
ಪಶ್ಚಿಮ ಬಂಗಾಳ, ಮಾ.7: ಸಿಲಿಗುರಿ ಸಮೀಪದ ಬಿಧಾನ್ನಗರದಲ್ಲಿ ಆಯೋಜಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಸ್ಯಾಂತಾಲ್ (Santal) ಸಮ್ಮೇಳನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉಂಟಾದ ಕಹಿ ಅನುಭವದ ಕುರಿತು ಪ್ರಧಾನಿ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮೇಳನದ ವೇದಿಕೆಯನ್ನು ಕೊನೆಯ ಕ್ಷಣದಲ್ಲಿ ಸಣ್ಣ ಜಾಗಕ್ಕೆ ಬದಲಾಯಿಸಿದ್ದಕ್ಕೆ ರಾಷ್ಟ್ರಪತಿಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. “ಸ್ಯಾಂತಾಲ್ ಸಮುದಾಯವು ಒಗ್ಗೂಡುವುದು ಯಾರಿಗೋ ಇಷ್ಟವಿಲ್ಲದಂತಿದೆ” ಎಂದು ಅವರು ಮಾರ್ಮಿಕವಾಗಿ ನುಡಿದರು.
ದೇಶದ ಪ್ರಥಮ ಪ್ರಜೆ ರಾಜ್ಯಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿಗಳು ಸ್ವಾಗತಿಸುವುದು ಸಂಪ್ರದಾಯ. ಆದರೆ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದನ್ನು ರಾಷ್ಟ್ರಪತಿಗಳು ಪ್ರಶ್ನಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, “ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ಎಲ್ಲಾ ಮಿತಿಗಳನ್ನು ಮೀರಿದೆ. ಆದಿವಾಸಿ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳಿಗೆ ಮಾಡಿರುವ ಈ ಅವಮಾನವು ಪ್ರತಿಯೊಬ್ಬ ಭಾರತೀಯನಿಗೂ ನೋವು ತಂದಿದೆ” ಎಂದು ಕಿಡಿಕಾರಿದ್ದಾರೆ.
ಬುಡಕಟ್ಟು ಸಂಸ್ಕೃತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ಅತ್ಯಂತ ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಇನ್ನು 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ತಮಿಳುನಾಡು ರಾಜ್ಯಪಾಲರಾಗಿದ್ದ ಆರ್.ಎನ್. ರವಿ ಅವರನ್ನು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಿರುವುದು ಕೂಡ ಟಿಎಂಸಿ ಮತ್ತು ಕೇಂದ್ರದ ನಡುವಿನ ಸಂಘರ್ಷಕ್ಕೆ ತುಪ್ಪ ಸುರಿದಂತಿದೆ.
ಇದನ್ನೂ ಓದಿ: ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರ
ಬಿಜೆಪಿ ರಾಷ್ಟ್ರಪತಿ ಭವನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಮಣಿಪುರದಂತಹ ಘಟನೆಗಳು ನಡೆದಾಗ ರಾಷ್ಟ್ರಪತಿಗಳು ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Sat, 7 March 26