Tribal Pride Day: ಜಾರ್ಖಂಡ್‌ನ ಬಿರ್ಸಾ ಮುಂಡಾ ಗ್ರಾಮಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ದೆಹಲಿಯಿಂದ ರಾಷ್ಟ್ರಪತಿಗಳು ವಿಶೇಷ ವಾಯುಪಡೆಯ ವಿಮಾನದ ಮೂಲಕ ರಾಂಚಿ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಉಲಿಹತುಗೆ ತೆರಳಲಿದ್ದಾರೆ.
ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ನ. 15) ಭಗವಾನ್ ಬಿರ್ಸಾ ಮುಂಡಾ (Bhagwan Birsa Munda) ಅವರ ಜನ್ಮಸ್ಥಳವಾದ ಜಾರ್ಖಂಡ್‌ನ ಉಲಿಹತು ಗ್ರಾಮಕ್ಕೆ ಭೇಟಿ ನೀಡಲಿದ್ದು, ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ. ಇಂದು ಅವರು ಮಧ್ಯಪ್ರದೇಶದ ಶಹದೋಲ್‌ನಲ್ಲಿ ಜಂಜಾಟಿಯ ಗೌರವ್ ದಿವಸ್ ಸಂದರ್ಭದಲ್ಲಿ ಮಧ್ಯಪ್ರದೇಶ ಸರ್ಕಾರವು ಆಯೋಜಿಸುತ್ತಿರುವ ಜನಜಾತಿಯ ಸಮಾಗಮ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಷ್ಟ್ರಪತಿಯಾದ ನಂತರ ದ್ರೌಪದಿ ಮುರ್ಮು ಅವರು ಜಾರ್ಖಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ದೆಹಲಿಯಿಂದ ರಾಷ್ಟ್ರಪತಿಗಳು ವಿಶೇಷ ವಾಯುಪಡೆಯ ವಿಮಾನದ ಮೂಲಕ ರಾಂಚಿ ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಉಲಿಹತುಗೆ ತೆರಳಲಿದ್ದಾರೆ. ಅಲ್ಲಿ ಅವರು ಉಲಿಹಾತುದಲ್ಲಿರುವ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಮಾಲೆ ಹಾಕಿ ಅವರ ವಂಶಸ್ಥರನ್ನು ಭೇಟಿಯಾಗುತ್ತಾರೆ. ರಾಷ್ಟ್ರಪತಿಯವರು ಉಲಿಹತುವಿನಿಂದ ಬಿರ್ಸಾ ಮುಂಡಾ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9:40ಕ್ಕೆ ಹಿಂದಿರುಗಿ, 10:15ಕ್ಕೆ ಜಬಲ್‌ಪುರಕ್ಕೆ ತೆರಳಲಿದ್ದಾರೆ. ರಾಷ್ಟ್ರಪತಿ ಆಗಮನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಈ ಹಿಂದೆ ಜಾರ್ಖಂಡ್ ರಾಜ್ಯ ಸಂಸ್ಥಾಪನಾ ದಿನಾಚರಣೆಯಂದು ಆಯೋಜಿಸಲಾಗಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಗಳೂ ಭಾಗವಹಿಸಬೇಕಿತ್ತು. ಆದರೆ ಆ ಸಮಯಕ್ಕೆ ಸರಿಯಾಗಿ ಅವರ ಕಾರ್ಯಕ್ರಮವನ್ನು ಬದಲಾಯಿಸಲಾಗಿತ್ತು.
ಇದನ್ನೂ ಓದಿ: Droupadi Murmu: ಸಿಕ್ಕಿಂನಲ್ಲಿ ಕಲಾವಿದರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರನ್ನು ಗೌರವಿಸಲು ನವೆಂಬರ್ 15 ಅನ್ನು ಜಂಜಾಟಿಯ ಗೌರವ್ ದಿವಸ್ ಅಥವಾ ಬುಡಕಟ್ಟು ಹೆಮ್ಮೆಯ ದಿನ ಎಂದು ಆಚರಿಸಲಾಗುತ್ತದೆ. 1875ರಲ್ಲಿ ಜನಿಸಿದ ಬಿರ್ಸಾ ಮುಂಡಾ ಅವರು ಇಂದು ಜಾರ್ಖಂಡ್‌ನ ಭಾಗವಾಗಿರುವ ಬಂಗಾಳ ಪ್ರೆಸಿಡೆನ್ಸಿಯ ಪ್ರದೇಶಗಳಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಮತ್ತು ಮತಾಂತರ ಚಟುವಟಿಕೆಗಳ ವಿರುದ್ಧ ಬಂಡಾಯ ಚಳವಳಿಯನ್ನು ನಡೆಸಿದರು. ಖುಂಟಿ, ತಮರ್, ಸರ್ವದಾ ಮತ್ತು ಬಂದಗಾಂವ್‌ನ ಮುಂಡಾ ಬೆಲ್ಟ್‌ನಲ್ಲಿ ಅವರ ಬಂಡಾಯವು ಸಾಂಪ್ರದಾಯಿಕ ಬುಡಕಟ್ಟು ಸಂಸ್ಕೃತಿಯ ಪುನರುಜ್ಜೀವನಕ್ಕೆ ಸಹಾಯ ಮಾಡಿತು.
ಬಿರ್ಸಾ ಮುಂಡಾ ರಾಂಚಿ ಜೈಲಿನಲ್ಲಿ ಬ್ರಿಟಿಷ್ ವಶದಲ್ಲಿದ್ದಾಗ ತಮ್ಮ 25ನೇ ವಯಸ್ಸಿನಲ್ಲಿ ನಿಧನರಾದರು. ಆದರೂ, ಬಿರ್ಸಾ ಮುಂಡಾ ಅವರ ಕೊಡುಗೆಯು ಅವರಿಗೆ ‘ಭಗವಾನ್’ ಅಥವಾ ಲಾರ್ಡ್ ಎಂಬ ಬಿರುದನ್ನು ತಂದುಕೊಟ್ಟಿತು.
ಇದನ್ನೂ ಓದಿ: President Draupadi Murmu: ಮಕ್ಕಳ ದಿನಾಚರಣೆಯಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಇಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೋಪಾಲ್‌ನ ರಾಜಭವನದಲ್ಲಿ ಅವರ ಗೌರವಾರ್ಥವಾಗಿ ಆಯೋಜಿಸಲಾಗುವ ನಾಗರಿಕ ಸ್ವಾಗತದಲ್ಲಿ ಭಾಗವಹಿಸುತ್ತಾರೆ. ಬಳಿಕ ಕೇಂದ್ರ ರಕ್ಷಣಾ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಗಳ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ನವೆಂಬರ್ 16ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಗೆ ಹಿಂದಿರುಗುವ ಮೊದಲು ಭೋಪಾಲ್‌ನಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.