ಹುಟ್ಟೂರಿನ ಮಣ್ಣಿಗೆ ತಲೆಬಾಗಿ, ನೆಲ ಮುಟ್ಟಿ ನಮಸ್ಕರಿಸಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

ಇಂತಹಾ ಹಳ್ಳಿಯಲ್ಲಿ ಹುಟ್ಟಿದ, ಸಾಮಾನ್ಯ ಹುಡುಗನೊಬ್ಬ ದೇಶದ ಅತ್ಯುನ್ನತ ಹುದ್ದೆಗೆ ಏರುತ್ತಾನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಮ್ಮ ಸಾಂವಿಧಾನಿಕ ವ್ಯವಸ್ಥೆ ಇದನ್ನು ಸಾಧ್ಯವಾಗಿಸಿದೆ ಎಂದು ಕಾನ್ಪುರದ ಜನಾಭಿನಂದನಾ ಸಮಾರಂಭದಲ್ಲಿ ರಾಮ್​ನಾಥ್ ಕೋವಿಂದ್ ತಿಳಿಸಿದ್ದಾರೆ.

ಹುಟ್ಟೂರಿನ ಮಣ್ಣಿಗೆ ತಲೆಬಾಗಿ, ನೆಲ ಮುಟ್ಟಿ ನಮಸ್ಕರಿಸಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್
ರಾಮ್​ನಾಥ್ ಕೋವಿಂದ್
Updated By: ganapathi bhat

Updated on: Jun 27, 2021 | 4:22 PM

ಲಕ್ನೋ: ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಇಂದು (ಜೂನ್ 27) ಉತ್ತರ ಪ್ರದೇಶಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅವರ ಪ್ರವಾಸದ ಮೊದಲ ಕಾರ್ಯಕ್ರಮವಾಗಿ ರಾಷ್ಟ್ರಪತಿಗಳು ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ತಮ್ಮ ಮೂಲ ಹಳ್ಳಿಯಾದ ಪರೌಂಖ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಪಂತ್ರಿ ಮಾತಾ ದೇವಾಲಯಕ್ಕೆ ಭೇಟಿ ನೀಡಿ, ಹಳ್ಳಿ ಜನರೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ, ಭಾವನಾತ್ಮಕ ಸನ್ನಿವೇಶಕ್ಕೆ ಅಲ್ಲಿ ನೆರೆದಿದ್ದ ಜನರು ಸಾಕ್ಷಿಯಾಗಿದ್ದಾರೆ.

ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ತಮ್ಮ ಹುಟ್ಟೂರಿನ ಮಣ್ಣಿಗೆ ತಲೆಬಾಗಿ, ನೆಲಕ್ಕೆ ಕೈಮುಟ್ಟಿ ನಮಸ್ಕರಿಸಿದ್ದಾರೆ. ರಾಷ್ಟ್ರಪತಿಗಳ ಭಾವನಾತ್ಮಕ ಸನ್ನಿವೇಶದ ಫೋಟೊವನ್ನು ಪ್ರೆಸಿಡೆಂಟ್ ಆಫ್ ಇಂಡಿಯಾ ಟ್ವಿಟರ್ ಖಾತೆ ಹಂಚಿಕೊಂಡಿದೆ. ತಮ್ಮ ಮೂಲ ಊರಾದ ಕಾನ್ಪುರ್​ ದೆಹತ್ ಜಿಲ್ಲೆಯ ಪರೌಂಖ್ ಎಂಬಲ್ಲಿನ ಹೆಲಿಪ್ಯಾಡ್​ನಲ್ಲಿ ಇಳಿದ ತಕ್ಷಣ, ರಾಮ್​ನಾಥ್ ಕೋವಿಂದ್ ನೆಲಮುಟ್ಟಿ ನಮಸ್ಕಾರ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಭೇಟಿಗೆ ಆಗಮಿಸಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯಪಾಲ ಆನಂದಿಬೆನ್ ಪಟೇಲ್ ಸ್ವಾಗತಿಸಿದ್ದಾರೆ. ಈ ವೇಳೆ, ರಾಮ್​ನಾಥ್ ಕೋವಿಂದ್ ನೆಲಮುಟ್ಟಿ ಅಲ್ಲಿನ ಮಣ್ಣನ್ನು ಹಣೆಗೆ ತಿಲಕದಂತೆ ಹಚ್ಚಿಕೊಂಡಿದ್ದಾರೆ.

ಇಂತಹಾ ಹಳ್ಳಿಯಲ್ಲಿ ಹುಟ್ಟಿದ, ಸಾಮಾನ್ಯ ಹುಡುಗನೊಬ್ಬ ದೇಶದ ಅತ್ಯುನ್ನತ ಹುದ್ದೆಗೆ ಏರುತ್ತಾನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಮ್ಮ ಸಾಂವಿಧಾನಿಕ ವ್ಯವಸ್ಥೆ ಇದನ್ನು ಸಾಧ್ಯವಾಗಿಸಿದೆ ಎಂದು ಕಾನ್ಪುರದ ಜನಾಭಿನಂದನಾ ಸಮಾರಂಭದಲ್ಲಿ ರಾಮ್​ನಾಥ್ ಕೋವಿಂದ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾನು, ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ, ಸಂವಿಧಾನದ ಕರಡು ಸಮಿತಿಯ ಸದಸ್ಯರಿಗೆ ಅವರ ಸೇವೆ ಹಾಗೂ ತ್ಯಾಗಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ತಲೆಬಾಗುತ್ತೇನೆ ಎಂದು ತಿಳಿಸಿದ್ದಾರೆ. ನಾನು ಈ ಹಂತದವರೆಗೆ ಬೆಳೆದ ಬಗ್ಗೆ ಈ ಹಳ್ಳಿಯ ಮಣ್ಣಿಗೆ ಹಾಗೂ ಜನರ ಆಶೀರ್ವಾದದಿಂದ ಎಂದು ರಾಮ್​ನಾಥ್ ಕೋವಿಂದ್ ಮಾತನಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ರಾಮನಾಥ ಕೋವಿಂದ್​ಗೆ ಬೈಪಾಸ್​ ಸರ್ಜರಿ; ಆರೋಗ್ಯ ಸ್ಥಿರವಾಗಿದೆ ಎಂದ ಏಮ್ಸ್ ವೈದ್ಯರು

ಸೇನಾ ಆಸ್ಪತ್ರೆಯಿಂದ ಏಮ್ಸ್​​ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ​