ಹಿಮಾಚಲ ಪ್ರದೇಶದ ಸಿಎಂಗೆ ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ರಾಜ್ಯದ ಸ್ಥಿತಿಗತಿ ವಿಚಾರಿಸಿದ ಪ್ರಧಾನಿ ಮೋದಿ

|

Updated on: Jul 10, 2023 | 7:36 PM

ಹಿಮಾಚಲದಲ್ಲಿ ನಿರಂತರ ಮಳೆಯಾಗುತ್ತಿದ್ದು, ತೀವ್ರ ಪ್ರವಾಹ ಮತ್ತು ಭೂಕುಸಿತಗಳುಂಟಾಗಿದೆ. ರಸ್ತೆಗಳು, ನೀರು ಮತ್ತು ವಿದ್ಯುತ್ ಪೂರೈಕೆಗೆ ಹಾನಿಯಾಗಿದ್ದು ಮಾತ್ರವಲ್ಲದೆ 17 ಮಂದಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದ ವ್ಯಾಪಕವಾದ ನಷ್ಟ ಉಂಟಾಗಿದ್ದು, ಸಾವಿರಾರು ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.

ಹಿಮಾಚಲ ಪ್ರದೇಶದ ಸಿಎಂಗೆ ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ರಾಜ್ಯದ ಸ್ಥಿತಿಗತಿ ವಿಚಾರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಮುಖ್ಯಮಂತ್ರಿ ಠಾಕೂರ್ ಸುಖವಿಂದರ್ ಸಿಂಗ್ ಸುಖುಗೆ (Thakur Sukhvinder Singh Sukhu) ದೂರವಾಣಿ  ಕರೆ ಮಾಡಿ ಮಾತನಾಡಿದ್ದು, ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾದ ನಾಶ ನಷ್ಟಗಳ ಬಗ್ಗೆ ವಿಚಾರಿಸಿದ್ದಾರೆ. ಬಲ್ಲಮೂಲಗಳ ಪ್ರಕಾರ ಸುಖು ಅವರು, ಪ್ರವಾಹ ಮತ್ತು ಭಾರೀ ಮಳೆಯಿಂದ ರಾಜ್ಯದಲ್ಲಿ ಭಾರೀ ಹಾನಿಯಾಗಿದೆ ಎಂದು ಪ್ರಧಾನಿ ಮೋದಿಯವರಲ್ಲಿ ಹೇಳಿದ್ದಾರೆ. ಅದೇ ವೇಳೆ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ಕೇಂದ್ರ ಸರ್ಕಾರದಿಂದ ನೆರವು ಕೋರಿದ್ದಾರೆ.ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮುಖ್ಯಮಂತ್ರಿ ಪ್ರಧಾನಿ ಮೋದಿಗೆ ಹೇಳಿದ್ದಾರೆ.

ಹಿಮಾಚಲದಲ್ಲಿ ನಿರಂತರ ಮಳೆಯಾಗುತ್ತಿದ್ದು, ತೀವ್ರ ಪ್ರವಾಹ ಮತ್ತು ಭೂಕುಸಿತಗಳುಂಟಾಗಿದೆ. ರಸ್ತೆಗಳು, ನೀರು ಮತ್ತು ವಿದ್ಯುತ್ ಪೂರೈಕೆಗೆ ಹಾನಿಯಾಗಿದ್ದು ಮಾತ್ರವಲ್ಲದೆ 17 ಮಂದಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದ ವ್ಯಾಪಕವಾದ ನಷ್ಟ ಉಂಟಾಗಿದ್ದು, ಸಾವಿರಾರು ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.

ಮಳೆ ಹಿಮಾಚಲ ಪ್ರದೇಶದಲ್ಲಿ  ಅನೇಕ ಮಂದಿಯ  ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯ ಸರ್ಕಾರವು ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಳೆಯಲ್ಲಿ ಸಿಲುಕಿರುವ ವ್ಯಕ್ತಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ನಂತರ ಅವರನ್ನು ಏರ್‌ಲಿಫ್ಟ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಎಂ ಸುಖು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಿಯೋಜಿಸಿದ್ದಕ್ಕಾಗಿ ಸಿಎಂ ಸುಖು ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಪತ್ತಿನಿಂದ ಉಂಟಾದ ವ್ಯಾಪಕ ನಷ್ಟದಿಂದ ಚೇತರಿಸಿಕೊಳ್ಳಲು ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ನೆರವು ಬೇಕಾಗುತ್ತದೆ. ರಾಜ್ಯದ ಚೇತರಿಕೆ ಪ್ರಕ್ರಿಯೆಗೆ ನೆರವು ನೀಡಲು ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ವಿಸ್ತರಿಸುವಂತೆ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್

ಮುಖ್ಯಮಂತ್ರಿಯವರ ಕಳವಳಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮುಖ್ಯಮಂತ್ರಿಗಳಿಗೆ ದೂರವಾಣಿಯಲ್ಲಿ ಕರೆ ಮಾಡಿ ಹಾನಿ ಬಗ್ಗೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ..

ಚೇತರಿಕೆ ಪ್ರಕ್ರಿಯೆಗೆ ದೀರ್ಘ ಸಮಯ ಹಿಡಿಯುವ ಅಂದಾಜಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಅಗತ್ಯವನ್ನು ಮುಖ್ಯಮಂತ್ರಿ ಒತ್ತಿ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ