ಅತ್ತ ತಾಲಿಬಾನ್ ಮುಖಂಡರು ತಾವು ಸಂಪೂರ್ಣ ಅಫ್ಘಾನಿಸ್ತಾನ (Afghanistan) ವನ್ನು ವಶಪಡಿಸಿಕೊಂಡಿದ್ದೇವೆ. ಪಂಜಶಿರ್ (Panjshir) ಪ್ರಾಂತ್ಯ ಕೂಡ ಈಗ ನಮ್ಮ ನಿಯಂತ್ರಣದಲ್ಲಿದೆ ಎಂದು ಪ್ರತಿಪಾದಿಸಿದ ಬೆನ್ನಲ್ಲೇ ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಫ್ಘಾನ್ ಪರಿಸ್ಥಿತಿ, ಭಾರತದ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಂಬಂಧ ಉನ್ನತ ಮಟ್ಟದ ಸಭೆ (High Level Meeting) ನಡೆಸಿದ್ದಾರೆ. ಈ ಪರಿಶೀಲನಾ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಲ್ಗೊಂಡಿದ್ದರು.
ಸಭೆಯಲ್ಲಿ ನಿರ್ದಿಷ್ಟವಾಗಿ ಏನೆಲ್ಲ ಚರ್ಚೆಗಳಾದವು ಎಂಬುದು ಗೊತ್ತಾಗಿಲ್ಲ. ಆದರೆ ಉನ್ನತ ಮೂಲಗಳ ಪ್ರಕಾರ, ಅಫ್ಘಾನಿಸ್ತಾನವೀಗ ಸಂಪೂರ್ಣ ತಾಲಿಬಾನಿಗಳ ವಶವಾದ ಬಗ್ಗೆ, ಅಲ್ಲಿನ ಪರಿಸ್ಥಿತಿಯ ಬಗ್ಗೆಯೇ ಸಭೆಯಲ್ಲಿ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಅಟ್ಟಹಾಸ ಶುರುವಾಗಿ ಅದಾಗ 20ಕ್ಕೂ ಹೆಚ್ಚು ದಿನವಾದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ಒಂದೂ ಮಾತನಾಡಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಚುಟುಕಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತರು, ಅಫ್ಘಾನ್ ನಾಗರಿಕರಿಗೆ ಕೈಲಾದ ಸಹಾಯಕ್ಕೆ ಬದ್ಧ, ಆದರೆ ಭಾರತದ ಸಂಬಂಧ ತಾಲಿಬಾನಿಗಳ ಜತೆ ಹೇಗಿರಲಿ ಎಂಬುದನ್ನು ಈಗಲೇ ಹೇಳಲು ಆಗದು..ಯಾಕೆಂದರೆ ಇದಿನ್ನೂ ಪ್ರಾರಂಭಿಕ ಹಂತದಲ್ಲಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಬಿಪಿನ್ ರಾವತ್ ಒಂದು ಖಡಕ್ ಎಚ್ಚರಿಕೆ ನೀಡಿದ್ದರು. ಭಾರತದ ಭದ್ರತೆಯ ಮೇಲೆ ಆಕ್ರಮಣ ನಡೆಸುವ ಯಾರನ್ನಾದರೂ ಸರಿ, ಅವರನ್ನು ಉಗ್ರರೆಂದೇ ಪರಿಗಣಿಸಿ, ಪ್ರತಿ ಆಕ್ರಮಣ ಮಾಡುತ್ತೇವೆ ಎಂದೂ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕತಾರ್ನಲ್ಲಿ ಭಾರತ-ತಾಲಿಬಾನ್ ನಡುವೆ ರಾಜತಾಂತ್ರಿಕ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ತಾಲಿಬಾನ್ ಮುಖಂಡ, ಅಫ್ಘಾನ್ ನೆಲವನ್ನು ಭಾರತದ ಮೇಲೆ ಆಕ್ರಮಣ ಮಾಡಲು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು. ತಾಲಿಬಾನ್ ಪ್ರಾರಂಭಿದಂದಲೂ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತ ಬಂದಿದೆ.
ಇದನ್ನೂ ಓದಿ: Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್
ಯಲಹಂಕ: ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಖಾಸಗಿ ಶಾಲಾ ಶಿಕ್ಷಕನಿಂದ ಹಲ್ಲೆ, ಆರೋಪಿ ಅರೆಸ್ಟ್