Priyanka Gandhi: ಪ್ರಿಯಾಂಕಾ ಗಾಂಧಿ ಬಿಡುಗಡೆ; ಕೊನೆಗೂ ಆಗ್ರಾದ ಮೃತನ ಕುಟುಂಬಸ್ಥರ ಭೇಟಿಗೆ ಅನುಮತಿ

ಆಗ್ರಾಗೆ ಹೋಗಲು 4 ಜನರಿಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದಾರೆ. ನಾವೀಗ ನಮ್ಮ ಪ್ರಯಾಣವನ್ನು ಮುಂದುವರೆಸಿದ್ದೇವೆ. ನಾನು ಮೃತ ಕಾರ್ಮಿಕನ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

Priyanka Gandhi: ಪ್ರಿಯಾಂಕಾ ಗಾಂಧಿ ಬಿಡುಗಡೆ; ಕೊನೆಗೂ ಆಗ್ರಾದ ಮೃತನ ಕುಟುಂಬಸ್ಥರ ಭೇಟಿಗೆ ಅನುಮತಿ
ಪ್ರಿಯಾಂಕಾ ಗಾಂಧಿ

ಲಕ್ನೋ: ಆಗ್ರಾದ ಬಡ ಕೂಲಿ ಕಾರ್ಮಿಕ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗ್ರಾದಲ್ಲಿರುವ ಮೃತ ಕಾರ್ಮಿಕನ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ಲಕ್ನೋ ಟೋಲ್ ಬಳಿ ವಶಕ್ಕೆ ಪಡೆದಿದ್ದರು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶ ಸರ್ಕಾರ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪೊಲೀಸರ ಈ ವರ್ತನೆಯನ್ನು ಕಾಂಗ್ರೆಸ್ ನಾಯಕರು ಕೂಡ ಟೀಕಿಸಿದ್ದರು. ಸ್ವಲ್ಪ ಸಮಯ ಪ್ರಿಯಾಂಕಾ ಗಾಂಧಿ ಅವರನ್ನು ವಶದಲ್ಲಿರಿಸಿಕೊಂಡ ಪೊಲೀಸರು ಕೊನೆಗೂ ಅವರಿಗೆ ಆಗ್ರಾಗೆ ತೆರಳಲು ಅನುಮತಿ ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ವಾಲ್ಮೀಕಿ ಪೊಲೀಸ್ ಠಾಣೆಯಿಂದ 25 ಲಕ್ಷ ರೂ. ಕದ್ದ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಪೊಲೀಸ್ ವಶದಲ್ಲಿರುವಾಗಲೇ ಆ ಕಾರ್ಮಿಕ ಸಾವನ್ನಪ್ಪಿದ್ದ. ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿರುವುದು ಖಚಿತವಾಯಿತು ಎಂದು ಪೊಲೀಸರು ಹೇಳಿದ್ದರು. ಆದರೆ, ಆತನ ಕುಟುಂಬಸ್ಥರು ಪೊಲೀಸರೇ ಚಿತ್ರಹಿಂಸೆ ನೀಡಿ ಆತನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಜನರಿಂದ ಆಕ್ರೋಶ ಹೆಚ್ಚಾಗಿದ್ದರಿಂದ ಜಗದೀಶ್​ಪುರ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಸೆಕ್ಷನ್ 144 ಜಾರಿಗೊಳಿಸಲಾಗಿತ್ತು.

ಮೃತ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಇಂದು ಲಕ್ನೋದಿಂದ ಆಗ್ರಾಗೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಲಕ್ನೋ-ಆಗ್ರಾ ಎಕ್ಸ್​ಪ್ರೆಸ್​ ಹೈವೇ ಮಾರ್ಗದ ಟೋಲ್ ಬಳಿ ಪೊಲೀಸರು ತಡೆದಿದ್ದರು. ಪ್ರಿಯಾಂಕಾ ಗಾಂಧಿಗೆ ಆಗ್ರಾಗೆ ತೆರಳಲು ಅನುಮತಿ ನೀಡದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆದಿತ್ತು.

ಅದಾದ ಬಳಿಕ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಕಾರ್ಮಿಕ ಮೃತಪಟ್ಟ ಹಿನ್ನೆಲೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದರು. ಅದಾದ ಸ್ವಲ್ಪ ಸಮಯದ ನಂತರ ಅವರನ್ನು ಬಿಡುಗಡೆ ಮಾಡಲಾಗಿದ್ದು, ಆಗ್ರಾಗೆ ಹೋಗಲು ನಮಗೆ ಅನುಮತಿ ನೀಡಲಾಗಿದೆ. ಕೇವಲ 4 ಜನರಿಗೆ ಮಾತ್ರ ಆಗ್ರಾಗೆ ಹೋಗಲು ಪೊಲೀಸರು ಅನುಮತಿ ನೀಡಿದ್ದಾರೆ. ನಾವೀಗ ನಮ್ಮ ಪ್ರಯಾಣವನ್ನು ಮುಂದುವರೆಸಿದ್ದೇವೆ. ನಾನು ಮೃತ ಕಾರ್ಮಿಕನ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಆಗ್ರಾಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನಾನು ಎಲ್ಲೇ ಹೋದರೂ ನನ್ನನ್ನು ತಡೆಯುವ ಪ್ರಯತ್ನವಾಗುತ್ತಿದೆ. ಹಾಗಾದರೆ ನಾನು ರೆಸ್ಟೋರೆಂಟ್​ನಲ್ಲಿ ಕುಳಿತುಕೊಂಡಿರಬೇಕಾ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನಾನು ನನ್ನ ಜವಾಬ್ದಾರಿಯನ್ನು ಮಾಡುವುದು ತಪ್ಪಾ? ನಾನು ಮೃತರ ಕುಟುಂಬದವರನ್ನು ಭೇಟಿಯಾಗಿ ಸಮಾಧಾನ ಹೇಳಿದರೆ ಅದರಲ್ಲಿ ತಪ್ಪೇನಿದೆ? ನನ್ನನ್ನು ನೋಡಿದರೆ ಉತ್ತರ ಪ್ರದೇಶ ಸರ್ಕಾರಕ್ಕೆ ಭಯವೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು.

ಇದನ್ನೂ ಓದಿ: Priyanka Gandhi: ಮೃತನ ಕುಟುಂಬಸ್ಥರ ಭೇಟಿಗೆ ಆಗ್ರಾಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ

ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಶೇ.40ರಷ್ಟು ಟಿಕೆಟ್​ ಮಹಿಳೆಯರಿಗೆ ಮೀಸಲು: ಪ್ರಿಯಾಂಕಾ ಗಾಂಧಿ

Click on your DTH Provider to Add TV9 Kannada