ಪಿಣರಾಯಿ ವಿಜಯನ್ ವಿರುದ್ಧ ಕಾವೇರಿದ ಪ್ರತಿಭಟನೆ; ಕಪ್ಪು ಮಾಸ್ಕ್, ಕಪ್ಪು ಡ್ರೆಸ್ಗಳಿಗೂ ನಿರ್ಬಂಧ?
ಮಲಪ್ಪುರಂನಲ್ಲಿ ಮಾತನಾಡಿದ ಸಿಎಂ ಪಿಣರಾಯಿ ಕಾಂಗ್ರೆಸ್ ಕೊಳಕು ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.“ಸಂಘ ಪರಿವಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್...
ಚಿನ್ನ ಕಳ್ಳಸಾಗಣೆ (gold smuggling) ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್(Swapna Suresh) ಕಳೆದ ವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ವಿರುದ್ಧ ಗಂಭೀರ ಆರೋಪ ಮಾಡಿದ ನಂತರ ರಾಜ್ಯದಾದ್ಯಂತ ಪ್ರತಿಭಟನೆಗಳು ಹೆಚ್ಚಾಗಿವೆ. ಅದೇ ವೇಳೆ ಕಪ್ಪು ಬಣ್ಣದ ವಸ್ತುಗಳಿಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಸತತ ಎರಡನೇ ದಿನವೂ ಮಾಧ್ಯಮದವರಿಂದ ಹಿಡಿದು ಸಾಮಾನ್ಯ ಜನರು ಕೂಡಾ ಕಪ್ಪು ಮಾಸ್ಕ್, ಶರ್ಟ್ ಅಥವಾ ಇತರೆ ಡ್ರೆಸ್‌ಗಳನ್ನು ಧರಿಸಿ ಪಿಣರಾಯಿ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬರದಂತೆ ನಿರ್ಬಂಧ ಹೇರಲಾಗಿದೆ. ಕಪ್ಪು ಮಾಸ್ಕ್ ಅಥವಾ ಡ್ರೆಸ್‌ಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸಿಎಂ ಪುನರುಚ್ಚರಿಸಿದರೂ, ಪೊಲೀ ಸರು ಮಾತ್ರ ಹಲವಾರು ಸ್ಥಳಗಳಲ್ಲಿ ಕಪ್ಪು ಬಟ್ಟೆಗಳಿಗೆ ನಿಷೇಧ ಮುಂದುವರಿಸಿದ್ದಾರೆ. ಕಟ್ಟುನಿಟ್ಟಿನ ನಿರ್ಬಂಧಗಳು ಮತ್ತು ಬಿಗಿಯಾದ ಗಸ್ತುಗಳ ಹೊರತಾಗಿಯೂ, ಭಾನುವಾರ ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಕಪ್ಪು ಬಾವುಟಗಳನ್ನು ತೋರಿಸಲಾಯಿತು. ಕೆಲವೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಲೂನ್‌ಗಳನ್ನು ಹಾರಿಸಿ ಪ್ರತಿಭಟನೆ ನಡೆಸಿದರು. ಅದೆಷ್ಟು ಬಣ್ಣಗಳಿವೆ? ಈ ದಿನಗಳಲ್ಲಿ ನೀವು ಕಪ್ಪು ಬಣ್ಣವನ್ನು ಏಕೆ ಧರಿಸುತ್ತಿದ್ದೀರಿ ? ಇದು ಉದ್ದೇಶಪೂರ್ವಕವಾಗಿ ಸಿಎಂ ಹಾಗೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕ್ರಮವಾಗಿದೆ. ಈ ರೀತಿಯ ಚುನಾಯಿತ ಸರ್ಕಾರವನ್ನು ನೀವು ಕೆಣಕಲು ಸಾಧ್ಯವಿಲ್ಲ ಎಂದು ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಸಂಚಾಲಕ ಇ ಪಿ ಜಯರಾಜನ್ ಹೇಳಿದ್ದಾರೆ. ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಪ್ಪು ಬಾವುಟ ತೋರಿಸಿದ ನಂತರ ಸಿಎಂಗೆ ಹಾನಿ ಮಾಡುವ ತಂತ್ರ ನಡೆಯುತ್ತಿದೆ. ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ವರದಿಗಳು ನಮ್ಮ ಬಳಿ ಇವೆ ಎಂದಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ,ಕಪ್ಪುಬಣ್ಣಕ್ಕೆ ಪಿಣರಾಯಿ ಹೆದರುತ್ತಿದ್ದಾರೆ ಎಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಎಲ್ಲೆಂದರಲ್ಲಿ ಕಪ್ಪು ಬಣ್ಣವನ್ನು ಕಾಣುತ್ತಿದ್ದಾರೆ. ಕಪ್ಪು ಅವರ ಮನಸ್ಸು ಮತ್ತು ಹೃದಯವನ್ನು ವ್ಯಾಪಿಸುತ್ತಿದೆ. ಇಲ್ಲದಿದ್ದರೆ ಯಾವುದೇ ನಾಯಕನು ಇಂತಹ ಕೊಳಕು ತಂತ್ರಗಳನ್ನು ಆಶ್ರಯಿಸುವುದಿಲ್ಲ. ಅವರು ಕಪ್ಪು ಬಣ್ಣಕ್ಕೆ ಏಕೆ ಹೆದರುತ್ತಾನೆ? ಕಪ್ಪು ಬಾವುಟ ತೋರಿಸುವುದು ಪ್ರಜಾಪ್ರಭುತ್ವದ ಪ್ರತಿಭಟನೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದಾರೆ. ಅವರ ಮುಖದ ಮೇಲೆ ಅಪರಾಧಿ ಭಾವನೆ ದೊಡ್ಡದಾಗಿದೆ, ಅದಕ್ಕಾಗಿಯೇ ಅವರು ಇತ್ತೀಚಿನ ದಿನಗಳಲ್ಲಿ ಬಣ್ಣದ ಬಗ್ಗೆ ಅಸಹಿಷ್ಣುರಾಗುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಹೇಳಿದ್ದಾರೆ.
ಮಲಪ್ಪುರಂನಲ್ಲಿ ಮಾತನಾಡಿದ ಸಿಎಂ ಪಿಣರಾಯಿ ಕಾಂಗ್ರೆಸ್ ಕೊಳಕು ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.“ಸಂಘ ಪರಿವಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ನೋಟಿಸ್ ಈ ಸರಣಿಯಲ್ಲಿ ಇತ್ತೀಚಿನದು. ಕೇರಳದ ಕಾಂಗ್ರೆಸ್ಸಿಗರಿಗೆ ಇದರ ಅರಿವೇ ಇಲ್ಲದಂತಾಗಿದೆ. ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ” ಎಂದು ಹೇಳಿದ್ದಾರೆ. ಯುಎಇ ಕಾನ್ಸುಲೇಟ್‌ನಲ್ಲಿ ಚಿನ್ನ ಮತ್ತು ಡಾಲರ್ ಕಳ್ಳಸಾಗಣೆಯಲ್ಲಿ ಸಿಎಂ, ಅವರ ಕುಟುಂಬ ಸದಸ್ಯರು, ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಮಾಜಿ ಸಚಿವ ಕೆ.ಟಿ.ಜಲೀಲ್ ಮತ್ತು ಇತರರ ಪಾತ್ರವಿದೆ ಎಂದು ಸ್ವಪ್ನಾ ಸುರೇಶ್ ಸುದ್ದಿಗಾರರಿಗೆ ತಿಳಿಸಿದ್ದರಿಂದ ಮಂಗಳವಾರ ಚಿನ್ನದ ಕಳ್ಳಸಾಗಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸ್ವಪ್ನಾ ಸುರೇಶ್ ಅವರು ತಿರುವನಂತಪುರಂನಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯದರ್ಶಿಯಾಗಿ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡಿದ್ದಾರೆ.
ಜುಲೈ 5, 2020 ರಂದು ಕಸ್ಟಮ್ಸ್ ಇಲಾಖೆಯು ಬಾತ್ರೂಮ್ ಫಿಟ್ಟಿಂಗ್‌ನಲ್ಲಿ ಬಚ್ಚಿಟ್ಟಿದ್ದ 30 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕುಗಳನ್ನು ಸ್ವೀಕರಿಸಲು ಬಂದಿದ್ದ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ ಪಿ ಎಸ್ ಸರಿತ್ ಅವರನ್ನು ಅದೇ ದಿನ ಬಂಧಿಸಿತ್ತು. ಒಂದು ವಾರದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರಿನ ಸ್ವಪ್ನಾ ಸುರೇಶ್ ಮತ್ತು ಆಕೆಯ ಸಹಚರ ಸಂದೀಪ್ ನಾಯರ್ ಅವರನ್ನು ಬಂಧಿಸಿತು.
ಕಳೆದ ಎರಡು ವರ್ಷಗಳಲ್ಲಿ ಪ್ರಕರಣ ಹಲವು ತಿರುವುಗಳಿಗೆ ಸಾಕ್ಷಿಯಾಗಿದ್ದು, ಸಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಸೇರಿದಂತೆ ಹೆಚ್ಚಿನ ಆರೋಪಿಗಳು (ಒಟ್ಟು 32) ಜಾಮೀನು ಪಡೆದು ಹೊರಗಿದ್ದಾರೆ . ಸ್ವಪ್ನಾ ಸುರೇಶ್ 16 ತಿಂಗಳ ಜೈಲುವಾಸದ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಏತನ್ಮಧ್ಯೆ, ಹೊಸ ಪ್ರಕರಣವನ್ನು ರದ್ದುಗೊಳಿಸುವಂತೆ ಸೋಮವಾರ ಹೈಕೋರ್ಟ್‌ಗೆ ಹೋಗುವುದಾಗಿ ಸ್ವಪ್ನಾ ಸುರೇಶ್ ಹೇಳಿದ್ದಾರೆ. ಆಕೆಯ ಬಹಿರಂಗಪಡಿಸುವಿಕೆಯ ನಂತರ, ಪೊಲೀಸರು ಆಕೆಯ ವಿರುದ್ಧ 120B (ಅಪರಾಧದ ಪಿತೂರಿ) ಮತ್ತು 153 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ. ಶುಕ್ರವಾರ ಸ್ವಪ್ನಾ ಸುರೇಶ್ ,ಶಾಜ್ ಕಿರಣ್ ನಡುವಿನ ಮಾತುಕತೆಗಳನ್ನು ಒಳಗೊಂಡಿರುವ ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದು, ಶಾಜ್ ಕಿರಣ್ ಮಧ್ಯಸ್ಥಿಕೆ ವಹಿಸಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ