ಮಹಾಮೈತ್ರಿಯ ಸಮಸ್ಯೆ ಬಗೆಹರಿಯುವ ಬದಲು ಕಗ್ಗಂಟಾಗುತ್ತಿದೆಯೇ? ತಂತ್ರಗಾರಿಕೆ ಬದಲಿಸುವ ಸುಳಿವು ನೀಡಿದ ನಿತೀಶ್ ಕುಮಾರ್

|

Updated on: Sep 12, 2023 | 6:01 PM

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ನಿತೀಶ್ ಕುಮಾರ್ ವೈಯಕ್ತಿಕವಾಗಿ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲು ಆರಂಭಿಸಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬುತ್ತಿದ್ದಾರೆ. ಈ ಮಧ್ಯೆ, ಅದೇ ಕಾರ್ಯಕರ್ತರು ನಿತೀಶ್ ಪ್ರಧಾನಿಯಾಗಬೇಕೆಂಬ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಆರಂಭಿಸಿದ್ದಾರೆ.

ಮಹಾಮೈತ್ರಿಯ ಸಮಸ್ಯೆ ಬಗೆಹರಿಯುವ ಬದಲು ಕಗ್ಗಂಟಾಗುತ್ತಿದೆಯೇ? ತಂತ್ರಗಾರಿಕೆ ಬದಲಿಸುವ ಸುಳಿವು ನೀಡಿದ ನಿತೀಶ್ ಕುಮಾರ್
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಇತರರ ಜತೆ ನಿತೀಶ್ ಕುಮಾರ್
Follow us on

ನವದೆಹಲಿ, ಸೆಪ್ಟೆಂಬರ್ 12: ರಾಜಕೀಯವೂ ಕ್ರಿಕೆಟ್‌ನಂತೆ. ಇಲ್ಲಿ ರಾಜಕಾರಣಿಗಳು ಸಮಯ, ಸಂದರ್ಭಾನುಸಾರ ತಮ್ಮ ನಡೆಗಳನ್ನು ಬದಲಾಯಿಸುತ್ತಾರೆ. ಸಮಯಕ್ಕನುಗುಣವಾಗಿ ಚುರುಕಾದ ಚಲನೆಗಳನ್ನು ಮಾಡುವುದರ ಜತೆಗೆ ಯಶಸ್ವಿ ಕ್ರಿಕೆಟಿಗರಂತೆ ಅತ್ಯುತ್ತಮ ಹೊಡೆತಗಳನ್ನು ಆಡುತ್ತಾರೆ! ಇಂಥ ರಾಜಕೀಯ ಚಾಣಾಕ್ಷರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಕೂಡ ಒಬ್ಬರು. ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿ ಅವರು ನಿರಂತರವಾಗಿ ಪ್ರಸ್ತುತತೆಯನ್ನು ಕಾಯ್ದುಕೊಂಡಿರುವುದಕ್ಕೆ ಇದೇ ಕಾರಣ. ಇದೀಗ ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಿದ ನತರ ಅವರು ತಮ್ಮ ರಾಜಕೀಯ ತಂತ್ರಗಾರಿಕೆಯಲ್ಲಿ ತುಸು ಬದಲಾವಣೆ ಮಾಡಿದಂತೆ ಕಂಡುಬರುತ್ತಿದೆ.

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಅವರು ವೈಯಕ್ತಿಕವಾಗಿ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲು ಆರಂಭಿಸಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬುತ್ತಿದ್ದಾರೆ. ಈ ಮಧ್ಯೆ, ಅದೇ ಕಾರ್ಯಕರ್ತರು ನಿತೀಶ್ ಪ್ರಧಾನಿಯಾಗಬೇಕೆಂಬ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಆರಂಭಿಸಿದ್ದಾರೆ. ಮುಂಬೈ ಸಭೆಗೂ ಮುನ್ನ ಪ್ರಧಾನಿ ಹುದ್ದೆಗೆ ತಮ್ಮ ಹೆಸರನ್ನು ಉಲ್ಲೇಖಿಸಿದ್ದ ಬಗ್ಗೆ ಬೆಂಬಲಿಗರ ಮೇಲೆ ಕೋಪಗೊಂಡಿದ್ದ ನಿತೀಶ್, ಈಗ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ನಿತೀಶ್ ಕುಮಾರ್ ತಂತ್ರಗಾರಿಕೆ ಬದಲಾಯಿಸುತ್ತಿರುವುದು ಏಕೆ?

ನಿತೀಶ್ ಕುಮಾರ್ ರಾಜಕೀಯವನ್ನು ಹತ್ತಿರದಿಂದ ಅರ್ಥಮಾಡಿಕೊಂಡವರು, ಅವರು ಹೊಸ ನಿರ್ಧಾರ ತೆಗೆದುಕೊಳ್ಳುವ ಮೊದಲು ಅನೇಕ ಸುಳಿವುಗಳನ್ನು ನೀಡುತ್ತಾರೆ. ಅವರ ಸಹೋದ್ಯೋಗಿಗಳು ಇದನ್ನು ಅರಿತುಕೊಳ್ಳಲು ವಿಫಲರಾದರೆ, ಅದು ಅವರ ತಪ್ಪು. ನಿತೀಶ್ ಕುಮಾರ್ ಅವರ ಹಳೆಯ ಸಹವರ್ತಿಗಳಾಗಿರುವ ಜಿತನ್ ರಾಮ್ ಮಾಂಝಿ ಮತ್ತು ಪ್ರಶಾಂತ್ ಕಿಶೋರ್, ಅವರ ಕಾರ್ಯವೈಖರಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನಿತೀಶ್ ಅವರ ಭವಿಷ್ಯದ ರಾಜಕೀಯ ನಡೆಯನ್ನು ಗ್ರಹಿಸಿದ ಇಬ್ಬರೂ ಆ ಬಗ್ಗೆ ಹೇಳಿಕೆ ನೀಡಿದ್ದಾರೆ.

ನಿಸ್ಸಂಶಯವಾಗಿ ಇದಕ್ಕೆ ಕಾರಣವಿದೆ. ಮಹಾಮೈತ್ರಿಕೂಟದಲ್ಲಿ ನಿತೀಶ್ ಈಗ ಅಪ್ರಸ್ತುತವಾಗಿ ಕಾಣತೊಡಗಿದ್ದಾರೆ. ರಾಜ್ಯದಲ್ಲಿ ಜೆಡಿಯುನ ಆಪ್ತ ಮಿತ್ರ ಪಕ್ಷವಾಗಿರುವ ಆರ್‌ಜೆಡಿ ಕಾಂಗ್ರೆಸ್‌ ಭಾಷೆಯಲ್ಲೇ ಮಾತನಾಡಲು ಆರಂಭಿಸಿದೆ. ಲಾಲು ಪ್ರಸಾದ್ ಮುಂಬೈನಲ್ಲಿ ರಾಹುಲ್ ಗಾಂಧಿಗೆ ಸಾಂತ್ವನ ಹೇಳಿದ ರೀತಿ ಲಾಲು ಪ್ರಸಾದ್ ಮತ್ತು ಕಾಂಗ್ರೆಸ್ ಬಹಿರಂಗವಾಗಿ ರಾಜಕೀಯ ಆಟವಾಡಲು ಪ್ರಾರಂಭಿಸಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ನಿಸ್ಸಂಶಯವಾಗಿ, ಬಿಹಾರದ ಮಹಾಮೈತ್ರಿಕೂಟ ರಾಜಕಾರಣದಲ್ಲಿ ಒಂಟಿಯಾಗಿದ್ದ ನಿತೀಶ್ ಈಗ ಅಂಚಿನಲ್ಲಿರುವಂತೆ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅನುಭವಿ ನಾಯಕನಂತೆ, ಮೊದಲು ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಜಿ 20 ಸಭೆಗೆ ಹಾಜರಾದ ನಿತೀಶ್, ಅಲ್ಲಿಂದ ಹಿಂದಿರುಗಿದ ನಂತರ ತಮ್ಮ ಬೆಂಬಲಿಗರನ್ನು ಭೇಟಿ ಮಾಡಲು ಮತ್ತು ಅವರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಹೋರಾಟಕ್ಕೆಂದೇ ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ; ತಮಿಳುನಾಡು ಸಚಿವ ಪೊನ್ಮುಡಿ ವಿವಾದಾತ್ಮಕ ಹೇಳಿಕೆ

ಈಗ ಅವರ ಬೆಂಬಲಿಗರು ಸದನದ ಹೊರಗೆ ದನಿ ಎತ್ತುತ್ತಿದ್ದು, ಪ್ರಧಾನ ಮಂತ್ರಿ ಹುದ್ದೆಗೆ ನಿತೀಶ್ ಆಕಾಂಕ್ಷಿ ಎಂಬ ವಾದ ಮಂಡನೆ ಆರಂಭಿಸಿದ್ದಾರೆ. ಆದರೆ ಈ ಬಗ್ಗೆ ನಿತೀಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಧಾನಿ ಹುದ್ದೆಗೆ ಹಕ್ಕು ಸಾಧಿಸುತ್ತಿರುವುದೇಕೆ ನಿತೀಶ್ ಕುಮಾರ್?

ಕಾಂಗ್ರೆಸ್ ಮತ್ತು ಸಿಪಿಐಎಂಎಲ್​​ ಜತೆ ಆರ್​​ಜೆಡಿ ಪ್ರಬಲ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ 9 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಹವಣಿಸುತ್ತಿದ್ದರೆ, ಸಿಪಿಐಎಂಎಲ್ 6 ಲೋಕಸಭಾ ಸ್ಥಾನಗಳಲ್ಲಿ ಹಕ್ಕು ಸಾಧಿಸುತ್ತಿದೆ. ನಿತೀಶ್‌ಗೆ ಒಂದು ದೊಡ್ಡ ಸಮಸ್ಯೆ ಎಂದರೆ, ಹಲವಾರು ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಸಲು ಬೇಡಿಕೆ ಇಡುತ್ತಿರುವ ಸ್ಥಾನಗಳದ್ದು. ನಿತೀಶ್ ಕುಮಾರ್ ಅವರಿಗೆ ಪಕ್ಷದ ಹದಿನಾರು ಸಂಸದರಿಗೆ ಸ್ಥಾನ ನೀಡುವುದೇ ದೊಡ್ಡ ಸವಾಲಾಗಿದೆ. ಜೆಡಿಯು ಸಂಸದರು ಕೂಡ ತಮ್ಮ ಉಮೇದುವಾರಿಕೆಗೆ ಸಂಬಂಧಿಸಿದಂತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಮೇಲೆ ಅವರ ಪಕ್ಷದ ಸಂಸದರಿಂದ ಒತ್ತಡ ಹೆಚ್ಚುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪ್ರಧಾನಿ ಹುದ್ದೆಗೆ ಬೇಡಿಕೆಯಿಡುವ ಮೂಲಕ ಇಂಡಿಯಾ ಮೈತ್ರಿಕೂಟದ ಮೇಲೆ ಒತ್ತಡವನ್ನು ಹೆಚ್ಚಿಸಲಾರಂಭಿಸಿದ್ದಾರೆ.

ನಿತೀಶ್ ಕುಮಾರ್ ಆದ್ಯತೆ ಏನು?

ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ನಿತೀಶ್ ಅವರ ಆದ್ಯತೆಯಾಗಿರಲಿದೆ. ನಿತೀಶ್ ಯಾವುದೇ ಬೆಲೆ ತೆತ್ತಾದರೂ 16ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಡಲಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಯಾವುದೇ ಅವಕಾಶ ದೊರೆತರೆ ಅದನ್ನು ನಿತೀಶ್ ಕುಮಾರ್ ವ್ಯರ್ಥ ಮಾಡಲು ಬಯಸುವುದಿಲ್ಲ. ಅದಕ್ಕಾಗಿಯೇ ನಿತೀಶ್ ಕುಮಾರ್ ಪರ ರಣತಂತ್ರ ಹೆಣೆದಿರುವ ಪ್ರಶಾಂತ್ ಕಿಶೋರ್ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅತ್ತ ಎನ್​​ಡಿಎಯಲ್ಲಿನ ಅವರ ಸಂಪರ್ಕಗಳು ಕೂಡ ಸಿದ್ಧವಾಗಿವೆ. ಪ್ರಧಾನಿ ಮೋದಿಯವರೊಂದಿಗಿನ ನಿತೀಶ್ ಕುಮಾರ್ ಅವರ ಆತ್ಮೀಯ ಭೇಟಿಯು ನಿಸ್ಸಂಶಯವಾಗಿ ಆ ಆಯ್ಕೆಗಳತ್ತ ಗಮನ ಹರಿಸುತ್ತಿದೆ. ಇದರ ಸಹಾಯದಿಂದ, ನಿತೀಶ್ ಅವರು ಇಂಡಿಯಾ ಮೈತ್ರಿಕೂಟದ ಮೇಲೆ ಒತ್ತಡ ಹೇರುವ ಮೂಲಕ ಬಿಹಾರದ ರಾಜಕೀಯದ ಮೇಲೆ ಬಲವಾದ ಹಿಡಿತವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಆ ನಂತರ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ದೊರೆಯುವಂತೆ ಮಾಡಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

(ಮೂಲ; ಟಿವಿ9 ಭಾರತ್​ವರ್ಷ್)

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ