ನವದೆಹಲಿ: ರಾಜ್ಯಸಭೆಯ ನೂತನ ಸಂಸದೆ ಸುಧಾ ಮೂರ್ತಿ ಅವರ ಚೊಚ್ಚಲ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಸದನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸುಧಾ ಮೂರ್ತಿ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ್ದರು. ತಾಯಿ ಸತ್ತಾಗ ಅದನ್ನು ಆಸ್ಪತ್ರೆಯಲ್ಲಿ ಒಂದು ಸಾವು ಎಂದು ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಕುಟುಂಬದವರು ತಾಯಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. ಒಬ್ಬ ಗಂಡನಿಗೆ ಮತ್ತೊಬ್ಬಳು ಹೆಂಡತಿ ಬರಬಹುದು. ಆದರೆ, ಮಕ್ಕಳಿಗೆ ಮತ್ತೊಬ್ಬಳು ತಾಯಿ ಬರಲು ಸಾಧ್ಯವಿಲ್ಲ. ಹೀಗಾಗಿ, ತಾಯಂದಿರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸುಧಾ ಮೂರ್ತಿ ಹೇಳಿದ್ದರು.
“ಮಹಿಳೆಯರ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಿದ್ದಕ್ಕಾಗಿ ನಾನು ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಾಯಂದಿರ ಕುರಿತು ಸುಧಾ ಮೂರ್ತಿ ಅವರ “ಭಾವನಾತ್ಮಕ” ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯವನ್ನು “ಆದ್ಯತೆಯ ವಲಯ”ವಾಗಿ ಕೇಂದ್ರೀಕರಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಸೋಲು ಖಚಿತವಾದಾಗಲೆಲ್ಲ ಕಾಂಗ್ರೆಸ್ ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ; ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಟೀಕೆ
ಕಳೆದ ವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, “ನಮ್ಮ ದೇಶದ ಮಹಿಳೆಯರು ನಾವು ನಿರ್ಮಿಸಿದ ಶೌಚಾಲಯಗಳಿಂದ ಪ್ರಯೋಜನ ಪಡೆದಿದ್ದಾರೆ” ಎಂದು ಹೇಳಿದರು.
भारत ने नारा नहीं, बल्कि निष्ठा के साथ Women Led Development की ओर कदम बढ़ाए हैं: PM @narendramodi#ParliamentSession#PMModiInRajyaSabha#ParliamentSession2024 pic.twitter.com/rN1bcquKm3
— MyGovIndia (@mygovindia) July 3, 2024
ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲಾಗಿದೆ ಮತ್ತು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರ ಪ್ರಾಯೋಜಿತ ಲಸಿಕೆ ಕಾರ್ಯಕ್ರಮಕ್ಕಾಗಿ ಸುಧಾ ಮೂರ್ತಿ ಒತ್ತಾಯಿಸಿದ್ದರು. “9ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡಲಾಗುವ ಲಸಿಕೆ ಇದೆ. ಇದನ್ನು ಗರ್ಭಕಂಠದ ಲಸಿಕೆ ಎಂದು ಕರೆಯಲಾಗುತ್ತದೆ. ಹುಡುಗಿಯರು ಅದನ್ನು ತೆಗೆದುಕೊಂಡರೆ ಕ್ಯಾನ್ಸರ್ ರೋಗವನ್ನು ತಪ್ಪಿಸಬಹುದು. ಮಹಿಳೆಯರ ಪ್ರಯೋಜನಕ್ಕಾಗಿ ನಾವು ಈ ಲಸಿಕೆಯನ್ನು ಉತ್ತೇಜಿಸಬೇಕು” ಎಂದು ಅವರು ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದರು.
ಇದನ್ನೂ ಓದಿ: ರಾಜ್ಯಸಭೆಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ
ಸರ್ಕಾರವು “ಕೋವಿಡ್ ಸಮಯದಲ್ಲಿ ದೊಡ್ಡ ವ್ಯಾಕ್ಸಿನೇಷನ್ ಅಭಿಯಾನ” ನಿರ್ವಹಿಸಿರುವುದರಿಂದ 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಲಸಿಕೆಯನ್ನು ನೀಡುವುದು ತುಂಬಾ ಕಷ್ಟಕರವಲ್ಲ ಎಂದು ಅವರು ಹೇಳಿದ್ದರು.
“Where women are respected.. thats where Gods reside”
– Smt Sudha Murthy’s very first speech in Parliament.pic.twitter.com/EhDEXFjSum
— Karthik Reddy (@bykarthikreddy) July 2, 2024
ಮಹಿಳೆಯರ ಆರೋಗ್ಯದ ಜೊತೆಗೆ, ದೇಶೀಯ ಪ್ರಯಾಣದ ಬೆಳವಣಿಗೆಗೆ ಸುಧಾ ಮೂರ್ತಿ ಪ್ರಸ್ತಾಪಿಸಿದರು. ಅವರು 57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ನಾಮನಿರ್ದೇಶನ ಮಾಡಲು ಸೂಚಿಸಿದ್ದರು. ಕರ್ನಾಟಕದ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಅದ್ಭುತ ಪ್ರತಿಮೆ ಇದೆ. ಮಧ್ಯಪ್ರದೇಶದ ಮಾಂಡುವಿನಲ್ಲಿ ಬಹಳ ಸುಂದರವಾದ ಸ್ಮಾರಕಗಳ ಸಮೂಹವಿದೆ. ನೀವು ಪೂರ್ವಕ್ಕೆ ಹೋದರೆ, ನೀವು ತ್ರಿಪುರಾ ರಾಜ್ಯವನ್ನು ಹೊಂದಿದ್ದೀರಿ ಮತ್ತು ಅಲ್ಲಿ ಉನಕೋಟಿ ಎಂದು ಕರೆಯಲ್ಪಡುವ ಅದ್ಭುತ ಶಿಲ್ಪಕಲೆ, ಮಿಜೋರಾಂ ಮತ್ತು ಭಾರತದ ಪೂರ್ವ ಭಾಗದಲ್ಲಿರುವ ನೈಸರ್ಗಿಕ ಬೇರುಗಳ ಸೇತುವೆಯಿದೆ. ಇದು ನಮಗೆ ದೇವರ ಕೊಡುಗೆಯಾಗಿದೆ ”ಎಂದು ಅವರು ಹೇಳಿದ್ದರು.
ರಾಷ್ಟ್ರಪತಿಗಳು ಮಾರ್ಚ್ 8, 2024ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸುಧಾ ಮೂರ್ತಿ ಅವರನ್ನು ಮೇಲ್ಮನೆಗೆ (ರಾಜ್ಯಸಭೆ) ನಾಮನಿರ್ದೇಶನ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Wed, 3 July 24