ದೆಹಲಿ, ಜೂ.13: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಜೂ.13) ಜಮ್ಮು-ಕಾಶ್ಮೀರದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದರು. ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ . ಕಳೆದ ನಾಲ್ಕು ದಿನಗಳಿಂದ ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಒಂಬತ್ತು ಯಾತ್ರಿಕರು ಮತ್ತು ಒಬ್ಬ ಸಿಆರ್‌ಪಿಎಫ್ ಜವಾನ ಸಾವನ್ನಪ್ಪಿದ್ದಾರೆ. ಏಳು ಭದ್ರತಾ ಸಿಬ್ಬಂದಿ ಮತ್ತು ಹಲವರು ಗಾಯಗೊಂಡಿದ್ದಾರೆ.
ಇಂದು ನಡೆದ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿನ ಭದ್ರತೆಗೆ ಸಂಬಂಧಿಸಿದ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ಹಾಗೂ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿಗೆ ವರದಿ ನೀಡಿದ್ದಾರೆ. ಈ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹ ಯತ್ನಗಳನ್ನು ಕೈಗೊಂಡಿರುವ ಬಗ್ಗೆಯೂ ತಿಳಿಸಲಾಯಿತು.
ಇನ್ನು ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಭಾರತದ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಹಾಗೂ ಅಲ್ಲಿ ಸಂಪೂರ್ಣ ಭದ್ರತಾ ಶ್ರೇಣಿಯನ್ನು ನಿಯೋಜಿಸುವಂತೆ ಮೋದಿ ಅವರು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದರು. ಇನ್ನು ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಭದ್ರತಾ ಪಡೆಗಳ ನಿಯೋಜನೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಗಿದೆ.
ಜೂನ್ 9ರಂದು ಭಯೋತ್ಪಾದಕರು ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಿಂದ ಬಸ್ ಆಳವಾದ ಕಂದಕಕ್ಕೆ ಬಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದರು ಮತ್ತು 41 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ಎರಡು ದಿನಗಳ ನಂತರ, ದೋಡಾದಲ್ಲಿನ ಜಂಟಿ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಇದರಲ್ಲಿ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ಅದೇ ದಿನ ರಾತ್ರಿ ಹಿರಾನಗರದ ಸೈದಾ ಸುಖಲ್ ಗ್ರಾಮದ ಮನೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಕಥುವಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಒಬ್ಬ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನ್ ಮತ್ತು ಒಬ್ಬ ಭಯೋತ್ಪಾದಕನನ್ನು ಸಾವನ್ನಪ್ಪಿದ್ದಾರೆ. ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮುವಿನ ದೋಡಾದಲ್ಲಿ ಸೇನಾ ಔಟ್‌ಪೋಸ್ಟ್ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಎನ್‌ಕೌಂಟರ್ ಆರಂಭ
ಇನ್ನು ರಿಯಾಸಿಯಲ್ಲಿ ನಡೆದ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ದಾಳಿಯ ತನಿಖೆಗಾಗಿ ಜೆಕೆ ಪೊಲೀಸರು 11 ತಂಡಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವೂ ರಿಯಾಸಿಯಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ