ಬಿಗಿಭದ್ರತೆಯ ನಡುವೆ ಜ್ಞಾನವಾಪಿ ಮಸೀದಿಯ 3ನೇ ದಿನದ ಸಮೀಕ್ಷೆ ಮುಕ್ತಾಯ

ಮಸೀದಿ ಸಮುಚ್ಚಯದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆಯು 10.15ಕ್ಕೆ ಮುಕ್ತಾಯವಾಯಿತು.

ಬಿಗಿಭದ್ರತೆಯ ನಡುವೆ ಜ್ಞಾನವಾಪಿ ಮಸೀದಿಯ 3ನೇ ದಿನದ ಸಮೀಕ್ಷೆ ಮುಕ್ತಾಯ
ಕಾಶಿಯ ಜ್ಞಾನವಾಪಿ ಮಸೀದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 16, 2022 | 1:02 PM

ಲಖನೌ: ನ್ಯಾಯಾಲಯದ ಸೂಚನೆಯಂತೆ ಕಾಶಿಯ ಜ್ಞಾನವಾಪಿ ಮಸೀದಿಯ (Gyanvapi Mosque) ವಿಡಿಯೊ ಸಮೀಕ್ಷೆ ಸೋಮವಾರ ಮುಕ್ತಾಯವಾಯಿತು. ಸಮೀಕ್ಷೆ ನಡೆಸಲು ಬಂದವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಮಸೀದಿ ಸಮುಚ್ಚಯದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆಯು 10.15ಕ್ಕೆ ಮುಕ್ತಾಯವಾಯಿತು. ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತೆ ಜ್ಞಾನವಾಪಿ ಮಸೀದಿ ಇದೆ. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಕೆಲ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಮಹಿಳೆಯರ ತಂಡವೊಂದು ಅನುಮತಿ ಕೋರಿದೆ.

‘ನ್ಯಾಯಾಲಯವು ನೇಮಿಸಿದ್ದ ಸಮಿತಿಯು ಎರಡು ತಾಸು ಸಮೀಕ್ಷೆ ನಡೆಸಿದ ನಂತರ ಕೆಲಸ ಮುಗಿಸಿತು. ತಂಡದ ಭಾಗವಾಗಿರುವ ಎಲ್ಲ ಪಕ್ಷಗಳೂ ತೃಪ್ತಿ ವ್ಯಕ್ತಪಡಿಸಿವೆ’ ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ವರದಿಗಾರರಿಗೆ ತಿಳಿಸಿದರು.

ಮಸೀದಿ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಸಮೀಕ್ಷೆಯನ್ನು ಕಳೆದ ವಾರ ನಿಲ್ಲಿಸಲಾಗಿತ್ತು. ನ್ಯಾಯಾಲಯವು ನೇಮಿಸಿರುವ ಅಡ್ವೊಕೇಟ್ ಕಮಿಷನರ್​ಗೆ ಮಸೀದಿಯ ಒಳಗೆ ಚಿತ್ರೀಕರಣ ನಡೆಸಲು ಅನುಮತಿ ಇಲ್ಲ ಎಂದು ಮಸೀದಿ ಸಮಿತಿ ಆಕ್ಷೇಪಿಸಿತ್ತು.

ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ಬದಲಿಸಬೇಕು ಎನ್ನುವ ಮಸೀದಿ ಸಮಿತಿಯ ಮನವಿಯನ್ನು ಕಳೆದ ಗುರುವಾರ ವಾರಣಾಸಿಯ ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ತಳ್ಳಿ ಹಾಕಿದ್ದರು. ಜ್ಞಾನವಾಪಿ ಮಸೀದಿ-ಗೌರಿ ಶೃಂಗಾರ್ ಸಮುಚ್ಚಯದ ಸಮೀಕ್ಷೆಯನ್ನು ಅವರಿಂದಲೇ ನಡೆಸಲು ನ್ಯಾಯಾಲಯ ಸಮ್ಮತಿಸಿತ್ತು. ಕೋರ್ಟ್​ ಕಮಿಷನರ್​ಗೆ ನೆರವು ಒದಗಿಸಲೆಂದು ಇನ್ನೂ ಇಬ್ಬರು ವಕೀಲರನ್ನು ನ್ಯಾಯಾಲಯವು ನೇಮಿಸಿತ್ತು. ಮಂಗಳವಾರದ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಸೂಚಿಸಿತ್ತು.

ಮಸೀದಿಯ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಬೀಗದ ಕೀಲಿಗಳನ್ನು ನೀಡದಿದ್ದರೆ ಬೀಗ ಒಡೆಯಲಾಗುವುದು ಎಂದು ಎಚ್ಚರಿಸಿದ್ದ ನ್ಯಾಯಾಲಯವು, ಸಮೀಕ್ಷೆಗೆ ಅಡ್ಡಿಪಡಿಸುವವರ ವಿರುದ್ಧ ಎಫ್​ಐಆರ್ ದಾಖಲು ಮಾಡುವಂತೆ ಸೂಚಿಸಿತ್ತು.

ಸಮೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್​ ಶುಕ್ರವಾರ ನಿರಾಕರಿಸಿತ್ತು. ಮುಸ್ಲಿಂ ಸಮುದಾಯ ಸಲ್ಲಿಸಿರುವ ಮನವಿಯನ್ನು ಆಲಿಸುವುದಾಗಿ ಭರವಸೆ ನೀಡಿತ್ತು. ನ್ಯಾಯಾಲಯ ನೇಮಿಸಿರುವ ಅಡ್ವೊಕೇಟ್ ಕಮಿಷನರ್​ಗಳು, ಐವರು ವಕೀಲರು (ಎರಡೂ ಪಕ್ಷಗಳ ಪರವಾಗಿ ತಲಾ ಇಬ್ಬರು ಮತ್ತು ಒಬ್ಬ ಸಹಾಯಕ) ವಿಡಿಯೊ ಸಮೀಕ್ಷೆ ನಡೆಸಿದ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ