ನೂರಾರು ಮಹಿಳೆಯರ ಜೀವನ ಹಾಳು ಮಾಡಿದ ವ್ಯಕ್ತಿಯ ಭುಜದ ಮೇಲೆ ಕೈಹಾಕಿ ಪೋಸ್ ಕೊಟ್ಟಿದ್ರಿ: ಮೋದಿಗೆ ಕುಟುಕಿದ ಪ್ರಿಯಾಂಕಾ

Priyanka Gandhi Questions Narendra Modi on Prajwal Revanna Controversy: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಿಯಾಂಕಾ ಗಾಂಧಿ ಪ್ರಧಾನಿಗಳ ವಿರುದ್ಧ ದಾಳಿ ಮಾಡಿದ್ದಾರೆ. ಪ್ರಜ್ವಲ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದು, ಚುನಾವಣಾ ಪ್ರಚಾರ ಮಾಡಿದ್ದು ಇವನ್ನು ಉಲ್ಲೇಖಿಸಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದಾರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ. ತಾವು ಹೆಗಲ ಮೇಲೆ ಕೈ ಇಟ್ಟ ವ್ಯಕ್ತಿ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾರೆ. ತಾವು ಇನ್ನೂ ಮೌನವಾಗಿ ಇರುತ್ತೀರಾ ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ನೂರಾರು ಮಹಿಳೆಯರ ಜೀವನ ಹಾಳು ಮಾಡಿದ ವ್ಯಕ್ತಿಯ ಭುಜದ ಮೇಲೆ ಕೈಹಾಕಿ ಪೋಸ್ ಕೊಟ್ಟಿದ್ರಿ: ಮೋದಿಗೆ ಕುಟುಕಿದ ಪ್ರಿಯಾಂಕಾ
ಪ್ರಿಯಾಂಕಾ ಗಾಂಧಿ ವಾದ್ರಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 29, 2024 | 1:07 PM

ನವದೆಹಲಿ, ಏಪ್ರಿಲ್ 29: ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣವನ್ನು (Prajwal revanna sex scandal) ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಈ ಹಗರಣವನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಜೊತೆ ಮೋದಿ ಫೋಟೋಗೆ ಪೋಸ್ ಕೊಟ್ಟ ಘಟನೆಯನ್ನು ಉಲ್ಲೇಖಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾರೆ. ಆದರೂ ಮೋದಿ ಸುಮ್ಮನಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಎಕ್ಸ್ ಖಾತೆಯ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

‘ಪ್ರಧಾನಿಗಳು ಈ ನಾಯಕನ ಭುಜದ ಮೇಲೆ ಕೈ ಹಾಕಿ ಫೋಟೋಗೆ ಪೋಸ್ಟ್ ಕೊಟ್ಟಿದ್ದರು. ಚುನಾವಣೆಗೆ 10 ದಿನದ ಹಿಂದೆ ಈ ನಾಯಕನ ಪರವಾಗಿ ಪ್ರಧಾನಿ ಪ್ರಚಾರಕ್ಕೆ ಹೋಗುತ್ತಾರೆ. ವೇದಿಕೆಯಲ್ಲಿ ಹಾಡಿ ಹೊಗಳುತ್ತಾರೆ. ಇವತ್ತು ಕರ್ನಾಟಕದ ಆ ನಾಯಕ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆ ವ್ಯಕ್ತಿಯ ಘೋರ ಅಪರಾಧಗಳ ಬಗ್ಗೆ ಕೇಳಿದರೇ ಸಾಕು ಹೃದಯ ನಡುಗುತ್ತದೆ. ಆ ವ್ಯಕ್ತಿ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆದರೂ ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ?’ ಎಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ- ಕುಮಾರಸ್ವಾಮಿ ಹೇಳಿಕೆ

ಚುನಾವಣೆಗೆ ಕೆಲ ದಿನಗಳ ಮೊದಲು ಹಾಸನದಲ್ಲಿ ಪೆನ್ ಡ್ರೈವ್ ಪ್ರಕರಣ ಸಾರ್ವತ್ರಿಕವಾಗಿ ಬೆಳಕಿಗೆ ಬಂದಿತ್ತು. ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಹಲವು ವಿಡಿಯೋಗಳು ಈ ಪೆನ್​ಡ್ರೈವ್​ನಲ್ಲಿವೆ. ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣ ಅವರ ರಾಸಲೀಲೆಯ ವಿಡಿಯೋಗಳೂ ಇವೆ.

ಈ ವಿಡಿಯೋಗಳಲ್ಲಿರುವುದು ನಿಜವಲ್ಲ. ನಕಲಿ ವಿಡಿಯೋಗಳು ಎಂಬುದು ಸದ್ಯ ಪ್ರಜ್ವಲ್ ರೇವಣ್ಣ ಅವರ ನಿಲುವಾಗಿದೆ. ಆದರೆ, ಅವರು ವಿದೇಶಕ್ಕೆ ಹೋಗಿರಬಹುದು ಎಂಬಂತಹ ಸುದ್ದಿಗಳಿವೆ. ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ: ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ

ಇನ್ನೊಂದೆಡೆ ಬಿಜೆಪಿ ಈ ಪ್ರಕರಣದಿಂದ ದೂರ ಉಳಿಯಲು ಯತ್ನಿಸಿದೆ. ಎಸ್​ಐಟಿಯಿಂದ ತನಿಖೆ ನಡೆಯುತ್ತಿದ್ದು ಸತ್ಯಾಂಶ ಹೊರಬರಲಿ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಮಾತನಾಡಿದ್ದು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರೇ ಅಪರಾಧ ಎಸಗಿದರೂ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗಲಿ. ಪ್ರಜ್ವಲ್ ತಪ್ಪು ಮಾಡಿದ್ದರೆ ಪಕ್ಷದಿಂದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Mon, 29 April 24