ವಿಐಪಿ ಸಂಸ್ಕೃತಿಯಿಂದ ದೂರವಿರಿ, ಜನರ ಮಧ್ಯೆ ಹೋಗಿ: ಉತ್ತರ ಪ್ರದೇಶದ ಸಚಿವರಿಗೆ ಯೋಗಿ ಆದಿತ್ಯನಾಥ್ ಸೂಚನೆ
ಸರ್ಕಾರವು ಜನರ ಪರವಾಗಿದೆ. ಸಾರ್ವಜನಿಕ ಹಿತಾಸಕ್ತಿ ನಮಗೆ ಮುಖ್ಯ. ಸಮಾಜದ ಕಟ್ಟಕಡೆಯ ಹಂತದಲ್ಲಿರುವ ವ್ಯಕ್ತಿಯ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಪರಿಹರಿಸಬೇಕು. ಸಾರ್ವಜನಿಕ ವಿಚಾರಣೆ, ಸಾಮಾನ್ಯ ಜನರ ತೃಪ್ತಿ ಮತ್ತು ರಾಜ್ಯದ ಪ್ರಗತಿಗೆ ಆದ್ಯತೆ ನೀಡುವುದು ಯುಪಿ ಸರ್ಕಾರದ ಎಲ್ಲಾ ಸಾರ್ವಜನಿಕ ಕಲ್ಯಾಣ ಪ್ರಯತ್ನಗಳ ಮೂಲವಾಗಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದರು
ಲಖನೌ ಜೂನ್ 08: ರಾಜ್ಯ ಸರ್ಕಾರದ ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳು “ವಿಐಪಿ ಸಂಸ್ಕೃತಿಯನ್ನು” ಅಳವಡಿಸಿಕೊಳ್ಳಬಾರದು ಎಂದು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸೂಚನೆ ನೀಡಿದ್ದಾರೆ. ನಮ್ಮ ಯಾವುದೇ ಚಟುವಟಿಕೆಗಳು ವಿಐಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸದಂತೆ ನಾವೆಲ್ಲರೂ ಜಾಗರೂಕರಾಗಿರಬೇಕು ಎಂದು ಆದಿತ್ಯನಾಥ್ ಅವರು ತಮ್ಮ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಹೇಳಿರುವುದಾಗಿ ಯುಪಿ ಸರ್ಕಾರದ ಹೇಳಿಕೆ ತಿಳಿಸಿದೆ. ತಮ್ಮ ಮಂತ್ರಿಗಳಿಗೆ “ಸಂವಾದ, ಸಮನ್ವಯ, ಸಂವೇದನಶೀಲತಾ” (ಸಂವಾದ, ಸಮನ್ವಯ ಮತ್ತು ಸೂಕ್ಷ್ಮ) ಪಾಲಿಸುವಂತೆ ಹೇಳಿದ ಯೋಗಿ, ಬಿಜೆಪಿ ನಾಯಕರು ನಿಯಮಿತವಾಗಿ ಭೇಟಿ ನೀಡುವುದಲ್ಲದೆ ಜನರ ನಡುವೆ ಇರುವಂತೆ ಸೂಚನೆ ನೀಡಿದರು.
ಸರ್ಕಾರವು ಜನರ ಪರವಾಗಿದೆ. ಸಾರ್ವಜನಿಕ ಹಿತಾಸಕ್ತಿ ನಮಗೆ ಮುಖ್ಯ. ಸಮಾಜದ ಕಟ್ಟಕಡೆಯ ಹಂತದಲ್ಲಿರುವ ವ್ಯಕ್ತಿಯ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಪರಿಹರಿಸಬೇಕು. ಸಾರ್ವಜನಿಕ ವಿಚಾರಣೆ, ಸಾಮಾನ್ಯ ಜನರ ತೃಪ್ತಿ ಮತ್ತು ರಾಜ್ಯದ ಪ್ರಗತಿಗೆ ಆದ್ಯತೆ ನೀಡುವುದು ಯುಪಿ ಸರ್ಕಾರದ ಎಲ್ಲಾ ಸಾರ್ವಜನಿಕ ಕಲ್ಯಾಣ ಪ್ರಯತ್ನಗಳ ಮೂಲವಾಗಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಮುಖ್ಯಮಂತ್ರಿ ಅಭಿನಂದಿಸಿದರು. ಆದಾಗ್ಯೂ, 543 ಸ್ಥಾನಗಳ ಲೋಕಸಭೆಗೆ ಅತಿ ಹೆಚ್ಚು 80 ಸದಸ್ಯರನ್ನು ಕಳುಹಿಸುವ ದೇಶದ ಅತ್ಯಂತ ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಇಲ್ಲಿ ಬಿಜೆಪಿ ಕೇವಲ 33 ಸ್ಥಾನಗಳನ್ನು ಗೆದ್ದಿದೆ. 2014 ರಲ್ಲಿ 71 ಸ್ಥಾನ ಮತ್ತು 2019 ರಲ್ಲಿ 62 ಸ್ಥಾನ ಗೆದ್ದಿತ್ತು ಬಿಜೆಪಿ. ಮತ್ತೊಂದೆಡೆ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟ 43 (37+6) ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ: ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮೇಲಿನ ದಾಳಿ ಖಂಡಿಸಿದ ನರೇಂದ್ರ ಮೋದಿ
ಏತನ್ಮಧ್ಯೆ, ಸಿಎಂ ಆದಿತ್ಯನಾಥ್ ಅವರು ತಮ್ಮ ಮಂತ್ರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು “ವ್ಯಾಪಕವಾಗಿ ಪ್ರಚಾರ” ಮಾಡುವಂತೆ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಿ. ಡಬಲ್ ಎಂಜಿನ್ ಸರ್ಕಾರದ ನೀತಿಗಳು, ನಿರ್ಧಾರಗಳು ಮತ್ತು ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಯೋಗಿ ಆದಿತ್ಯನಾಥ್ ತಮ್ಮ ಸಚಿವರಿಗೆ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ 10 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ವೇಗವನ್ನು ಪಡೆದ ರೀತಿಯಲ್ಲಿ, ನಮ್ಮ ಸರ್ಕಾರವು ಮುಂಬರುವ ಐದು ವರ್ಷಗಳಲ್ಲಿ ಅನೇಕ ಹೊಸ ದಾಖಲೆಗಳನ್ನು ರಚಿಸುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ ಉತ್ತರ ಪ್ರದೇಶ ಸಿಎಂ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ