ದೆಹಲಿ ಜೂನ್ 14: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ವಯನಾಡ್ ಲೋಕಸಭಾ ಕ್ಷೇತ್ರದಿಂದ (Wayanad Lok Sabha constituency) ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬರುತ್ತಿದೆ.ಈ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ರಾಹುಲ್ ಗಾಂಧಿ (Rahul Gandhi), ಈ ಎರಡು ಸೀಟುಗಳಲ್ಲಿ ಯಾವುದಾದರೊಂದನ್ನು ಬಿಟ್ಟು ಕೊಡಬೇಕಾಗಿದೆ. ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ಬಿಟ್ಟು ಕೊಡಲಿದ್ದಾರೆ ಎಂದು ಕೇರಳದ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಸುಳಿವು ನೀಡಿದ್ದಾರೆ. ರಾಹುಲ್ ವಯನಾಡ್ ಸೀಟು ಬಿಟ್ಟುಕೊಟ್ಟರೆ ಇಲ್ಲಿ ಉಪಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ 2024 ರ ಲೋಕಸಭಾ ಚುನಾವಣೆಯಲ್ಲಿ, ವಯನಾಡ್ (ಕೇರಳ) ಕ್ಷೇತ್ರವನ್ನು ಉಳಿಸಿಕೊಳ್ಳಲು ಮತ್ತು ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾದ ರಾಯ್ ಬರೇಲಿ (ಉತ್ತರ ಪ್ರದೇಶ)ದಲ್ಲಿ ಕಾಂಗ್ರೆಸ್ ಪರಂಪರೆಯನ್ನು ಭದ್ರಪಡಿಸುವ ಗುರಿಯೊಂದಿಗೆ ರಾಹುಲ್ ಎರಡೂ ಸ್ಥಾನಗಳಿಂದ ಸ್ಪರ್ಧಿಸಿದರು. ಅವರು ಪ್ರತಿ ಕ್ಷೇತ್ರದಲ್ಲಿ 350,000 ಮತಗಳ ಭಾರೀ ಅಂತರದಿಂದ ಎರಡೂ ಸ್ಥಾನಗಳನ್ನು ಗೆದ್ದಿದ್ದಾರೆ
ಒಬ್ಬ ವ್ಯಕ್ತಿಗೆ ಎರಡು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದ್ದರೂ ಯಾವುದಾದರೂ ಒಂದು ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ರಾಹುಲ್ ಒಂದು ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ನಿಯಮಗಳು ನಿರ್ದೇಶಿಸುತ್ತವೆ. ಅಭ್ಯರ್ಥಿಯು ಎರಡು ಲೋಕಸಭಾ ಕ್ಷೇತ್ರಗಳಿಂದ ಚುನಾಯಿತರಾದರೆ, ಫಲಿತಾಂಶ ಪ್ರಕಟವಾದ 14 ದಿನಗಳ ಒಳಗಾಗಿ ಅವರು ಒಂದಕ್ಕೆ ರಾಜೀನಾಮೆ ನೀಡಬೇಕು. ಹಾಗೆ ಮಾಡಲು ವಿಫಲವಾದರೆ ಎರಡೂ ಸ್ಥಾನಗಳು ಖಾಲಿ ಬೀಳುತ್ತವೆ. ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4 ರಂದು ಪ್ರಕಟವಾಗಿದ್ದು, ಜೂನ್ 18 ರೊಳಗೆ ರಾಹುಲ್ ಈ ತೀರ್ಮಾನ ಕೈಗೊಳ್ಳಬೇಕಾಗಿದೆ ರಾಹುಲ್ ಈ ಕ್ಷೇತ್ರ ಬಿಟ್ಟುಕೊಟ್ಟರೆ ಪ್ರಿಯಾಂಕಾ ಅವರು ವಯನಾಡ್‌ನಿಂದ ಚುನಾವಣೆಗೆ ಪಾದಾರ್ಪಣೆ ಮಾಡಬಹುದು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರ ತೊರೆಯಲಿದ್ದಾರೆ; ಸುಳಿವು ನೀಡಿದ ಸುಧಾಕರನ್
ರಾಹುಲ್ ಯಾವ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಎಂಬುದರ ಕುರಿತು ಹೆಚ್ಚುತ್ತಿರುವ ಗದ್ದಲದ ನಡುವೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಕೆ ಸುಧಾಕರನ್ ಬುಧವಾರ ವಯನಾಡ್ ಖಾಲಿಯಾಗಬಹುದು ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ. “ರಾಷ್ಟ್ರವನ್ನು ಮುನ್ನಡೆಸಬೇಕಾದ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಉಳಿಯಬಾರದು. ಆದ್ದರಿಂದ ನಾವು ದುಃಖಿಸಬೇಕಾಗಿಲ್ಲ. ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಂಡು ಅವರಿಗೆ ತಮ್ಮ ಎಲ್ಲಾ ಶುಭಾಶಯಗಳನ್ನು ಮತ್ತು ಬೆಂಬಲವನ್ನು ನೀಡಬೇಕು” ಎಂದು ಸುಧಾಕರನ್ ಹೇಳಿದ್ದಾರೆ.
ಈ ನಿರ್ಧಾರವು ತನಗೆ ಸಂದಿಗ್ಧತೆಯನ್ನು ತಂದಿದೆ ಎಂದು ಸ್ವತಃ ರಾಹುಲ್ ಹೇಳಿದ್ದು ತಮ್ಮ ಬೆಂಬಲಿಗರು ಚಿಂತಿಸಬೇಡಿ ಎಂದಿದ್ದಾರೆ.
ವಯನಾಡ್‌ನ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಕ್ಷೇತ್ರದಲ್ಲಿ ‘ಪ್ರಿಯಾಂಕಾ ಗಾಂಧಿಯವರೇ ನಮ್ಮನ್ನು ನೋಡಿಕೊಳ್ಳಿ’ ಎಂಬ ಪೋಸ್ಟರ್ ಗಳನ್ನು ಹಾಕಿದ್ದು ಪ್ರಿಯಾಂಕಾ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ