AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ

India's 77th Republic Day celebrations: ಜನವರಿ 26, 2026ರಂದು ಭಾರತದ 77ನೇ ಗಣರಾಜ್ಯೋತ್ಸವ ಇದೆ. ಯೂರೋಪ್​ನ ಮುಖ್ಯಸ್ಥರು ಈ ಬಾರಿಯ ರಿಪಬ್ಲಿಕ್ ಪೆರೇಡ್​ಗೆ ಮುಖ್ಯ ಅತಿಥಿಗಳಾಗಿದ್ದಾರೆ. ಪೆರೇಡ್​ನಲ್ಲಿ ಭಾರತದ ಭವ್ಯ ಮತ್ತು ಅಗಾಧ ಮಿಲಿಟರಿ ಶಕ್ತಿಯ ಒಂದು ಸ್ಯಾಂಪಲ್ ಪ್ರದರ್ಶನಗೊಳ್ಳಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ರೈತರು, ಕಾರ್ಮಿಕರು ಮೊದಲಾದವರು ವಿಶೇಷ ಅತಿಥಿಗಳಾಗಿರುತ್ತಾರೆ.

ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ
ಗಣರಾಜ್ಯೋತ್ಸವ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2026 | 7:01 PM

Share

ನವದೆಹಲಿ, ಜನವರಿ 25: ನಾಳೆ ಸೋಮವಾರ ಭಾರತದ 77ನೇ ಗಣತಂತ್ರ ದಿನ (Republic Day). ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಕರ್ತವ್ಯ ಪಥದಲ್ಲಿ ರಾಷ್ಟ್ರೀಯ ಸಂಭ್ರಮ. ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ದೇಶದ ಮಿಲಿಟರಿ ಶಕ್ತಿಯ ದೈತ್ಯ ದರ್ಶನಾಗಲಿದೆ. ಯುವಜನರು, ಕಲಾವಿದರು, ಕ್ರೀಡಾಪಟುಗಳು, ಕಾರ್ಮಿಕರು, ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ, ಸಾಕ್ಷಿಯೂ ಆಗಲಿದ್ದಾರೆ. ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವೋನ್ ಡರ್ ಲೆಯೆನ್ (Ursula Von Der Leyen) ಮತ್ತು ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟ ಅವರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದಾರೆ. ಭಾರತದ ಈ ಮಹೋನ್ನತ ಸಂಭ್ರಮದಲ್ಲಿ ಏನೆಲ್ಲಾ ಇರಲಿದೆ? ಇಲ್ಲಿದೆ ಒಂದಷ್ಟು ಮಾಹಿತಿ…

ಗಣರಾಜ್ಯೋತ್ಸವ ಪೆರೇಡ್…

ಜನವರಿ 26ರಂದು ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ಶುರುವಾಗುತ್ತದೆ. ಪ್ರಧಾನಿ ಮೋದಿ ಅವರು ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸುತ್ತಾರೆ. ನಂತರ ಕರ್ತವ್ಯ ಪಥಕ್ಕೆ ತೆರಳುತ್ತಾರೆ. ನಂತರ ರಾಷ್ಟ್ರಪತಿಗಳು ಹಾಗೂ ಮುಖ್ಯ ಅತಿಥಿಗಳನ್ನು ಬರಮಾಡಿಕೊಳ್ಳಲಾಗುತ್ತದೆ.

ಪೆರೇಡ್​ಗೆ ಮುನ್ನ ನೂರು ಸಾಂಸ್ಕೃತಿಕ ಕಲಾವಿದರಿಂದ ವಿವಿಧತೆಯಲ್ಲಿ ಏಕತೆ ಥೀಮ್​ನಲ್ಲಿ ಪ್ರದರ್ಶನ ಇರುತ್ತದೆ. ನಂತರ ಪೆರೇಡ್ ಮೊದಲುಗೊಳ್ಳುತ್ತದೆ. ಪೆರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್ ನೇತೃತ್ವದಲ್ಲಿ ಮೊದಲ ಪೆರೇಡ್ ನಡೆಯುತ್ತದೆ. ರಾಷ್ಟ್ರಪತಿಗಳು ವಂದನೆ ಸ್ವೀಕರಿಸುತ್ತಾರೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ಪರಮವೀರ್ ಚಕ್ರ ಇತ್ಯಾದಿ ಪ್ರಶಸ್ತಿ ವಿಜೇತರಿಂದ ಪೆರೇಡ್ ಇರುತ್ತದೆ. ಐರೋಪ್ಯ ಒಕ್ಕೂಟ, ಭಾರತೀಯ ಭೂಸೇನಾ ಪಡೆ, ವಾಯುಪಡೆ, ನೌಕಾಪಡೆ, ಕರಾವಳಿ ಕಾವಲುಪಡೆ, ಡಿಆರ್​ಡಿಒ ಮೊದಲಾದವರ ಪೆರೇಡ್​ಗಳು ನಡೆಯುತ್ತವೆ. ಧ್ರುವ್, ರುದ್ರ ಹೆಲಿಕಾಪ್ಟರ್​ಗಳು, ಭೀಷ್ಮಾ ಟ್ಯಾಂಕ್, ಅರ್ಜುನ್ ಟ್ಯಾಂಕ್, ಅಪಾಚೆ ಎಎಚ್-64ಇ, ಪ್ರಚಂಡ್ ಹೆಲಿಕಾಪ್ಟರ್, ನಾಗ್ ಮಿಸೈಲ್ ಸಿಸ್ಟಂ, ಅಜಯಕೇತು, ಧ್ವಂಸಕ್, ಆಕಾಶ್ ಮಿಸೈಲ್, ಬ್ರಹ್ಮೋಸ್ ಇತ್ಯಾದಿ ಭಾರತೀಯ ಸೇನೆಗಳ ಪ್ರಬಲ ಶಸ್ತ್ರಾಸ್ತ್ರಗಳ ಪ್ರದರ್ಶನ ಈ ಸಂದರ್ಭದಲ್ಲಿ ಕಾಣಬಹುದು.

ಮುಧೋಳ ನಾಯಿ ಸೇರಿದಂತೆ ಭಾರತೀಯ ತಳಿಯ ಹಾಗೂ ವಿಶೇಷ ತರಬೇತಿ ಪಡೆದ, ಹಾಗೂ ಜಿಪಿಎಸ್, ರೇಡಿಯೋ ಇತ್ಯಾದಿ ಉಪಕರಣಗಳನ್ನು ತೊಟ್ಟ ಶ್ವಾನಗಳ ಪಡೆಯೂ ಪೆರೇಡ್ ಮಾಡಲಿದೆ.

30 ಸ್ವಬ್ದ ಚಿತ್ರಗಳ ಮೆರವಣಿಗೆ

ಈ ಬಾರಿಯ ರಿಪಬ್ಲಿಕ್ ಪೆರೇಡ್​ನಲ್ಲಿ 30 ಸ್ತಬ್ದಚಿತ್ರಗಳ (Tableau) ಮೆರವಣಿಗೆ ನಡೆಯಲಿದೆ. ಇದರಲ್ಲಿ 17 ರಾಜ್ಯಗಳದ್ದು ಇರುತ್ತದೆ. ಇನ್ನುಳಿದ 13 ಸ್ತಬ್ದಚಿತ್ರಗಳು ವಿವಿಧ ಇಲಾಖೆಗಳದ್ದಾಗಿರುತ್ತವೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ

ವಂದೇ ಮಾತರಂ 150 ವರ್ಷ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ವತಿಯಿಂದ 150 ವರ್ಷಗಳ ವಂದೇ ಮಾತರಂ ಸಂಸ್ಮರಣಾರ್ಥ ಸ್ತಬ್ದಚಿತ್ರದ ಮೆರವಣಿಗೆ ಇರುತ್ತದೆ. ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳಿಂದ ಆಯ್ದ 2,500 ಕಲಾವಿದರರಿಂದ ವಂದೇ ಮಾತರಂ ಥೀಮ್​ನಲ್ಲಿ ಸಾಂಸ್ಕೃತಿಕ ಪ್ರದರ್ಶನ ಇರಲಿದೆ.

10,000 ವಿಶೇಷ ಅತಿಥಿಗಳು…

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸೇವೆ ಸಲ್ಲಿಸಿದವರನ್ನು ರಿಪಬ್ಲಿಕ್ ಪೆರೇಡ್​ಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಪ್ಯಾರಾ ಅಥ್ಲೀಟ್ ವಿಶ್ವ ಚಾಂಪಿಯನ್​ಶಿಪ್ ವಿಜೇತರು, ನೈಸರ್ಗಿಕ ಕೃಷಿಕರು, ಅತ್ಯುತ್ತಮ ಕೃಷಿ ಸಾಧಕರು, ಸರ್ಕಾರಿ ಸ್ಕೀಮ್​ಗಳ ಆಯ್ದ ಫಲಾನುಭವಿಗಳು, ಸಂಶೋಧಕರು, ವಿಜ್ಞಾನಿಗಳು, ಅಟಲ್ ಇನ್ನೋವೇಶನ್ ಮಿಷನ್​ನ ಅತ್ಯುತ್ತಮ ವಿದ್ಯಾರ್ಥಿಗಳು, ವಿವಿಧ ಟೂರ್ನಿಗಳ ವಿಜೇತರು, ಅತ್ಯುತ್ತಮ ಸ್ಟಾರ್ಟಪ್​ಗಳು, ಅತ್ಯುತ್ತಮ ಎಂಎಸ್​ಎಂಇಗಳು, ವೀರ್ ಗಾಥ ಪ್ರಾಜೆಕ್ಟ್ ವಿಜೇತರು, ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತರು, ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿ ಅಂಗಡಿ ಮಾಲೀಕರು, ಪಿಎಂ ಇಂಟರ್ನ್ಶಿಪ್ ಸ್ಕೀಮ್​ನ ಅತ್ಯುತ್ತಮ ಇಂಟರ್ನ್​ಗಳು, ನ್ಯಾಷನಲ್ ಬ್ಯಾಂಡ್ ಕಾಂಪಿಟೀಶನ್ ವಿಜೇತ ಮಕ್ಕಳು, ಮನ್ ಕೀ ಬಾತ್ ಭಾಗಿದಾರರು ಹೀಗೆ ಜನರು ವಿಶೇಷ ಅತಿಥಿಗಳಾಗಿ ಇರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ