ದೆಹಲಿ: ಅಯೋಧ್ಯೆ ಅಭಿವೃದ್ಧಿ ಯೋಜನೆಗಳ ಪರಿಶೀಲನೆಗಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವರ್ಚ್ಯುವಲ್ ಸಭೆ ನಡೆಸಿದರು. ಈ ತಿಂಗಳಲ್ಲೇ ಯೋಗಿ ಆದಿತ್ಯನಾಥ್ ಜತೆ ಮೋದಿಯವರು ನಡೆಸಿದ ಎರಡನೇ ಸಭೆ ಇದಾಗಿದೆ. ಜೂನ್ ಮೊದಲ ವಾರದಲ್ಲಿ ಯೋಗಿ ಆದಿತ್ಯನಾಥ್ ಅವರು ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಯೋಗಿ ಆದಿತ್ಯನಾಥ್ರು ಅಯೋಧ್ಯೆಯ ಅಭಿವೃದ್ಧಿ ಯೋಜನೆಗಳ ರೂಪುರೇಷೆಯ ಬಗ್ಗೆ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ. ಇಲ್ಲಿನ ಸುಸ್ಥಿರ ರಸ್ತೆ, ಮೂಲಸೌಕರ್ಯ, ರೈಲ್ವೆ ಸ್ಟೇಶನ್, ಏರ್ಪೋರ್ಟ್ ನಿರ್ಮಾಣಗಳ ಬಗ್ಗೆಯೂ ಮೋದಿಯವರಿಗೆ ವಿವರಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆಯೂ ಉತ್ತರ ಪ್ರದೇಶ ಸರ್ಕಾರ ಹೆಚ್ಚೆಚ್ಚು ಗಮನ ಹರಿಸುತ್ತಿದೆ. ಅಯೋಧ್ಯೆಯಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಬೇಕು ಎಂದು ಫೆಬ್ರವರಿಯಲ್ಲಿ ಯೋಗಿ ಕೇಂದ್ರದ ಮುಂದೆ ಪ್ರಸ್ತಾಪ ಇಟ್ಟಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಕೂಡ ಅನುಮೋದನೆ ನೀಡಿದೆ. ಇದೀಗ ಏರ್ಪೋರ್ಟ್ ನಿರ್ಮಾಣ ಸಂಬಂಧ ರೂಪುರೇಷೆ, ಯೋಜನೆಗಳ ಬಗ್ಗೆ ಯೋಗಿ, ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆ. ಇನ್ನು ಏರ್ಪೋರ್ಟ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 1000 ಕೋಟಿ ರೂ.ಮೀಸಲಿಟ್ಟಿದೆ. ಕೇಂದ್ರ ಸರ್ಕಾರ 250 ಕೋಟಿ ರೂ.ನೀಡುವುದಾಗಿ ಹೇಳಿದೆ.
ಸದ್ಯ ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಪಟ್ಟಂತೆ ಭೂಮಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ, ಯೋಗಿಯವರೊಂದಿಗೆ ಸಭೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರವಷ್ಟೇ ಅಲ್ಲದೆ, ಅದಕ್ಕೆ ಪೂರಕವಾದ ಕೆಲವು ಕಟ್ಟಡಗಳನ್ನು ಕಟ್ಟಲೂ ಯೋಜನೆ ರೂಪಿಸಲಾಗಿದೆ. ಪಟ್ಟಣದಲ್ಲಿ ನಾಲ್ಕು ದೊಡ್ಡದಾದ, ಶ್ರೀರಾಮ ದ್ವಾರವನ್ನು ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ, ರಾಮಾಯಣ ಧಾರ್ಮಿಕ ಅರಣ್ಯ ನಿರ್ಮಾಣಕ್ಕೆ 2300 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಒಟ್ಟಾರೆ ಪ್ರವಾಸೋದ್ಯಮ ಉತ್ತೇಜನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಯೋಜನೆಗಳನ್ನೂ ಅನುಷ್ಠಾನಕ್ಕೆ ತರಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರ ಕೂಡ ಸಹಕಾರ ವ್ಯಕ್ತಪಡಿಸಿದೆ.
Prime Minister Narendra Modi chairs review meeting on Ayodhya Development plan via video conferencing
Uttar Pradesh CM Yogi Adityanath is also present in the meeting pic.twitter.com/JltkWIxHXn
— ANI (@ANI) June 26, 2021
ಇದನ್ನೂ ಓದಿ: ಮುಂಬೈನಲ್ಲಿ ಹೊಸ ಅಪಾರ್ಟ್ಮೆಂಟ್ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್ ಆಗ್ತಾರಾ ಕೊಡಗಿನ ಕುವರಿ?
Published On - 2:28 pm, Sat, 26 June 21