ಕೇರಳದಲ್ಲಿ ಹಾವು ಹಿಡಿಯುತ್ತಿದ್ದಾಗ ವಾವಾ ಸುರೇಶ್ಗೆ ಕಚ್ಚಿದ ನಾಗರ; ಆಸ್ಪ್ರತೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದ ವೈದ್ಯರು
Vava Suresh ವಾವಾ ಸುರೇಶ್ ಅಪಾಯದಿಂದ ಪಾರಾಗುತ್ತಿರುವ ಲಕ್ಷಣಗಳು ಕಾಣಿಸಿವೆ ಎಂದು ಸಚಿವ ವಿ.ಎನ್.ವಾಸವನ್ ಹೇಳಿದರು. ಆರೋಗ್ಯ ಸ್ಥಿತಿ ಸ್ವಲ್ಪ ಸುಧಾರಿಸಿದೆ. ಕೈ ಕಾಲುಗಳಿಗೆ ಚಲನೆ ಇದೆ. ಕರೆದಾಗ ಪ್ರತಿಕ್ರಿಯಿಸುತ್ತಿದ್ದಾರೆ. ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಕೇರಳದ (Kerala) ಜನಪ್ರಿಯ ಹಾವು ಹಿಡಿಯುವ ವ್ಯಕ್ತಿ ವಾವಾ ಸುರೇಶ್ಗೆ (Vava Suresh) ನಾಗರಹಾವು (cobra) ಕಚ್ಚಿದೆ. ಜನವರಿ 31, ಸೋಮವಾರದಂದು ನಾಗರ ಹಾವು ಕಡಿತಕ್ಕೊಳಗಾಗಿ ವಾವಾ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ರಾತ್ರಿ ಸುರೇಶ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಮಂಗಳವಾರ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಟ್ಟು ಕಾಪಾಡುವುದರಲ್ಲಿ ಖ್ಯಾತರಾಗಿದ್ದ ನಲವತ್ತೇಳು ವರ್ಷದ ಸುರೇಶ್, ಕೊಟ್ಟಾಯಂ ಜಿಲ್ಲೆಯ ಚಂಗನಾಶ್ಶೇರಿ ಸಮೀಪದ ಕುರಿಚಿ ಎಂಬ ಹಳ್ಳಿಯ ಮನೆಯೊಂದರಲ್ಲಿ ನಾಗರಹಾವು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಹಾವು ಕಚ್ಚಿದೆ. ಸಳೀಯ ನಿವಾಸಿಯೊಬ್ಬರು ಸೆರೆಹಿಡಿದ ಘಟನೆಯ ವಿಡಿಯೊದಲ್ಲಿ ಸುರೇಶ್ ಅವರು ನಾಗರಹಾವನ್ನು ಗೋಣಿ ಚೀಲದೊಳಗೆ ಹಾಕಲು ಅದರ ಬಾಲವನ್ನು ಕೈಯಲ್ಲಿ ಹಿಡಿದು ತಲೆಕೆಳಗಾಗಿ ಹಿಡಿದಿದ್ದರು. ಆಗ ಹಾವು ಅವರ ಬಲ ತೊಡೆಯ ಮೇಲೆ ಕಚ್ಚಿದೆ. ಮಾಧ್ಯಮ ವರದಿಗಳ ಪ್ರಕಾರ ಸುರೇಶ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರು ಪ್ರಜ್ಞಾಹೀನರಾಗಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದರು. ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ದಿ ಹಿಂದೂ ವರದಿ ಮಾಡಿದೆ. ನಾಗರ ಹಾವು ಕಚ್ಚಿದ ತಕ್ಷಣ ಸುರೇಶ್ ಹಾವನ್ನು ಕೈಯಿಂದ ಬಿಟ್ಟಿದ್ದು, ಅಲ್ಲಿ ಸೇರಿದ ಜನರು ಭಯದಿಂದ ಕಿರುಚಿ ಚದುರುವುದು ವಿಡಿಯೊದಲ್ಲಿದೆ.
“The snake-man of Kerala” Vava Suresh is battling for his life after he was bit by a cobra he was rescuing earlier today. While the govt says they will cover his medical expenses, it’s surprising that even till today most snake catchers in India are not given/use appropriate gear pic.twitter.com/ayF9UIXjx3
— Deepak Bopanna (@dpkBopanna) January 31, 2022
ಆದಾಗ್ಯೂ, ವರದಿಗಳ ಪ್ರಕಾರ ಸ್ಥಳೀಯರು ಸುರೇಶ್ನನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಅವರು ಹಾವನ್ನು ಗೋಣಿ ಚೀಲದಲ್ಲಿ ತುಂಬಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸುರೇಶ್ ಅವರಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಭರವಸೆ ನೀಡಿದ್ದಾರೆ ಮತ್ತು ಅವರ ಆರೋಗ್ಯದ ಬಗ್ಗೆ ಆರೋಗ್ಯ ಅಧಿಕಾರಿಗಳಲ್ಲಿ ವಿಚಾರಿಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಸುರೇಶ್ ಅವರು ಹಾವುಗಳನ್ನು ಹಿಡಿಯಲು ಮತ್ತು ರಕ್ಷಿಸುವುದರಲ್ಲಿ ಖ್ಯಾತರಾಗಿದ್ದಾರೆ. ಅವರ ಸೇವೆಗಳು ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಅವರು ಹಾವುಗಳನ್ನು ಗುರುತಿಸುವ ಜನರ ಸಂಕಷ್ಟದ ಕರೆಗಳಿಗೆ ಸ್ಪಂದಿಸುತ್ತಾರೆ, ಅವುಗಳನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕಾಡಿಗೆ ಬಿಡುತ್ತಾರೆ. ಅವರು ಮಲಯಾಳಂ ಚಾನೆಲ್‌ನಲ್ಲಿ ‘ಸ್ನೇಕ್ ಮಾಸ್ಟರ್’ ಎಂಬ ತಮ್ಮದೇ ಆದ ಟಿವಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
2015ರಲ್ಲಿ 38,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವುದಾಗಿ ಮತ್ತು ಅಲ್ಲಿಯವರೆಗೆ 3,000ಕ್ಕೂ ಹೆಚ್ಚು ಹಾವು ಕಡಿತಕ್ಕೆ ಒಳಗಾಗಿರುವುದಾಗಿ ಸುರೇಶ್ ಹೇಳಿದ್ದರು. ಫೆಬ್ರವರಿ 2020 ರಲ್ಲಿ, ಅವರು ಹಿಡಿಯಲು ಪ್ರಯತ್ನಿಸುತ್ತಿದ್ದ ಪಿಟ್ ವೈಪರ್ ಕಡಿತಕ್ಕೊಳಾಗಿದ್ದರು ಸುರೇಶ್.
ಹೆಸರು ಕರೆದಾಗ ಸುರೇಶ್ ಸ್ಪಂದಿಸುತ್ತಿದ್ದಾರೆ: ಸಚಿವ ವಿ.ಎನ್.ವಾಸವನ್
ವಾವಾ ಸುರೇಶ್ ಅಪಾಯದಿಂದ ಪಾರಾಗುತ್ತಿರುವ ಲಕ್ಷಣಗಳು ಕಾಣಿಸಿವೆ ಎಂದು ಸಚಿವ ವಿ.ಎನ್.ವಾಸವನ್ ಹೇಳಿದರು. ಆರೋಗ್ಯ ಸ್ಥಿತಿ ಸ್ವಲ್ಪ ಸುಧಾರಿಸಿದೆ. ಕೈ ಕಾಲುಗಳಿಗೆ ಚಲನೆ ಇದೆ. ಕರೆದಾಗ ಪ್ರತಿಕ್ರಿಯಿಸುತ್ತಿದ್ದಾರೆ. ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಾವಾ ಸುರೇಶ್ ಇದುವರೆಗೆ ಅತ್ಯಂತ ಅಪಾಯಕಾರಿ ಹಾವಿನಿಂದ ಕಡಿತಕ್ಕೊಳಗಾಗಿದ್ದು ಇದೇ ಮೊದಲು. ಇಂದು ವಾವಸುರೇಶ್ ಅವರಿಗೆ ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಆಧುನಿಕ ವೈದ್ಯಪದ್ಧತಿಯಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ. ಐಸಿಯುನಲ್ಲಿ 18 ಗಂಟೆಗಳ ನಂತರ ಸುರೇಶ್ ಅವರ ಆರೋಗ್ಯ ಸುಧಾರಿಸಿದೆ ಎಂದು ಕೊಟ್ಟಾಯಂ ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ. ಟಿ.ಕೆ.ಜಯಕುಮಾರ್ ಮಾಹಿತಿ ನೀಡಿದರು. ಹೃದಯ ಬಡಿತ ಮತ್ತು ರಕ್ತದೊತ್ತಡ ನಾರ್ಮಲ್ ಇದೆ. ಅವರು ಔಷಧಿಗಳಿಗೆ ಸ್ಪಂದಿಸಿದ್ದಾರೆ ಮತ್ತು ಕರೆದಾಗ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ ಎಂದು ಟಿ.ಕೆ.ಜಯಕುಮಾರ್ ಹೇಳಿರುವುದಾಗಿ ಮನೋರಮಾ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಭಯದಲ್ಲೇ ಕೆರೆ ಹಾವು ಮುಟ್ಟಿ ಸಂಭ್ರಮಿಸಿದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್
Published On - 8:15 pm, Tue, 1 February 22