President of India: ಭಾರತದ ರಾಷ್ಟ್ರಪತಿಗೆ ಇರುವ ಅಧಿಕಾರಗಳೇನು? ರಾಷ್ಟ್ರಪತಿ ಭವನದ ವಿಶೇಷತೆಗಳೇನು? ರಾಷ್ಟ್ರಪತಿಗಳ ಕುರಿತ ವಿವಾದವೇನು?
ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು. ಕೇಂದ್ರ ಸರ್ಕಾರಕ್ಕೂ ರಾಷ್ಟ್ರಪತಿಗಳೇ ಹೆಡ್. ಕೇಂದ್ರ ಸರ್ಕಾರ ಯಾವುದೇ ಮಹತ್ವದ ಆದೇಶ ಹೊರಡಿಸಬೇಕಾದರೂ ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಬೇಕೇ ಬೇಕು. ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೆ ಸರ್ಕಾರ ಯಾವುದೇ ಕೆಲಸ ಮಾಡುವಂತಿಲ್ಲ.
ನವದೆಹಲಿ: ಭಾರತ ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Droupadi Murmu) ಆಯ್ಕೆಯಾಗಿದ್ದಾರೆ. ಜುಲೈ 25ರಂದು ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇದುವರೆಗೂ ಆಳ್ವಿಕೆ ನಡೆಸಿದ ರಾಷ್ಟ್ರಪತಿಗಳು ಕೆಲವು ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ರಾಷ್ಟ್ರಪತಿಗಳ ಸುತ್ತ ಇರುವ ವಿವಾದಗಳೇನು?, ರಾಷ್ಟ್ರಪತಿಗಳಿಗೆ ಇರುವ ಅಧಿಕಾರಗಳೇನು? ರಾಷ್ಟ್ರಪತಿ ಭವನದ (Rashtrapati Bhavan) ವಿಶೇಷತೆಗಳೇನು? ಎಂಬುದನ್ನು ವಿವರಿಸುವ ವಿಶೇಷ ವರದಿ ಇಲ್ಲಿದೆ.
ರಾಷ್ಟ್ರಪತಿಗಳೇ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರೂ ಹೌದು. ಹೀಗಾಗಿ, ಕೇಂದ್ರ ಸರ್ಕಾರ ಯಾವುದೇ ಅಧಿಕಾರ ಚಲಾಯಿಸಬೇಕಾದರೂ ರಾಷ್ಟ್ರಪತಿಗಳ ಹೆಸರಿನಲ್ಲಿ ಚಲಾಯಿಸಬೇಕು. ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೆ, ಕೇಂದ್ರ ಸರ್ಕಾರ ಯಾವುದೇ ಕೆಲಸ ಕೂಡ ಮಾಡುವಂತಿಲ್ಲ. ರಾಷ್ಟ್ರಪತಿಗಳೇ ಕಾರ್ಯಾಂಗದ ಮುಖ್ಯಸ್ಥರಾಗಿದ್ದು, ಕೇಂದ್ರ ಸರ್ಕಾರಕ್ಕೂ ಮುಖ್ಯಸ್ಥರಾಗಿರುತ್ತಾರೆ.
ರಾಷ್ಟ್ರಪತಿಗೆ ಇರುವ ಅಧಿಕಾರಗಳು: ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು. ಕೇಂದ್ರ ಸರ್ಕಾರಕ್ಕೂ ರಾಷ್ಟ್ರಪತಿಗಳೇ ಹೆಡ್. ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಬೇಕಾದರೂ, ಏನೇ ಮಹತ್ವದ ತೀರ್ಮಾನ ಕೈಗೊಂಡರೂ, ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಬೇಕೇ ಬೇಕು. ರಾಷ್ಟ್ರಪತಿಗಳು ಸಂವಿಧಾನದ ಮುಖ್ಯಸ್ಥರು. ರಾಷ್ಟ್ರಪತಿಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಹಣಕಾಸು, ತುರ್ತು ಪರಿಸ್ಥಿತಿ, ಸೇನಾ ಅಧಿಕಾರಗಳು ಸೇರಿದಂತೆ ಅನೇಕ ಮಹತ್ವದ ಅಧಿಕಾರಗಳಿವೆ.
ರಾಷ್ಟ್ರಪತಿಗಳು ಪಾರ್ಲಿಮೆಂಟ್‌ನ ಎರಡು ಸದನಗಳ ಅಧಿವೇಶನ ಕರೆಯಬಹುದು. ಎಲ್ಲ ಮಸೂದೆಗಳಿಗೂ ರಾಷ್ಟ್ರಪತಿಗಳು ಸಹಿ ಹಾಕಿದ ನಂತರವೇ ಕಾಯಿದೆ ಆಗಿ ಜಾರಿಯಾಗುತ್ತವೆ. ಹಣಕಾಸು ಮಸೂದೆ, ಸಂವಿಧಾನ ತಿದ್ದುಪಡಿ ಮಸೂದೆ ಹೊರತುಪಡಿಸಿ ಉಳಿದೆಲ್ಲ ಮಸೂದೆಗಳನ್ನು ಸಂಸತ್‌ಗೆ ಮರುಪರಿಶೀಲನೆಗೆ ವಾಪಾಸ್ ಕಳುಹಿಸಬಹುದು. ಸಂಸತ್ ಮತ್ತೆ ವಾಪಾಸ್ ರಾಷ್ಟ್ರಪತಿಗೆ ಕಳುಹಿಸಿದಾಗ, ಒಪ್ಪಿಗೆ ನೀಡಲೇಬೇಕಾಗುತ್ತದೆ. ಮಸೂದೆಗಳನ್ನು ರಾಷ್ಟ್ರಪತಿ ತಡೆ ಹಿಡಿಯಬಹುದು. ಸಂಸತ್ ಅಧಿವೇಶನ ನಡೆಯದೇ ಇದ್ದಾಗ, ಸುಗ್ರೀವಾಜ್ಞೆ ಮೂಲಕ ಕಾಯಿದೆಗಳನ್ನು ಜಾರಿಗೊಳಿಸಬಹುದು.
ಇದನ್ನೂ ಓದಿ: President of India: ಭಾರತದ ರಾಷ್ಟ್ರಪತಿಯ ವೇತನವೆಷ್ಟು? ನಿವಾಸ ಹೇಗಿದೆ? ಬಳಸುವ ಕಾರು ಎಂಥದ್ದು? ಇತ್ಯಾದಿ ವಿವರಗಳು ಇಲ್ಲಿದೆ
ಪ್ರಧಾನಮಂತ್ರಿ ಮತ್ತು ಪ್ರಧಾನಿ ಸಲಹೆ ಮೇರೆಗೆ ಸಚಿವರನ್ನು ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಗೆ ಇದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನ ನೇಮಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ. ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಕ್ಷಮಾದಾನ ನೀಡುವ, ಶಿಕ್ಷೆ ಕಡಿಮೆ ಮಾಡುವ ಅಧಿಕಾರ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.
ರಾಷ್ಟ್ರಪತಿ ಸಂವಿಧಾನದತ್ತವಾದ ಅಧಿಕಾರವನ್ನು ಬಳಸಿಕೊಂಡು ತುರ್ತು ಪರಿಸ್ಥಿತಿ ಘೋಷಿಸಬಹುದು. ಆದರೆ, ಇದಕ್ಕೆ ಕೇಂದ್ರದ ಕ್ಯಾಬಿನೆಟ್‌ನ ಶಿಫಾರಸ್ಸು ಅಗತ್ಯ. ಸಂವಿಧಾನದ 352ನೇ ವಿಧಿಯ ಪ್ರಕಾರ, ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಬಹುದು. ದೇಶ ಯುದ್ಧದ ಸ್ಥಿತಿ, ಅಂತರಿಕವಾಗಿ ಅಶಾಂತಿಯ ವಾತಾವರಣ ನಿರ್ಮಾಣವಾದಾಗ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಬಹುದು. ಸಂವಿಧಾನದ 356ನೇ ವಿಧಿಯ ಪ್ರಕಾರ, ರಾಜ್ಯಗಳಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಾಗ, ಸಂವಿಧಾನಿಕ ಬಿಕ್ಕಟ್ಟು ನಿರ್ಮಾಣವಾದಾಗ, ಆ ರಾಜ್ಯದ ವಿಧಾನಸಭೆ ಅಮಾನತ್ತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ಸಂವಿಧಾನದ 360ನೇ ವಿಧಿ ಪ್ರಕಾರ, ದೇಶದಲ್ಲಿ ಹಣಕಾಸು ಬಿಕ್ಕಟ್ಟು ತಲೆದೋರಿದಾಗ, ಹಣಕಾಸು ತುರ್ತು ಪರಿಸ್ಥಿತಿ ಘೋಷಿಸಬಹುದು.
ರಾಷ್ಟ್ರಪತಿಗಳೇ ಕಮ್ಯಾಂಡರ್ ಇನ್ ಚೀಫ್ ಆಫ್ ಆರ್ಮಿ. ಸೇನೆಯ ಮಹಾದಂಡನಾಯಕರು. ಸೇನೆಗೂ ರಾಷ್ಟ್ರಪತಿಗಳೇ ಬಾಸ್. ರಾಷ್ಟ್ರಪತಿಯನ್ನು ಹುದ್ದೆಯಿಂದ ಕೆಳಗಿಳಿಸಲು ಸಂವಿಧಾನದಲ್ಲಿ ಅವಕಾಶ ಇದೆ. ಮಹಾಭಿಯೋಗದ ಮೂಲಕ ರಾಷ್ಟ್ರಪತಿಯನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಇದಕ್ಕೆ ಸಂಸತ್ತಿನ ಮೂರನೇ ಎರಡರಷ್ಟು ಬಹುಮತ ಅಗತ್ಯ. ಆದರೆ, ಇದುವರೆಗೂ ಯಾವುದೇ ರಾಷ್ಟ್ರಪತಿಯನ್ನು ಮಹಾಭಿಯೋಗದ ಮೂಲಕ ಪದಚ್ಯುತಿಗೊಳಿಸಿದ ಉಹಾಹರಣೆ ಇಲ್ಲ. ರಾಷ್ಟ್ರಪತಿ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ. ಕ್ರಿಮಿನಲ್ ಕೇಸ್ನಿಂದ ರಾಷ್ಟ್ರಪತಿಗೆ ವಿನಾಯಿತಿ ನೀಡಲಾಗಿದೆ. ಅಷ್ಟೇ ಅಲ್ಲ, ತಮ್ಮ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವಾಗ ಅವರು ಯಾರಿಗೂ ಉತ್ತರ ನೀಡಬೇಕಾದ ಅಗತ್ಯವೂ ಇಲ್ಲ.
ರಾಷ್ಟ್ರಪತಿಯ ಸುತ್ತ ಇರುವ ವಿವಾದಗಳು: ನಮ್ಮ ದೇಶದಲ್ಲಿ ವಿವಾದದಿಂದ ಹೊರತಾದವರು ಯಾರೂ ಇಲ್ಲ. ರಾಷ್ಟ್ರಪತಿ ಹುದ್ದೆಯಲ್ಲಿದ್ದವರು ಕೂಡ ಅನೇಕ ಸಂದರ್ಭಗಳಲ್ಲಿ ವಿವಾದಕ್ಕೆ ಒಳಗಾಗಿದ್ದಾರೆ. 1982ರಲ್ಲಿ ಗ್ಯಾನಿ ಜೇಲ್ ಸಿಂಗ್ ದೇಶದ ರಾಷ್ಟ್ರಪತಿ ಆಗಿ ಆಯ್ಕೆಯಾದರು. ಆದರೆ, 1984ರಲ್ಲಿ ದೆಹಲಿಯಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಹತ್ಯೆ ನಡೆಯಿತು. ಹತ್ಯೆಯಾಗುತ್ತಿದ್ದಂತೆ, ದೆಹಲಿಯ ರಸ್ತೆಗಳಲ್ಲಿ ಸಿಖ್ಖ್ ಸಮುದಾಯದ ಜನರ ಮಾರಣಹೋಮ ನಡೆಯಿತು. ಈ ಮಾರಣಹೋಮವನ್ನು ತಡೆಯಲು ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಯತ್ನಿಸಿದ್ದರು. ಆದರೆ ದೆಹಲಿ ಪೊಲೀಸ್ ಕಮೀಷನರ್, ಕೇಂದ್ರ ಗೃಹ ಸಚಿವರು ಸೇರಿದಂತೆ ಯಾರೊಬ್ಬರು ಕೂಡ ಗ್ಯಾನಿ ಜೇಲ್ ಸಿಂಗ್ ಮನವಿಗೆ ಸ್ಪಂದಿಸಲೇ ಇಲ್ಲ. ಬಳಿಕ ಇಂದಿರಾ ಪುತ್ರ ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿ ಆಯ್ಕೆಯಾದರು. ರಾಜೀವ್ ಗಾಂಧಿಗೆ ಗ್ಯಾನಿ ಜೇಲ್ ಸಿಂಗ್ ಪ್ರಮಾಣವಚನ ಭೋಧಿಸಿದ್ದರು. ರಾಜೀವ್ ಗಾಂಧಿಗೆ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಎಲ್ಲಿ ತಮ್ಮ ಸರ್ಕಾರವನ್ನು ವಜಾ ಮಾಡಿಬಿಡ್ತಾರೋ ಎಂಬ ಆತಂಕ, ಅನುಮಾನಗಳಿದ್ದವು. ತಮ್ಮ ಸರ್ಕಾರವನ್ನು ಉರುಳಿಸಲು ಗ್ಯಾನಿ ಜೇಲ್ ಸಿಂಗ್ ಯತ್ನಿಸುತ್ತಿದ್ದಾರೆ ಎಂಬ ಅನುಮಾನ ರಾಜೀವ್ ಗಾಂಧಿಗೆ ಇತ್ತು. ಹೀಗಾಗಿ ಗ್ಯಾನಿ ಜೇಲ್ ಸಿಂಗ್ ಮೇಲೆ ಕಣ್ಣಿಡಲು ರಾಷ್ಟ್ರಪತಿ ಭವನದಲ್ಲಿ ಗುಪ್ತಚರರನ್ನು ನೇಮಿಸಿಬಿಟ್ಟಿದ್ದರು. ಈ ಸೀಕ್ರೆಟ್ ಟೀಮ್ ಗ್ಯಾನಿ ಜೇಲ್ ಸಿಂಗ್ ಚಲನವಲನ, ಯಾರ್ಯಾರನ್ನು ಭೇಟಿಯಾಗ್ತಾರೆ, ಯಾವ ಫೈಲ್‌ಗೆ ಸಹಿ ಹಾಕಿದ್ದಾರೆ ಎಂಬ ರಹಸ್ಯ ಮಾಹಿತಿಗಳನ್ನು ಪ್ರಧಾನಿ ರಾಜೀವ್ ಗಾಂಧಿಗೆ ರವಾನಿಸುತ್ತಿತ್ತು.
ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು
ಇಂದಿರಾ ಗಾಂಧಿ ತಮ್ಮ ಪ್ರಧಾನಿ ಕುರ್ಚಿಯನ್ನು ಉಳಿಸಿಕೊಳ್ಳಲು 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿದ್ದರು. ಇದಕ್ಕೆ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹಮದ್ ಕಣ್ಣು ಮುಚ್ಚಿಕೊಂಡು ಸಹಿ ಹಾಕಿಬಿಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರವನ್ನು ಬಳಸಲೇ ಇಲ್ಲ. ಪರಿಣಾಮವಾಗಿ ಜನರ ಮೂಲಭೂತ ಹಕ್ಕುಗಳ ಹರಣವಾಯಿತು. ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಫಕ್ರುದ್ದೀನ್ ಆಲಿ ಅಹಮದ್ , ಪ್ರಧಾನಿ ಕಳುಹಿಸಿದ ಎಲ್ಲ ಸುಗ್ರೀವಾಜ್ಞೆಗಳಿಗೂ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಿದ್ದರು. ಇದು ಆಗ ಮಾಧ್ಯಮಗಳಲ್ಲಿ ಚರ್ಚೆ, ಟೀಕೆಗೆ ಕಾರಣವಾಗಿತ್ತು. ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹಮದ್ ಸ್ನಾನದ ಮನೆಯಿಂದ ಬಂದವರೇ ಒದ್ದೆ ಬಟ್ಟೆ, ಒದ್ದೆ ಮೈಯಲ್ಲೇ ಸುಗ್ರೀವಾಜ್ಞೆಯ ಫೈಲ್ಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಕಾರ್ಟೂನ್ ಪ್ರಕಟವಾಗಿದ್ದವು. ಯಾವುದಾದರೂ ಕಡತ ಇದ್ದರೆ ಹೇಳಿ, ಹತ್ತೇ ನಿಮಿಷದಲ್ಲಿ ಸಹಿ ಹಾಕಿಬಿಡುತ್ತೇನೆ ಎಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಫೈಲ್ ತರುತ್ತಿದ್ದ ಇಂದಿರಾಗಾಂಧಿ ಬಂಟರಿಗೆ ಹೇಳುತ್ತಿದ್ದರು.
1987ರಲ್ಲಿ ರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದ ಆರ್. ವೆಂಕಟರಾಮನ್ ಅವರ ಅವಧಿ 1992ರಲ್ಲಿ ಅಂತ್ಯವಾಗಿತ್ತು. ಆದರೆ, ರಾಷ್ಟ್ರಪತಿ ಭವನ ಖಾಲಿ ಮಾಡುವಾಗ, ವೆಂಕಟರಾಮನ್ ಪತ್ನಿ ರಾಷ್ಟ್ರಪತಿ ಭವನದ ಪೀಠೋಪಕರಣಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಿದ್ದರು.
2005ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆದ ಬಳಿಕ ಯಾವುದೇ ಪಕ್ಷಕ್ಕೂ ಬಹುಮತ ಇರಲಿಲ್ಲ. ಆದರೆ, ಹೆಚ್ಚಿನ ಸ್ಥಾನ ಪಡೆದ ಜೆಡಿಯು-ಬಿಜೆಪಿ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ರಾಜ್ಯಪಾಲ ಬೂಟಾ ಸಿಂಗ್ ಆಹ್ವಾನಿಸಬೇಕಾಗಿತ್ತು. ಆದರೆ, ಈ ಕೆಲಸ ಮಾಡದೇ, ಪಕ್ಷಪಾತದಿಂದ ವರ್ತಿಸಿದ ಬೂಟಾ ಸಿಂಗ್, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು. ಕೇಂದ್ರದ ಕ್ಯಾಬಿನೆಟ್ ಕೂಡ ಇದನ್ನೇ ರಾಷ್ಟ್ರಪತಿಗೆ ಕಳಿಸಿತ್ತು. ರಷ್ಯಾದ ಮಾಸ್ಕೋದಲ್ಲಿದ್ದ ರಾಷ್ಟ್ರಪತಿ ಅಬ್ದುಲ್ ಕಲಾಂ ಇದಕ್ಕೂ ಸಹಿ ಹಾಕಿಬಿಟ್ಟಿದ್ದರು. ಆದರೇ, ಬಳಿಕ ಸುಪ್ರೀಂಕೋರ್ಟ್, ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದು ತಪ್ಪು ಎಂದು ತೀರ್ಪು ನೀಡಿತ್ತು. ಇದರಿಂದ ಅಬ್ದುಲ್ ಕಲಾಂ ಅವರಿಗೂ ಮುಖಭಂಗ ಆಯಿತು. ನೈತಿಕ ಹೊಣೆ ಹೊತ್ತು ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಲು ಅಬ್ದುಲ್ ಕಲಾಂ ಮುಂದಾಗಿದ್ದರು. ಆದರೆ, ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ನೀವು ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದರೆ ಕೇಂದ್ರ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ಹೇಳಿ ರಾಜೀನಾಮೆ ನೀಡದಂತೆ ಮನವೊಲಿಸಿದ್ದರು.
ಇದನ್ನೂ ಓದಿ: Ram Nath Kovind: ಐಷಾರಾಮಿ ಬಂಗಲೆ, 1.5 ಲಕ್ಷ ರೂ. ಪೆನ್ಷನ್; ನಿವೃತ್ತರಾದ ರಾಷ್ಟ್ರಪತಿಗೆ ಏನೆಲ್ಲ ಸೌಲಭ್ಯ ಸಿಗುತ್ತೆ ಗೊತ್ತಾ?
2006ರಲ್ಲಿ ಕೇಂದ್ರ ಸರ್ಕಾರ ಕಳುಹಿಸಿದ್ದ ಲಾಭದಾಯಕ ಹುದ್ದೆ ಮಸೂದೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹಿ ಹಾಕದೆ, ವಾಪಸ್ ಕಳುಹಿಸಿದ್ದರು. ಬಳಿಕ ಕೇಂದ್ರ ಸರ್ಕಾರ ಮತ್ತೆ ಕಳುಹಿಸಿದಾಗ, ಬೇರೆ ದಾರಿ ಇಲ್ಲದೆ ಅಬ್ದುಲ್ ಕಲಾಂ ಮಸೂದೆಗೆ ಸಹಿ ಹಾಕಿದ್ದರು.
ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಸಾಮೂಹಿಕ ಹತ್ಯಾಕಾಂಡದ ಅಪರಾಧಿಗಳು ಸೇರಿದಂತೆ ಸತ್ತವರಿಗೂ ಕ್ಷಮಾದಾನ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ವಿದೇಶ ಪ್ರವಾಸಕ್ಕೆ ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿ ದೇಶದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದರು. ಪುಣೆಯಲ್ಲಿ ಸೇನೆಗೆ ಸೇರಿದ ಭೂಮಿಯನ್ನು ತಮ್ಮ ವಾಸದ ಮನೆ ಕಟ್ಟಲು ಮಂಜೂರು ಮಾಡಿಸಿಕೊಂಡಿದ್ದರು. ಸಾರ್ವಜನಿಕ ವಿರೋಧ ವ್ಯಕ್ತವಾದ ಬಳಿಕ ನಿವೇಶನ ವಾಪಸ್ ಮಾಡಿದ್ದರು.
ಇದೆಲ್ಲದರ ಮಧ್ಯೆ ಕೆಲವರು ವಿವಾದಕ್ಕೊಳಗಾಗದೆ, ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಕೆ.ಆರ್. ನಾರಾಯಣನ್ ಅವರು 1996-97ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೇ ಇದ್ದಾಗ, ಹೆಚ್ಚಿನ ಸ್ಥಾನ ಪಡೆದಿದ್ದ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟು, ಪ್ರಜಾಪ್ರಭುತ್ವದ ತತ್ವಕ್ಕೆ ಅನುಗುಣವಾಗಿ ನಡೆದುಕೊಂಡರು. ವಾಜಪೇಯಿ ಆಗ ಕೇವಲ 13 ದಿನ ಪ್ರಧಾನಿಯಾಗಿದ್ದರು.
ಸತತ ಎರಡು ಅವಧಿಗೆ ರಾಷ್ಟ್ರಪತಿಗಳಾಗಿದ್ದವರು ಬಾಬು ರಾಜೇಂದ್ರ ಪ್ರಸಾದ್. 1962ರಲ್ಲಿ ರಾಷ್ಟ್ರಪತಿ ಹುದ್ದೆಯಿಂದ ಕೆಳಗಿಳಿದ ಬಾಬು ರಾಜೇಂದ್ರ ಪ್ರಸಾದ್ ಹೋಗಿದ್ದು ಬಿಹಾರಕ್ಕೆ. ಜಯಪ್ರಕಾಶ್ ನಾರಾಯಣ್ ಸೇರಿದಂತೆ ಕೆಲವರು ಜನರಿಂದ ಹಣ ಸಂಗ್ರಹಿಸಿ ಕಟ್ಟಿಸಿಕೊಟ್ಟ ಸಣ್ಣ ಮನೆಯಲ್ಲಿ ಬಾಬು ರಾಜೇಂದ್ರ ಪ್ರಸಾದ್ ವಾಸ ಇದ್ದರು. ವೈಭೋಗದ ಜೀವನಕ್ಕೆ ಆಸೆಪಟ್ಟವರಲ್ಲ ಬಾಬು ರಾಜೇಂದ್ರ ಪ್ರಸಾದ್.
ಕೇಂದ್ರದಲ್ಲಿ ಸರ್ಕಾರ ರಚನೆಗೆ ಆಹ್ವಾನ ಕೊಡುವಾಗ ರಾಷ್ಟ್ರಪತಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಇದ್ದಾಗ, ಯಾವ ಪಕ್ಷದ ನಾಯಕರನ್ನು ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎನ್ನುವುದನ್ನು ವಿವೇಚನಾಧಿಕಾರ ಬಳಸಿ ರಾಷ್ಟ್ರಪತಿಗಳೇ ನಿರ್ಧಾರ ಕೈಗೊಳ್ಳಬೇಕು. ಆಗ ಕೇಂದ್ರದ ಕ್ಯಾಬಿನೆಟ್ ಕೂಡ ಆಸ್ತಿತ್ವದಲ್ಲಿ ಇಲ್ಲ, ಕ್ಯಾಬಿನೆಟ್ ರಾಷ್ಟ್ರಪತಿಗೆ ಶಿಫಾರಸ್ಸು ಮಾಡುವಂತಿಲ್ಲ. ಯಾವ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ಸಿಗುತ್ತೋ ಆ ಪಕ್ಷ ಸರ್ಕಾರ ರಚಿಸುತ್ತೆ. ರಾಷ್ಟ್ರಪತಿ ಸೂಚಿಸಿದರೇ, ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತೆ. ಹೀಗಾಗಿಯೇ ರಾಜಕೀಯ ಪಕ್ಷಗಳು ತಮ್ಮ ಕೈಗೊಂಬೆಯಾದವರು ರಾಷ್ಟ್ರಪತಿಯಾಗಿರಲಿ ಅಂತ ತಮಗೆ ಬೇಕಾದವರನ್ನೇ ರಾಷ್ಟ್ರಪತಿಯನ್ನಾಗಿ ಮಾಡ್ತಾರೆ.
ರಾಷ್ಟ್ರಪತಿ ಭವನದ ವಿಶೇಷತೆಗಳು: ರಾಷ್ಟ್ರಪತಿಗಳು ದೆಹಲಿಯ ರೈಸಿನಾ ಹಿಲ್ನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಾರೆ. ರಾಷ್ಟ್ರಪತಿ ಭವನವು 320 ಎಕರೆ ವಿಶಾಲ ಜಾಗದಲ್ಲಿದೆ. ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ. ವಿಶ್ವದಲ್ಲಿ ಅತಿ ಹೆಚ್ಚು ಕೊಠಡಿಗಳನ್ನು ಹೊಂದಿರುವ ಅತ್ಯಂತ ದೊಡ್ಡದಾದ ರಾಷ್ಟ್ರಾಧ್ಯಕ್ಷರ ನಿವಾಸವೇ ಭಾರತದ ರಾಷ್ಟ್ರಪತಿ ಭವನ.
ರಾಷ್ಟ್ರಪತಿ ಭವನದಲ್ಲಿ ಮೊಘಲ್ ಗಾರ್ಡನ್, ದರ್ಬಾರ್ ಹಾಲ್, ಅಶೋಕ್ ಹಾಲ್ ಆಕರ್ಷಣೆಯ ಕೇಂದ್ರಬಿಂದು. ಬ್ರಿಟಿಷ್ ಶಿಲ್ಪಿಗಳಾದ ಎಡ್ವಿನ್ ಲೂಟಿಯನ್ಸ್, ಹರ್ಬಟ್ ಬೇಕರ್ ಈ ರಾಷ್ಟ್ರಪತಿ ಭವನ ನಿರ್ಮಿಸಿದರು. ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿದ್ದರೂ, ರಾಷ್ಟ್ರಪತಿಗಳ ವಾಸಕ್ಕೆ, ಬಳಕೆಗೆ ಇರುವುದು 2ರಿಂದ 3 ಕೊಠಡಿ ಮಾತ್ರ. ಉಳಿದೆಲ್ಲಾ ಕೊಠಡಿಗಳು ಹೆರಿಟೇಜ್ ಕೊಠಡಿಗಳು, ಸಂಗ್ರಹಾಲಯಗಳಾಗಿವೆ. ಭಾರತದ ಮೊದಲ ಗರ್ವನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ ಅವರು ಈ ಭವನದ 2ರಿಂದ 3 ಕೊಠಡಿಯಲ್ಲೇ ವಾಸ ಮಾಡುತ್ತಿದ್ದರು. ಬಳಿಕ ಅದೇ ಸಂಪ್ರದಾಯವಾಗಿ ಬೆಳೆದು ಬಂತು. ಇದು ನಂತರ ಬಂದ ರಾಷ್ಟ್ರಪತಿಗಳಿಗೆ ಕಿರಿಕಿರಿ ಉಂಟು ಮಾಡಿತ್ತು. 1997ರಲ್ಲಿ ರಾಷ್ಟ್ರಪತಿ ಆಗಿದ್ದ ಕೆ.ಆರ್. ನಾರಾಯಣನ್ ಅವರು, ತಮಗೆ ರಾಷ್ಟ್ರಪತಿ ಭವನದಲ್ಲಿ ಹೆಚ್ಚಿನ ಕೊಠಡಿ ನೀಡುವಂತೆ ಆಗ ಕೇಂದ್ರದ ನಗರಾಭಿವೃದ್ದಿ ಸಚಿವರಾಗಿದ್ದ ಅನಂತಕುಮಾರ್‌ಗೆ ಮನವಿ ಮಾಡಿದ್ದರು. ಕೇವಲ ಎರಡು ಮೂರು ಕೊಠಡಿಗಳಲ್ಲೇ ಹೇಗೆ ನನ್ನ ಅತಿಥಿಗಳನ್ನು ನಿಭಾಯಿಸಲಿ? ಇನ್ನೂ 2-3 ಹೆಚ್ಚಿನ ಕೊಠಡಿ ನೀಡುವಂತೆ ಕೇಂದ್ರದ ನಗರಾಭಿವೃದ್ದಿ ಸಚಿವ ಅನಂತಕುಮಾರ್‌ಗೆ ಮನವಿ ಮಾಡಿದ್ದರು. ಇದನ್ನು ಅನಂತಕುಮಾರ್ ದೆಹಲಿಯಲ್ಲಿದ್ದ ನಮಗೆ 2013ರಲ್ಲಿ ತಿಳಿಸಿದ್ದರು. ರಾಷ್ಟ್ರಪತಿ ಭವನವು ಸ್ವಾತಂತ್ರ್ಯ ಪೂರ್ವದಲ್ಲಿ ವೈಸ್ ರಾಯ್ ನಿವಾಸವಾಗಿತ್ತು. ಅದನ್ನು ಸ್ವಾತಂತ್ರ್ಯದ ನಂತರ ರಾಷ್ಟ್ರಪತಿ ಭವನವಾಗಿ ಪರಿವರ್ತಿಸಲಾಗಿದೆ. ಈಗ ರಾಷ್ಟ್ರಪತಿಗಳಿಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ನಿವೃತ್ತಿ ನಂತರ ವಾಸಕ್ಕೆ ಸರ್ಕಾರಿ ಬಂಗಲೆ ನೀಡಲಾಗುತ್ತದೆ. 1.5 ಲಕ್ಷ ರೂ. ಪಿಂಚಣಿಯನ್ನೂ ನೀಡಲಾಗುತ್ತದೆ.
Published On - 4:07 pm, Sat, 23 July 22