ಗೋರಖ್ಪುರದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ; ಜುಲೈ 7ರಂದು ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ
ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಪುನರಾಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣವನ್ನು (Gorakhpur Railway Station) ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಪುನರಾಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಪುನರ್ ಅಭಿವೃದ್ಧಿಪಡಿಸಲಾಗುವುದು. ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ನೂತನ ರೈಲು ನಿಲ್ದಾಣ ಹೊಂದಿರಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಹೊಸ ರೈಲು ನಿಲ್ದಾಣವು ಅತ್ಯಾಧುನಿಕ ಸೌಲಭ್ಯಗಳು ಮತ್ತು ಪ್ರಯಾಣಿಕ ಸೌಕರ್ಯಗಳನ್ನು ಒಳಗೊಂಡಿರಲಿದೆ. ಗೋರಖ್‌ಪುರದ ಪರಂಪರೆ ಮತ್ತು ಹೆಗ್ಗುರುತುಗಳು ಹೊಸ ನಿಲ್ದಾಣದ ವಾಸ್ತುಶಿಲ್ಪದ ವಿನ್ಯಾಸದಲ್ಲಿ ಪ್ರತಿಫಲಿಸಲಿದೆ. ಕಾಮಗಾರಿಯು ಎರಡೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ 50 ವರ್ಷಗಳವರೆಗೆ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಯೋಗ್ಯವಾಗಿರುವಂತೆ ಯೋಜನೆ ರೂಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.
ಇದನ್ನೂ ಓದಿ: Maharashtra Politics: ‘ಮಹಾ’ ರಾಜಕೀಯ; ಬಲ ಪ್ರದರ್ಶನದ ಬಳಿಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಅಜಿತ್ ಪವಾರ್
ಜನ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ಹೊಸ ಗೋರಖ್‌ಪುರ ರೈಲು ನಿಲ್ದಾಣವು ವಿಶಾಲವಾಗಿ ಇರಲಿದೆ. ಇದು 6,300 ಚದರ ಮೀಟರ್ ಅಳತೆಯ ಕಾನ್ಕೋರ್ಸ್ನಲ್ಲಿ ವಿಸ್ತರಿಸಿರಲಿದ್ದು, ಏಕಕಾಲದಲ್ಲಿ 3,500 ಜನರು ಪ್ರವೇಶಿಸಬಹುದಾಗಿದೆ. ಛಾವಣಿಯು 31,000 ಚದರ ಮೀಟರ್ ಇರಲಿದ್ದು, 44 ಲಿಫ್ಟ್‌ಗಳು ಮತ್ತು 21 ಎಸ್ಕಲೇಟರ್‌ಗಳು ಇರಲಿವೆ ಎಂಬ ಮಾಹಿತಿ ದೊರೆತಿದೆ.
ಆಧುನಿಕ ಸೌಲಭ್ಯಗಳು, ಆಹಾರ ಮಳಿಗೆಗಳು, ಕಾಯುವ ಹಾಲ್, ಎಟಿಎಂ ಮತ್ತು ಮಕ್ಕಳ ಆಟದ ಪ್ರದೇಶವನ್ನು ನಿಲ್ದಾಣ ಹೊಂದಿರಲಿದೆ. ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಆಸ್ಪತ್ರೆ ಸೌಲಭ್ಯಗಳೂ ಇರಲಿವೆ. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯಗಳ ಸಾಮರ್ಥ್ಯವನ್ನು ವಿಸ್ತರಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 5 July 23