
ನವದೆಹಲಿ, ನವೆಂಬರ್ 8: ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ (LK Advani Birthday) ಅವರಿಗೆ 98 ವರ್ಷ ತುಂಬಿದೆ. ಇಂದು ಅವರ ಜನ್ಮದಿನ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿರುವ ಎಲ್.ಕೆ ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. “ಅತ್ಯುನ್ನತ ದೃಷ್ಟಿಕೋನದ ರಾಜನೀತಿಜ್ಞ” ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಕುರಿತು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಮಜನ್ಮಭೂಮಿ ಚಳವಳಿಯ ಶಿಲ್ಪಿ ಎಲ್.ಕೆ. ಅಡ್ವಾಣಿ ಇಂದು (ನವೆಂಬರ್ 8) 98 ವರ್ಷಗಳನ್ನು ಪೂರೈಸಿದ್ದಾರೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ, ಹೂಗುಚ್ಛ ನೀಡಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಆರ್ಜೆಡಿ ಮಕ್ಕಳಿಗೆ ಪಿಸ್ತೂಲು ನೀಡಿದರೆ ನಾವು ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದ್ದೇವೆ; ಪ್ರಧಾನಿ ಮೋದಿ ವಾಗ್ದಾಳಿ
ಫೆಬ್ರವರಿ 3, 2024ರಂದು ಎಲ್.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ನೀಡಲಾಯಿತು. ಬಿಜೆಪಿಯ ಮಾರ್ಗದರ್ಶಕ ಮಂಡಲದ ಸದಸ್ಯರಾದ ಅಡ್ವಾಣಿ 1980 ಮತ್ತು 1990ರ ನಡುವೆ ಬಿಜೆಪಿಯ ಚುನಾವಣಾ ಮತ್ತು ರಾಜಕೀಯ ಉನ್ನತಿಗೆ ಮುಖ್ಯ ಕಾರಣರಾಗಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜೊತೆ ಎಲ್ಕೆ. ಅಡ್ವಾಣಿ ಬಹಳ ಆತ್ಮೀಯ ಸಂಬಂಧ ಹೊಂದಿದ್ದರು. ಇವರಿಬ್ಬರೂ ದೇಶದಲ್ಲಿ ಬಿಜೆಪಿ ನೆಲೆ ನಿಲ್ಲಲು ಮುಖ್ಯ ಕಾರಣೀಭೂತರು.
Delhi | Prime Minister Narendra Modi met and extended birthday greetings to Bharat Ratna and veteran BJP leader LK Advani at the latter’s residence today. pic.twitter.com/SpVppZwAaw
— ANI (@ANI) November 8, 2025
“ಎಲ್.ಕೆ. ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅತ್ಯುನ್ನತ ದೃಷ್ಟಿಕೋನ ಮತ್ತು ಬುದ್ಧಿಶಕ್ತಿಯಿರುವ ರಾಜಕಾರಣಿ ಅಡ್ವಾಣಿ ಅವರ ಜೀವನವು ಭಾರತದ ಪ್ರಗತಿಯನ್ನು ಬಲಪಡಿಸಲು ಸಮರ್ಪಿತವಾಗಿದೆ. ಅವರು ಯಾವಾಗಲೂ ನಿಸ್ವಾರ್ಥ ಕರ್ತವ್ಯ ಮತ್ತು ದೃಢ ತತ್ವಗಳ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇಲೆ ಅಳಿಸಲಾಗದ ಗುರುತು ಮೂಡಿಸಿವೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ” ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ 1990ರ ದಶಕದಲ್ಲಿ ಪಾಲಂಪುರದಲ್ಲಿ (ಹಿಮಾಚಲ ಪ್ರದೇಶ) ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಚಳವಳಿಗೆ ನಾಂದಿ ಹಾಡಿದರು. ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವ ಬೇಡಿಕೆಯನ್ನು ನಿರ್ಣಯದಲ್ಲಿ ಬಿಜೆಪಿ ಅನುಮೋದಿಸಿತ್ತು.
ಇದನ್ನೂ ಓದಿ: ಮೋದಿ ಉದ್ಘಾಟಿಸಿದ ವಂದೇ ಭಾರತ್ನಿಂದ 2 ಗಂಟೆ ಕಡಿಮೆಯಾಗಲಿದೆ ಎರ್ನಾಕುಲಂ-ಬೆಂಗಳೂರು ಪ್ರಯಾಣದ ಸಮಯ
1984ರಲ್ಲಿ ಎರಡು ಸ್ಥಾನಗಳಿದ್ದ ಬಿಜೆಪಿ 1989ರ ಸಾರ್ವತ್ರಿಕ ಚುನಾವಣೆಯಲ್ಲಿ 85, 1991ರಲ್ಲಿ 120, 1996ರಲ್ಲಿ 161 ಮತ್ತು 1999ರಲ್ಲಿ 182 ಲೋಕಸಭಾ ಸ್ಥಾನಗಳನ್ನು ಗಳಿಸಿತು. ಇದಕ್ಕೆ ಕಾರಣರಾದವರಲ್ಲಿ ಎಲ್ಕೆ ಅಡ್ವಾಣಿ ಕೂಡ ಪ್ರಮುಖರು. 1980ರಲ್ಲಿ ಭಾರತೀಯ ಜನತಾ ಪಕ್ಷ ರಚನೆಯಾದಾಗಿನಿಂದ ಅಡ್ವಾಣಿ ಬಿಜೆಪಿಯ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಸಂಸದರಾಗಿ 3 ದಶಕಗಳ ಸುದೀರ್ಘ ಅಧಿಕಾರ ಪಡೆದಿದ್ದ ಅಡ್ವಾಣಿ ಮೊದಲು ಗೃಹ ಸಚಿವರಾದರು. ನಂತರ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ (1999-2004) ಉಪ ಪ್ರಧಾನಿಯಾದರು. 2019ರ ಲೋಕಸಭಾ ಚುನಾವಣೆಯಿಂದ ಹೊರಗುಳಿಯುವ ಮೂಲಕ ಅಡ್ವಾಣಿ 2019ರಲ್ಲಿ ರಾಜಕೀಯದಿಂದ ದೂರ ಉಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ