
ನವದೆಹಲಿ, ಜನವರಿ 25: ಗಣರಾಜ್ಯೋತ್ಸವದ (Republic Day) ಭಾಗವಾಗಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವಾರ್ಪಣೆ ಸಲ್ಲಿಸಿದರು. ‘ನಾವು ಭಾರತೀಯರು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದ ಸ್ಥಿತಿಯನ್ನು ಅವಲೋಕಿಸಲು ಇದು ಸುದಿನವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು.
‘1950ರ ಜನವರಿ 26ರಿಂದಲೂ ನಮ್ಮ ಗಣತಂತ್ರವನ್ನು ಸಾಂವಿಧಾನಿಕ ಗುರಿಗಳತ್ತ ಮುನ್ನಡೆಸುತ್ತಿದ್ದೇವೆ. ಸಂವಿಧಾನ ಪೂರ್ಣವಾಗಿ ಜಾರಿಯಾದ ದಿನವದು. ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಗಣತಂತ್ರ ದೇಶಕ್ಕೆ ಸಂವಿಧಾನವೇ ಆಧಾರ ದಾಖಲೆಯಾಗಿದೆ. ಸಂವಿಧಾನವನ್ನು ರಚಿಸಿದವರು ರಾಷ್ಟ್ರೀಯತೆ ಮತ್ತು ಏಕತೆಗೆ ಭದ್ರ ಬುನಾದಿ ಹಾಕಿದ್ದಾರೆ’ ಎಂದು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ತಿಳಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಸಂದರ್ಭದಲ್ಲಿ 150 ವರ್ಷ ತುಂಬಿದ ವಂದೇ ಮಾತರಂ ಗೀತೆ ವಿಚಾರ ಪ್ರಸ್ತಾಪಿಸಿ, ಇದು ದೇಶದ ಜನರ ಹೃದಯದಲ್ಲಿ ದೇಶ ಭಕ್ತಿ ಮೂಡಿಸುವ ಒಂದು ಅಮೋಘ ಗೀತೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ
‘ರಾಷ್ಟ್ರೀಯವಾದಿ ಕವಿ ಸುಬ್ರಹ್ಮಣ್ಯ ಭಾರತಿ ಅವರು ತಮಿಳು ಭಾಷೆಯಲ್ಲಿ ವಂದೇ ಮಾತರಂ ಎನ್ಬೋಮ್ ಎಂದು ಹಾಡು ರಚಿಸಿದರು. ಅದರರ್ಥ ನಾವು ವಂದೇ ಮಾತರಂ ಹೇಳೋಣ ಎಂದು. ಅದು ಜನರನ್ನು ಇನ್ನೂ ದೊಡ್ಡ ಮಟ್ಟದಲ್ಲಿ ತಲುಪಲು ಸಹಾಯವಾಯಿತು. ಇತರ ಭಾರತೀಯ ಭಾಷೆಗಳಲ್ಲಿ ರಚಿಸಲಾದ ವಂದೇ ಮಾತರಂ ಅವತರಣಿಕೆಗಳೂ ಬಹಳ ಜನಪ್ರಿಯವಾಗಿವೆ’ ಎಂದರು.
ದ್ರೌಪದಿ ಮುರ್ಮು ಅವರು ಇದೇ ವೇಳೆ ಜಿಎಸ್ಟಿ ಸುಧಾರಣೆ, ಆಪರೇಷನ್ ಸಿಂದೂರ್ ಅನ್ನು ಶ್ಲಾಘಿಸಿದರು. ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವ ರೈತರನ್ನೂ ಪ್ರಶಂಸಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 25ರ ರಾಷ್ಟ್ರೀಯ ಮತದಾರರ ದಿನವನ್ನು ಪ್ರಸ್ತಾಪಿಸಿದರು. ಮತ ಚಲಾಯಿಸುವುದರಿಂದ ರಾಜಕೀಯ ಶಿಕ್ಷಣ ಪ್ರಾಪ್ತವಾಗುತ್ತದೆ ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಅದೀಗ ಸಾಕಾರವಾಗುತ್ತಿದೆ ಎಂದು ಹೇಳಿದ ಮುರ್ಮು, ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ ಎಂದರು.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ
‘ಮತದಾನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದರೆ ಗಣತಂತ್ರಕ್ಕೆ ಬಲ ಒದಗಿಸುತ್ತದೆ. ಸಬಲೀಕೃತ ಮಹಿಳೆಯು ದೇಶದ ಅಭ್ಯುದಯಕ್ಕೆ ಬಹಳ ಮುಖ್ಯ. ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣದ ಕ್ರಮಗಳು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯರಾಗಲು ಸಾಧ್ಯವಾಗಿಸಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Sun, 25 January 26