Rahul Gandhi: ಇಡಿ ವಿಚಾರಣೆಗೆ ಇಂದು ರಾಹುಲ್ ಗಾಂಧಿ ಹಾಜರು, ಕಾಂಗ್ರೆಸ್​ ಪ್ರತಿಭಟನೆಗೆ ದೆಹಲಿ ಪೊಲೀಸರಿಂದ ಅನುಮತಿ ನಿರಾಕರಣೆ

ದೆಹಲಿ ಪೊಲೀಸರು ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಿಂದ ಇಡಿ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಲು ಕಾಂಗ್ರೆಸ್ ಉದ್ದೇಶಿಸಿತ್ತು.

Rahul Gandhi: ಇಡಿ ವಿಚಾರಣೆಗೆ ಇಂದು ರಾಹುಲ್ ಗಾಂಧಿ ಹಾಜರು, ಕಾಂಗ್ರೆಸ್​ ಪ್ರತಿಭಟನೆಗೆ ದೆಹಲಿ ಪೊಲೀಸರಿಂದ ಅನುಮತಿ ನಿರಾಕರಣೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 13, 2022 | 9:32 AM

ದೆಹಲಿ: ನ್ಯಾಷನಲ್ ಹೆರಾಲ್ಡ್​ ಹಣಕಾಸು ಅವ್ಯವಹಾರ ಪ್ರಕರಣಕ್ಕೆ (National herald case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಜಾರಿ ನಿರ್ದೇಶನಾಲಯದ (Enforcement Directorate – ED) ಎದುರು ಹಾಜರಾಗಲಿದ್ದಾರೆ. ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್​ ಸೋಮವಾರ (ಜೂನ್ 13) ಮೆಗಾ ಸತ್ಯಾಗ್ರಹ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು. ಆದರೆ ದೆಹಲಿ ಪೊಲೀಸರು ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಿಂದ ಇಡಿ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಲು ಕಾಂಗ್ರೆಸ್ ಉದ್ದೇಶಿಸಿತ್ತು. ಇಡಿ ಕಚೇರಿಯ ಎದುರು ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ನೆರೆದಿರುವ ವಿಡಿಯೊ ತುಣುಕನ್ನು ಎಎನ್​ಐ ಸುದ್ದಿಸಂಸ್ಥೆ ಪ್ರಕಟಿಸಿದೆ.

ಈ ಪ್ರತಿಭಟನೆಯ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಬಲಪ್ರದರ್ಶನಕ್ಕೆ (Congress Protest) ಮುಂದಾಗಿದೆ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಕೋಮು ಗಲಭೆಯ ಆತಂಕ, ಅತಿಗಣ್ಯವ್ಯಕ್ತಿಗಳ ಸಂಚಾರ ಇರುವುದರಿಂದ ಪ್ರತಿಭಟನೆಗೆ ಅವಕಾಶ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ‘ಪ್ರತಿಭಟನೆಗೆ ಅನುಮತಿ ನೀಡಲು ಆಗುವುದಿಲ್ಲ’ ಎಂದು ದೆಹಲಿ ಡಿಸಿಪಿ ಅಮೃತಾ ಗುಗುಲೋತ್ ಹೇಳಿದರು.

ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ, ಮುಂಜಾಗ್ರತಾ ಕ್ರಮವಾಗಿ ಕೆಲ ನಾಯಕನರನ್ನು ಸೋಮವಾರ ಮುಂಜಾನೆಯೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷಗಳ ಧ್ವನಿ ಹತ್ತಿಕ್ಕಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ದೇಶದ ವಿವಿಧೆಡೆ 25 ಸ್ಥಳಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಕಳೆದ ವಾರ ಕಾಂಗ್ರೆಸ್ ನಾಯಕ ಮಾಣಿಕಮ್ ಟಾಗೋರ್ ಹೇಳಿದ್ದರು. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಈಗ ಜಾಮೀನಿನ ಮೇಲೆ ಇದ್ದಾರೆ. ಜಾರಿ ನಿರ್ದೇಶನಾಲಯದ ಎದುರು ರಾಹುಲ್ ಗಾಂಧಿ ಹಾಜರಾಗಬೇಕಿದೆ. ಇಂಥ ಸಂದರ್ಭದಲ್ಲಿ ಬೃಹನ್ನಾಟಕ್ಕೆ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ತನ್ನ ಎಲ್ಲ ನಾಯಕರನ್ನೂ ದೆಹಲಿಗೆ ಕರೆಸಿದೆ. ಇಂತ ನಾಟಕದ ಅವಶ್ಯಕತೆಯಾದರೂ ಏನಿತ್ತು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದರು.

‘ಸತ್ಯಾಗ್ರಹ ಎಂದರೆ ಏನು. ಇಂಥ ನಕಲಿ ಗಾಂಧಿಗಳು ಮತ್ತು ನಕಲಿ ಸತ್ಯಾಗ್ರಹ ನೋಡಿದ್ದ ಮಹಾತ್ಮ ಗಾಂಧಿ ಅವರಿಗೆ ನಾಚಿಕೆಯಾಗುತ್ತಿತ್ತು. ಸರ್ಕಾರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ ರಾಹುಲ್​ಜಿ. ಇದು ರಾಜಕೀಯ ವಿಚಾರವಲ್ಲ, ಕಾನೂನಿನ ವಿಚಾರ’ ಎಂದ ಸಂಬಿತ್ ಪಾತ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದಂತೆ ಕೇಳಿ ಬಂದಿರುವ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಮೊಕದ್ದಮೆ ದಾಖಲಿಸಿದೆ. ಪಂಡಿತ್ ಜವಾಹರ್ ಲಾಲ್ ನೆಹರು ಅವರು ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆಸೋಸಿಯೇಟೆಡ್ ಜರ್ನಲ್ಸ್​ ಲಿಮಿಟೆಡ್ (ಎಜೆಎಲ್) ಪ್ರಕಟಿಸುತ್ತಿದೆ. ಈ ಸಂಸ್ಥೆಯ ಮಾಲೀಕತ್ವವು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್​ಗೆ ಸೇರಿದೆ. ಯಂಗ್ ಇಂಡಿಯನ್ ಸಂಸ್ಥೆಯ ಪ್ರವರ್ತಕರು ಮತ್ತು ಷೇರುದಾರರ ಪಟ್ಟಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಹೆಸರುಗಳು ಇವೆ.

ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಸಲ್ಲಿಸಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಸೋನಿಯಾ ಗಾಂಧಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಕೊವಿಡ್ ಪಾಸಿಟಿವ್ ಆಗಿರುವ ಅವರು ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದು, ವಿಚಾರಣೆಗೆ ಬೇರೊಂದು ದಿನ ಹಾಜರಾಗುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 am, Mon, 13 June 22