ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ದೆಹಲಿ: ಬುದ್ಧ ಪೂರ್ಣಿಮೆ (Buddha Purnima) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಗೆ ಸೋಮವಾರ (ಮೇ 16) ಭೇಟಿ ನೀಡಲಿದ್ದಾರೆ. ಮೋದಿ ಅವರ ನೇಪಾಳ ಭೇಟಿಯು ಭಾರತ-ನೇಪಾಳ ಸಂಬಂಧವನ್ನು ಮತ್ತಷ್ಟು ಭದ್ರಗೊಳಿಸಲಿದೆ. ಈ ವೇಳೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವ್ಬಾ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ಸ್ಥಾಪನೆಗೆ ಇದೇ ಸಂದರ್ಭದಲ್ಲಿ ಎರಡೂ ದೇಶದ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ನೇಪಾಳ ಭೇಟಿಯ ಮುಖ್ಯ ಅಂಶಗಳಿವು…
- ಬುದ್ಧನ ಜನ್ಮಸ್ಥಳ ಲುಂಬಿನಿಯಲ್ಲಿ ಎರಡೂ ದೇಶಗಳ ಪ್ರಧಾನಿ ಪರಸ್ಪರ ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
- ಲುಂಬಿನಿಯಲ್ಲಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವ್ಬಾ ಆಯೋಜಿಸಿರುವ ಭೋಜನ ಕೂಟದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
- ಉತ್ತರ ಪ್ರದೇಶದ ಖುಷಿನಗರದಿಂದ ಲುಂಬಿನಿಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ.
- ಲುಂಬಿನಿಯಲ್ಲಿಯೇ ಬುದ್ಧ ನಿರ್ವಾಣ ಹೊಂದಿದ ಎಂದು ಹೇಳಲಾಗುತ್ತದೆ.
- ಭಾರತ ಮತ್ತು ನೇಪಾಳಗಳಲ್ಲಿರುವ ಬೌದ್ಧ ಧರ್ಮದ ಯಾತ್ರಾ ಸ್ಥಳಗಳನ್ನು ಪರಸ್ಪರ ಬೆಸೆಯಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಲುಂಬಿನಿ ಭೇಟಿ ಸಹ ಇಂಥ ಪ್ರಯತ್ನಗಳಿಗೆ ಪುಷ್ಟಿ ನೀಡಲಿದೆ.
- ನೇಪಾಳ ಭೇಟಿಯ ವೇಳೆ ನರೇಂದ್ರ ಮೋದಿ ಅವರು ಮಾಯಾ ದೇವಿ ದೇಗುಲಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
- ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಲಿದ್ದಾರೆ.
- ಬೌದ್ಧ ಸಂಸ್ಕೃತಿ ಮತ್ತು ಪರಂಪರಾ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿಯೂ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಯೋಜನೆಗೆ ಭಾರತ ಸರ್ಕಾರವು ಸಹಾಯ ಒದಗಿಸಿದೆ.
- ಭಾರತ ಮತ್ತು ನೇಪಾಳ ಸರ್ಕಾರಗಳ ನಡುವೆ ಇದೇ ಸಂದರ್ಭದಲ್ಲಿ ಹಲವು ಒಡಂಬಡಿಕೆಗಳು ಏರ್ಪಡಲಿದ್ದು, ಎರಡೂ ದೇಶಗಳ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
- ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿರುವ ನೇಪಾಳದಲ್ಲಿ ದಿನದಿಂದ ದಿನಕ್ಕೆ ವಿದೇಶಿ ಮೀಸಲು ಮೊತ್ತ ಕುಸಿಯುತ್ತಿದೆ. ಇಂದು ಶ್ರೀಲಂಕಾ ಎದುರಿಸುತ್ತಿರುವಂಥದ್ದೇ ಸಮಸ್ಯೆಗಳು ಮುಂದಿನ ದಿನಗಳಲ್ಲಿ ನೇಪಾಳದಲ್ಲಿಯೂ ಎದುರಾಗಬಹುದು ಎಂದು ವಿಶ್ಲೇಷಿಸಲಾಗಿದ್ದು, ನೇಪಾಳವು ಭಾರತದ ನೆರವಿನ ನಿರೀಕ್ಷೆಯಲ್ಲಿದೆ.
ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ