
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ 8.30ಕ್ಕೆ, ವಿಶ್ವ ಆರ್ಥಿಕ ವೇದಿಕೆ(World Economic Forum)ಯ ದಾವೋಸ್ ಅಜೆಂಡಾವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇಂದಿನಿಂದ (ಜ.17) ಜನವರಿ 21ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವರ್ಚ್ಯುವಲ್ ಆಗಿ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಇಂಡೋನೇಷಿಯಾದ ಅಧ್ಯಕ್ಷ ಜೋಕೊ ವಿಡೋಡೊ, ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಯುರೋಪಿಯನ್ ಯೂನಿಯನ್ ಆಯೋಗದ ಮುಖ್ಯಸ್ಥ ಉರ್ಸುವಾ ವಾನ್ ಡೆರ್ ಲೇಯೆನ್ ಇತರರು ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ತಾವು ದಾವೋಸ್ ಅಜೆಂಡಾ ಉದ್ದೇಶಿಸಿ ಮಾತನಾಡಲಿರುವ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಲಿದ್ದಾರೆ.
ಈ ವಿಶ್ವ ಆರ್ಥಿಕ ವೇದಿಕೆ ದಾವೋಸ್ ಅಜೆಂಡಾ ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಪ್ರಮುಖರು, ವಿಶ್ವ ಸಂಸ್ಥೆ ಪ್ರಮುಖರು, ಅಂತಾರಾಷ್ಟ್ರೀಯ ಸಂಸ್ಥೆಗಳು, ನಾಗರಿಕ ಸಮಾಜದ ನಾಯಕರೂ ಕೂಡ ಪಾಲ್ಗೊಳ್ಳಲಿದ್ದಾರೆ. ಜಗತ್ತು ಪ್ರಸ್ತುತವಾಗಿ ಎದುರಿಸುತ್ತಿರುವ ಕಠಿಣ ಸವಾಲುಗಳು ಮತ್ತು ಅದನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಈ ಅಜೆಂಡಾದಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಯಲಿದೆ. ಇದು 2022ರ ಮೊದಲ, ವಿಶ್ವ ನಾಯಕರ ಸಭೆಯಾಗಿದೆ. ಇಲ್ಲಿ ಪ್ರಮುಖ ನಾಯಕು 2022ರ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲಿದ್ದು, ವಿಶ್ವದ ಸ್ಥಿತಿ (State of the World) ಇದರ ಪ್ರಮುಖ ಥೀಮ್ ಆಗಿದೆ. ಜಿನಿವಾ ಮೂಲದ ಈ ವಿಶ್ವ ಆರ್ಥಿಕ ವೇದಿಕೆ ಕಳೆದ 50ವರ್ಷಗಳಿಂದಲೂ ದಾವೋಸ್ನ ಸ್ವಿಸ್ ಸ್ಕಿ ರೆಸಾರ್ಟ್ನಲ್ಲಿ ತನ್ನ ವಾರ್ಷಿಕ ಸಭೆ ನಡೆಸುತ್ತಿದೆ. ಆದರೆ ಕೊವಿಡ್ 19 ಕಾರಣದಿಂದ 2021ರಲ್ಲಿ ಇದು ನಡೆದಿರಲಿಲ್ಲ. ಈಗಲೂ ಕೂಡ ಕೊರೊನಾ ಕಾರಣಕ್ಕೆ ವರ್ಚ್ಯುವಲ್ ಆಗಿಯೇ ಆಯೋಜಿಸಲಾಗಿದೆ. ಇಂದು ಮೊದಲ ದಿನ ಭಾರತದ ಪ್ರಧಾನಿ ಮತ್ತು ಚೀನಾ ಅಧ್ಯಕ್ಷ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: ಮೂರು ನಾಯಿಗಳು ಮತ್ತು ನಾಗರ ಹಾವಿನ ನಡುವೆ ಕಾಳಗ, ಮೈ ಜುಮ್ ಎನ್ನಿಸುವ ದೃಶ್ಯ
Published On - 9:55 am, Mon, 17 January 22