Noida International Airport: ಇಂದು ನೊಯ್ಡಾ ಏರ್ಪೋರ್ಟ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಪ್ರಧಾನಿ ಮೋದಿ
ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿ ಉತ್ತರ ಪ್ರದೇಶದಲ್ಲಿ ಒಟ್ಟು ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇರಲಿವೆ. ಹಾಗೇ, 5 ಇಂಟರ್ನ್ಯಾಷನಲ್ ಏರ್ಪೋರ್ಟ್ ಹೊಂದಿದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೂ ಉತ್ತರಪ್ರದೇಶ ರಾಜ್ಯ ಪಾತ್ರವಾಗಲಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 1ಗಂಟೆಗೆ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೇವಾರ್ನಲ್ಲಿ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Noida International Airport – NIA)ಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿ ಕಾರ್ಯ 10,050 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಡೆಯುತ್ತಿದೆ. ಅಂದಹಾಗೇ, ಈ ಏರ್ಪೋರ್ಟ್ನ್ನು 1300 ಹೆಕ್ಟೇರ್ಗೂ ಹೆಚ್ಚಿನ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವರ್ಷಕ್ಕೆ 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಇರಲಿದೆ. ಏರ್ಪೋರ್ಟ್ 2024ರಿಂದ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದು, ನವೆಂಬರ್ 25, ಭಾರತ ಮತ್ತು ಉತ್ತರ ಪ್ರದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ಮಧ್ಯಾಹ್ನ 1ಗಂಟೆಗೆ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಪ್ರಸಕ್ತ ಯೋಜನೆಯು ವಾಣಿಜ್ಯ, ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ಆಗಿದೆ ಎಂದು ತಿಳಿಸಿದ್ದಾರೆ.
Tomorrow, 25th November is a major day for India’s and Uttar Pradesh’s strides in infra creation. At 1 PM, the foundation stone of the Noida International Airport will be laid. This project will significantly boost commerce, connectivity and tourism. https://t.co/8sSa8R1aFl
— Narendra Modi (@narendramodi) November 24, 2021
ಈ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿ ಉತ್ತರ ಪ್ರದೇಶದಲ್ಲಿ ಒಟ್ಟು ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇರಲಿವೆ. ಹಾಗೇ, 5 ಇಂಟರ್ನ್ಯಾಷನಲ್ ಏರ್ಪೋರ್ಟ್ ಹೊಂದಿದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೂ ಉತ್ತರಪ್ರದೇಶ ರಾಜ್ಯ ಪಾತ್ರವಾಗಲಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಹೆಚ್ಚೆಚ್ಚು ಆದ್ಯತೆ ನೀಡುತ್ತಿದೆ. ಇಲ್ಲಿ ಏರ್ಪೋರ್ಟ್ಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಅಯೋಧ್ಯೆಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದ್ದರೆ, ಖುಷಿನಗರದಲ್ಲಿ ಇತ್ತೀಚೆಗಷ್ಟೇ ಒಂದು ಏರ್ಪೋರ್ಟ್ ಉದ್ಘಾಟನೆಯಾಗಿದೆ. ಅದರಲ್ಲೂ ಈ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಲ್ಕು ಹಂತದಲ್ಲಿ ಅಭಿವೃದ್ಧಿ ಮಾಡಲಾಗುವುದು. ಮೊದಲ ಹಂತದ ಅಭಿವೃದ್ಧಿ ಕೆಲಸ 36 ತಿಂಗಳಲ್ಲಿ ಮುಗಿಯುವುದು ಎಂದು ಸಿವಿಲ್ ಏವಿಯೇಶನ್ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ
Published On - 10:41 am, Thu, 25 November 21