West Bengal Violence: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ನಡುವೆ ಸಂಘರ್ಷ; ಮನೆಗಳು ಧ್ವಂಸ, ಹಲವಾರು ಮಂದಿ ಸಾವು

|

Updated on: May 04, 2021 | 12:13 PM

BJP TMC Clash: ಸೋಮವಾರ ಕೊಲ್ಕತ್ತಾ ಸೇರಿ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪೂರ್ಬ ಬರ್ದಮಾನ್ ಜಿಲ್ಲೆಯಲ್ಲಿ ಬಿಜೆಪಿ-ಟಿಎಂಸಿ ನಡುವಿನ ಗಲಭೆಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

West Bengal Violence: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಬಿಜೆಪಿ ನಡುವೆ ಸಂಘರ್ಷ; ಮನೆಗಳು ಧ್ವಂಸ, ಹಲವಾರು ಮಂದಿ ಸಾವು
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಾಲಯವನ್ನು ಟಿಎಂಸಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ಕೂಡಲೇ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಸಂಘರ್ಷವೇರ್ಪಟ್ಟಿದ್ದು ಹಲವಾರು ಮನೆಗಳು ಧ್ವಂಸವಾಗಿವೆ. ಸೋಮವಾರ ಕೊಲ್ಕತ್ತಾ ಸೇರಿ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪೂರ್ಬ ಬರ್ದಮಾನ್ ಜಿಲ್ಲೆಯಲ್ಲಿ ಬಿಜೆಪಿ-ಟಿಎಂಸಿ ನಡುವಿನ ಗಲಭೆಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಬಂಗಾಳ ಸರ್ಕಾರದಿಂದ ವರದಿ ಕೇಳಿದೆ.
ವಿಪಕ್ಷದ ಕಾರ್ಯಕರ್ತರನ್ನು ಗುರಿಯಾಗಿರಿಸಿ ಹಿಂಸಾಚಾರ ನಡೆದಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.


ಬಿಜೆಪಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದ್ದು, ಬಿಜೆಪಿ ಈ ಆರೋಪ ನಿರಾಕರಿಸಿ ಇದು ಜನರ ಪ್ರತಿಭಟನೆಯ ಪರಿಣಾಮ ಎಂದಿದೆ. ಟಿಎಂಸಿ ಕಾರ್ಯಕರ್ತರು ನಂದಿಗ್ರಾಮಕ್ಕೆ ಹೋಗುತ್ತಿದ್ದಾಗ ಜಮಾಲ್​ಪುರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮೊಟಾರ್ ಸೈಕಲ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ಹೇಳಿದೆ. ಈ ದಾಳಿಯಲ್ಲಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದು ಇದರಲ್ಲಿ ಇಬ್ಬರನ್ನು ಬುರ್ಧ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿವೆ.
ಈ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಜಮಾಲ್​ಪುರ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಈಕೆ ಬಿಜೆಪಿ ಬೆಂಬಲಿಗರಾಗಿದ್ದರು ಎಂದು ಸ್ಥಳೀಯ ಬಿಜೆಪಿ ನಾಯಕ ಆಶಿಶ್ ಕ್ಷೇತ್ರಪಾಲ್ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಟಿಎಂಸಿ ಕಾರ್ಯಕರ್ತರು ಹರ್ಷೋದ್ಗಾರ ಮಾಡಿಕೊಂಡು ಬರುತ್ತಿದ್ದರು. ನಾವು ಪ್ರತಿರೋಧ ವ್ಯಕ್ತಪಡಿಸಿದಾಗ ಟಿಎಂಸಿ ದಾಳಿಕೋರರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆಮೇಲೆ ಅವರು ಬೇರೊಂದು ದಾರಿಯಾಗಿಬಂದು ನನ್ನ ಮನೆಗೆ ನುಗ್ಗಿ ನನ್ನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಅಮ್ಮ ಹೃದಯಾಘಾತದಿಂದ ಸಾವಿಗೀಡಾದರು ಎಂದಿದ್ದಾರ ಆಶಿಶ್ ಕ್ಷೇತ್ರಪಾಲ್. ಟಿಎಂಸಿ ಕಾರ್ಯಕರ್ತರು ನನ್ನ ಅಪ್ಪ ಮತ್ತು ಚಿಕ್ಕಪ್ಪನ ಮೇಲೂ ಅವರು ದಾಳಿ ನಡೆಸಿದ್ದಾರೆ. ಈ ಪ್ರದೇಶದ ಸುಮಾರು 17-18 ಮನೆಗೆ ನುಗ್ಗಿ ದಾಂಧಲೆ ನಡೆಸಿ ಲೂಟಿಮಾಡಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ 23 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಈ ಪ್ರದೇಶದಲ್ಲಿ ಕೇಂದ್ರ ಪಡೆಗಳ ಬೃಹತ್ ತುಕಡಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಮಾಲ್‌ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈನಾ ಪೊಲೀಸ್ ಠಾಣೆ ಪ್ರದೇಶದ ಸಮಸ್ಪುರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಫಲಿತಾಂಶ ಪ್ರಕಟವಾದ ನಂತರ ಭಾನುವಾರ ರಾತ್ರಿ ಟಿಎಂಸಿ-ಬಿಜೆಪಿ ಘರ್ಷಣೆಯಲ್ಲಿ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಟಿಎಂಸಿ ಬೆಂಬಲಿಗ ಗಣೇಶ್ ಮಲ್ಲಿಕ್ ಅವರ ಮೇಲೆ ಬಿದಿರಿನ ಕೋಲುಗಳಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಅವರನ್ನು ಬುರ್ಧ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮಲ್ ರಾಯ್ ಈ ಘಟನೆ ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದು, ಟಿಎಂಸಿ ವಕ್ತಾರ ಪ್ರೊಸೆಂಜಿತ್ ದಾಸ್ ಅವರು ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಟಿಎಂಸಿ ಬೆಂಬಲಿಗರು ಗಾಲ್ಸಿ ಪ್ರದೇಶದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ ಎಂಬ ಆರೋಪವೂ ಇದೆ. ಭಾನುವಾರ ತಡರಾತ್ರಿ ಕಂಕುರ್ಗಚಿ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರೊಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಜಾದವ್‌ಪುರ ಪ್ರದೇಶದ ಕೆಲವು ಮನೆಗಳನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ, ಅವರು ಟಿಎಂಸಿ ಸದಸ್ಯರೆಂದು ಆರೋಪಿಸಲಾಗಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದಾಗಿನಿಂದ ತೃಣಮೂಲ ಕಾಂಗ್ರೆಸ್ ಬೆಂಬಲಿತ ದುಷ್ಕರ್ಮಿಗಳ ದಾಳಿಯಲ್ಲಿ ಪಕ್ಷದ ಕನಿಷ್ಠ ಐದು ಮಂದಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಪಕ್ಷದ ಕಾರ್ಯಕರ್ತರಿಗೆ ಸೇರಿದ ಸಾವಿರಾರು ಮನೆಗಳಿಗೆ ಹಾನಿಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯ ಪೊಲೀಸರು ಅಥವಾ ಆಡಳಿತವು ಅವರ ಸಹಾಯಕ್ಕೆ ಬಂದಿಲ್ಲ ಎಂದಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಜಗದ್ದಾಲ್‌ನಲ್ಲಿ ಟಿಎಂಸಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಬೂತ್ ಅಧ್ಯಕ್ಷರ ತಾಯಿ ಹತ್ಯೆಗೀಡಾಗಿದ್ದೆ ಮತ್ತು ದಕ್ಷಿಣ 24 ಪರಗಣದ ಸೋನಾರ್‌ಪುರದಲ್ಲಿ ಇನ್ನೊಬ್ಬ ವ್ಯಕ್ತಿಯ ಹತ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ. ನಗರದ ಬೇಲೆಘಾಟಾ ಪ್ರದೇಶದಲ್ಲಿ ಮತ್ತೊಬ್ಬ ಬಿಜೆಪಿ ಬೆಂಬಲಿಗ ಸಾವನ್ನಪ್ಪಿದ್ದು ನಾಡಿಯಾ ಜಿಲ್ಲೆಯ ರಣಘಾಟ್ ಮತ್ತು ಕೂಚ್‌ಬೆಹಾರ್‌ನ ಸಿತಾಲ್ಕುಚಿಯಲ್ಲಿ ಇದೇ ರೀತಿಯ ದಾಳಿಯಲ್ಲಿ ಇತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಉತ್ತರ 24 ಪರಗಣಗಳ ಕದಂಬಗಾಚಿಯಲ್ಲಿ ಐಎಸ್ಎಫ್ ಬೆಂಬಲಿಗನನ್ನು ಹತ್ಯೆಗೈದ ವರದಿಗಳಿವೆ ಎಂದು ಘೋಷ್ ಹೇಳಿದ್ದಾರೆ. ಅನಿರೀಕ್ಷಿತವಾಗಿ ಗೆದ್ದ ನಂತರ ಟಿಎಂಸಿ ಕಾರ್ಯಕರ್ತರು ಆಡಳಿತ ಪಕ್ಷದ ಮೌನ ಸಮ್ಮತಿಯೊಂದಿಗೆ ವಿರೋಧ ಪಕ್ಷಗಳ ಕಾರ್ಯಕರ್ತರು ಮತ್ತು ಅವರ ಕುಟುಂಬಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಘೋಷ್ ಹೇಳಿದ್ದಾರೆ.

ದಾಳಿಯ ವಿವರಗಳನ್ನು ಬಗ್ಗೆ ಮಾಹಿತಿ ನೀಡಲು ರಾಜ್ಯಪಾಲ ಜಗದೀಪ್ ಧನ್ ಕರ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಬಿಜೆಪಿ ಸಂಪರ್ಕಿಸಲಿದೆ ಮತ್ತು ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಲಿದೆ ಎಂದು ಘೋಷ್ ಹೇಳಿದರು. ಅದೇ ಸಮಯದಲ್ಲಿ ಅವರು ಟಿಎಂಸಿಗೆ ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸಹಕಾರ ನೀಡುತ್ತೇವೆ. ಈ ವಿಷಯದಲ್ಲಿ ಅವರ ನಿಲುವನ್ನು ನಾವು ಎದುರು ನೋಡುತ್ತೇವೆ ಎಂದು ಹೇಳಿದರು.

ಉತ್ತರ ಬಂಗಾಳದ ಜಲ್ಪೈಗುರಿಯಿಂದ ಮತದಾನದ ನಂತರದ ಹಿಂಸಾಚಾರ ನಡೆದಿರುವ ಬಗ್ಗೆ ವರದಿ ಆಗಿದೆ. ನೂತನವಾಗಿ ಚುನಾಯಿತರಾದ ಡಬ್ಗ್ರಾಮ್-ಫುಲ್ಬಾರಿ ಶಾಸಕ, ಬಿಜೆಪಿಯ ಶಿಖಾ ಚಟರ್ಜಿ, ಟಿಎಂಸಿ ಬೆಂಬಲಿತ ದುಷ್ಕರ್ಮಿಗಳು ಆಕೆಯ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದಾಬಗ್ರಾಮ್-ಫುಲ್ಬಾರಿ ಕ್ಷೇತ್ರದ ಚುನಭತಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸ ಮಾಡಲಾಗಿದೆ ಮತ್ತು ವಾಹನಕ್ಕೆ ಹಾನಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಕ್ಷೇತ್ರದಲ್ಲಿ ರಾಜ್ಯ ಸಚಿವ ಮತ್ತು ಟಿಎಂಸಿಯ ಹಿರಿಯ ಮುಖಂಡ ಗೌತಮ್ ದೇಬ್ ಅವರನ್ನು ಬಿಜೆಪಿ ಸೋಲಿಸಿತ್ತು. ಮೊಯನಗುರಿಯಲ್ಲಿ ಚುವಾಡಂಗಾ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇದರಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಮತ್ತು ಮೋಟಾರು ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದ ಹಲವಾರು ಮನೆಗಳನ್ನು ಸಹ ಧ್ವಂಸ ಮಾಡಲಾಗಿದೆ, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರು ತಮ್ಮ ಬೆಂಬಲಿಗರು ಎಂದು ಬಿಜೆಪಿ ಹೇಳಿಕೊಂಡಿದ್ದು, ಘರ್ಷಣೆಯಲ್ಲಿ ನಮ್ಮ ಪಾತ್ರವಿಲ್ಲ ಎಂದು ಟಿಎಂಸಿ ಹೇಳಿದೆ.

ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಆರ್‌ಎಎಫ್ ಅನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Mamata Banerjee: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮೇ 5ರಂದು ಮಮತಾ ಬ್ಯಾನರ್ಜಿ ಪ್ರಮಾಣ ವಚನ

Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ

(Post Poll Clashes Between TMC and BJP in West Bengal Homes party office Vandalised Several Killed)

Published On - 12:13 pm, Tue, 4 May 21