಕಲ್ಲು ಹೊತ್ತು ಸಾಗುತ್ತಿದ್ದ 25 ಟ್ರಕ್ಗಳನ್ನು ರಾಜಸ್ಥಾನ ಸರ್ಕಾರ ತಡೆದ ನಂತರ ಕಲ್ಲಿನ ಸರಬರಾಜು ನಿಂತುಹೋಗಿತ್ತು.
(Rajasthan To Begin E-Auction To Mine Sandstone To Be Used For Ayodhya Ram Temple)
ಇದನ್ನೂ ಓದಿ: ‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ..ಯಾವುದೇ ಅಡೆತಡೆಗಳೂ ಇಲ್ಲ’
ಇದನ್ನೂ ಓದಿ: ಮತ್ತೆ ವಿವಾದದಲ್ಲಿ ಅಯೋಧ್ಯೆ ಶ್ರೀರಾಮಜನ್ಮಭೂಮಿ; ಸಿಬಿಐ, ಇಡಿ ತನಿಖೆಗೆ ಆಗ್ರಹಿಸಿದ ಎಸ್ಪಿ, ಆಪ್ ಪಕ್ಷಗಳು
Published On - 10:33 pm, Mon, 14 June 21