ದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಆಗಿರುವುದರಿಂದ ತನ್ನದೇ ಆದ ಮಹತ್ವ ಪಡೆದಿದೆ ಎಂದು ಹೇಳಿದ ರಾಷ್ಟ್ರಪತಿ ಕೋವಿಂದ್, ಮಹಾತ್ಮ ಗಾಂಧಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು.
ನಾವು ಒಳಿತಿನ ಹಾದಿಯಲ್ಲಿ ಹೇಗೆ ಮುನ್ನಡೆಯಬೇಕು ಎನ್ನುವುದನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟರು. ತಪ್ಪು ಹಾದಿಯಲ್ಲಿ ವೇಗವಾಗಿ ಓಡುವುದಕ್ಕಿಂತಲ್ಲೂ ಸರಿಯಾದ ದಾರಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಒಲಿಂಪಿಕ್ ಪಂದ್ಯಾವಳಿಯಲ್ಲಿ ಭಾರತದ ಅಭೂತಪೂರ್ವ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಎಲ್ಲ ಪೋಷಕರೂ ತಮ್ಮ ಮಕ್ಕಳನ್ನು, ಮುಖ್ಯವಾಗಿ ಹೆಣ್ಣುಮಕ್ಕಳನ್ನು ಹೀಗೆ ಬೆಳೆಸಬೇಕೆಂದು ಕೋರುತ್ತೇನೆ ಎಂದು ವಿನಂತಿಸಿದರು.
ಭಾರತವು ಇನ್ನೂ ಕೊರೊನಾ ಪಿಡುಗಿನ ವಿರುದ್ಧ ಹೋರಾಡುತ್ತಲೇ ಇದೆ. ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಜನರು ಜೀವ ಕಳೆದುಕೊಂಡರು ಎಂಬ ಬಗ್ಗೆ ನನವೆ ವಿಷಾದವಿದೆ. ಆದರೆ ನಾವು ಹೆಚ್ಚು ಜನರನ್ನು ಉಳಿಸಿಕೊಂಡೆವು ಎಂದು ಅವರು ನುಡಿದರು. ಕೊರೊನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ದುಡಿದ ಆರೋಗ್ಯ ಇಲಾಖೆ ಸಿಬ್ಬಂದಿ, ಲಸಿಕೆ ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸುತ್ತೇನೆ. ದೇಶದ ಎಲ್ಲ ಜನರೂ ಲಸಿಕೆ ತೆಗೆದುಕೊಳ್ಳುವ ಮೂಲಕ ಪಿಡುಗಿನಿಂದ ರಕ್ಷಣೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುವಾಗಲೂ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಕೊರೊನಾ ವಿರುದ್ಧ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಕೊರೊನಾ 2ನೇ ಅಲೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಆ ನೋವನ್ನು ಮರೆಯಲು ಆಗುವುದಿಲ್ಲ. ಕೊವಿಡ್ ನಿರ್ವಹಣೆಗೆ ರೂಪಿಸಿದ ಯೋಜಿತ ಕಾರ್ಯತಂತ್ರವು ಹಲವರ ಜೀವ ಉಳಿಸಿತು. ಕೊರೊನಾದಿಂದ ತಾತ್ಕಾಲಿಕವಾಗಿ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಭಾರತವು ಹಲವು ದೇಶಗಳಿಗೆ ನೆರವು ನೀಡಿದೆ ಎಂದು ರಾಷ್ಟ್ರಪತಿ ನೆನಪಿಸಿಕೊಂಡರು.
ಸೆಂಟ್ರಲ್ ವಿಸ್ತಾ ಯೋಜನೆಯನ್ನು ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಬಣ್ಣಿಸಿದ ಅವರು, ಕೊರೊನಾದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ದೇಶದಲ್ಲಿ ವ್ಯಾಪಾರಕ್ಕೆ ಉತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.
ಭಾಷಣವನ್ನು ನೋಡಿ..
(President Ramnath Kovind Independence Day speech Urges Parents to Grow Sportsmanship in children)
ಇದನ್ನೂ ಓದಿ: National Anthem: ರಾಷ್ಟ್ರಗೀತೆ ಹೇಗೆ ಹಾಡಬೇಕು? ಹಾಡುವಾಗ ಪಾಲಿಸಬೇಕಾದ ನಿಯಮಗಳೇನು?
ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?
Published On - 7:40 pm, Sat, 14 August 21