PM CARES: ಕೊವಿಡ್ ಸಂತ್ರಸ್ತ ಮಕ್ಕಳಿಗೆ ಇಂದು ಪಿಎಂ ಕೇರ್ಸ್ ನಿಧಿನಿಂದ ಹಲವು ಸೌಲಭ್ಯ ಬಿಡುಗಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 30, 2022 | 9:09 AM

ಪ್ರಧಾನಿ ನರೇಂದ್ರ ಮೋದಿ ಅವರು ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಿದ್ದಾರೆ

PM CARES: ಕೊವಿಡ್ ಸಂತ್ರಸ್ತ ಮಕ್ಕಳಿಗೆ ಇಂದು ಪಿಎಂ ಕೇರ್ಸ್ ನಿಧಿನಿಂದ ಹಲವು ಸೌಲಭ್ಯ ಬಿಡುಗಡೆ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ 40) ಪಿಎಂ ಕೇರ್ಸ್​ ಯೋಜನೆಯಡಿ (PM CARES Scheme) ಕೊವಿಡ್ ಸಂತ್ರಸ್ತ ಮಕ್ಕಳಿಗಾಗಿ ವಿವಿಧ ಸೌಲಭ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ಹಲವು ಸೌಲಭ್ಯಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಕಚೇರಿ (Prime Ministers Office – PMO) ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕೇರ್ಸ್​ ಯೋಜನೆಯ ಪಾಸ್​ಬುಕ್​ಗಳನ್ನು ಮಕ್ಕಳಿಗೆ ನೀಡಲಾಗುವುದು. ಇದರ ಜೊತೆಗೆ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾದ ಹೆಲ್ತ್​​ಕಾರ್ಡ್​​ಗಳನ್ನೂ ನೀಡಲಾಗುವುದು.

ಮಕ್ಕಳಿಗಾಗಿ ಪಿಎಂ ಕೇರ್ಸ್​ ಯೋಜನೆಯ ಮುಖ್ಯಾಂಶಗಳು

ಪ್ರಧಾನಿ ನರೇಂದ್ರ ಮೋದಿ ಅವರು ಮೇ 29, 2021ರಂದು ಮಕ್ಕಳಿಗಾಗಿ ಪಿಎಂ ಕೇರ್ಸ್​ (PM CARES for Children Scheme) ಯೋಜನೆಯನ್ನು ಜಾರಿಗೊಳಿಸಿದರು. ಕೊವಿಡ್ ಪಿಡುಗಿನಿಂದ ಅಪ್ಪ-ಅಮ್ಮ ಅಥವಾ ಪೋಷಕರು ಅಥವಾ ದತ್ತು ಪೋಷಕರನ್ನು ಕಳೆದುಕೊಂಡವರಿಗೆ ನೆರವಾಗುವುದು ಈ ಯೋಜನೆಯ ಉದ್ದೇಶ. ಮಾರ್ಚ್ 11, 2020ರಿಂದ ಫೆಬ್ರುವರಿ 28, 2022ರ ನಡುವಣ ಅವಧಿಯಲ್ಲಿ ಮೃತಪಟ್ಟ ಪೋಷಕರ ಮಕ್ಕಳಿಗೆ ಈ ಯೋಜನೆಯ ಅನ್ವಯ ನೆರವು ಒದಗಿಸುವ ಉದ್ದೇಶವಿದೆ.

ಪಿಎಂ ಕೇರ್ಸ್​ ಯೋಜನೆಯಡಿ ಸಿಗುವ ನೆರವುಗಳು

ಮಕ್ಕಳ ಸಮಗ್ರ ಬೆಳವಣಿಗೆಗಳನ್ನು ಸುಸ್ಥಿರವಾಗಿ ಗಮನಿಸುವುದು, ಕಾಪಾಡುವುದು ಪಿಎಂ ಕೇರ್ಸ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ವಸತಿ ಸೌಕರ್ಯ, ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ, ಆರ್ಥಿಕ ನೆರವು ಒದಗಿಸಲು ಈ ಯೋಜನೆಯಡಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಮಕ್ಕಳು 23ನೇ ವರ್ಷ ಮುಟ್ಟಿದಾಗ ತಲಾ ₹ 10 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು. ಆರೋಗ್ಯ ವಿಮೆಯ ಮೂಲಕ ಅವರಿಗೆ ಕಾಳಜಿಗೂ ಕ್ರಮ ತೆಗೆದುಕೊಳ್ಳುತ್ತದೆ.

ಪಿಎಂ ಕೇರ್ಸ್ ಯೋಜನೆಗೆ ನೋಂದಣಿ ಹೇಗೆ?

ಪಿಎಂ ಕೇರ್ಸ್​ ಯೋಜನೆಗೆ ಸೇರಲು ಇಚ್ಛಿಸುವ ಮಕ್ಕಳು ಹಿರಿಯರ ನೆರವು ಪಡೆದುಕೊಳ್ಳಬೇಕು. ಭಾರತ ಸರ್ಕಾರವು ರೂಪಿಸಿರುವ ವೆಬ್​ ಪೋರ್ಟಲ್ ಮೂಲಕ ಮಾಹಿತಿ ಅಪ್​ಲೋಡ್ ಮಾಡಬೇಕು. ಒಮ್ಮೆ ನಿಮ್ಮ ಅರ್ಜಿಯು ಸೂಕ್ತ ಪ್ರಕ್ರಿಯೆಗಳಿಗೆ ಒಳಪಟ್ಟು, ಅನುಮೋದನೆ ಪಡೆದುಕೊಂಡರೆ ಆಯ್ಕೆಯಾದ ಮಕ್ಕಳಿಗೆ ಸರ್ಕಾರದ ಹಲವು ಸೌಕರ್ಯಗಳು ಲಭ್ಯವಾಗುತ್ತವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 am, Mon, 30 May 22