Explainer | ಪುದುಚೇರಿ ರಾಜಕಾರಣದಲ್ಲಿ ಬಹುಮತದ ಆಟ; ಸಾಧ್ಯಾಸಾಧ್ಯತೆಗಳೇನು?

| Updated By: ಸಾಧು ಶ್ರೀನಾಥ್​

Updated on: Feb 20, 2021 | 4:04 PM

ಪುದುಚೇರಿಯಲ್ಲಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಧಿಸಬಹುದೇ? ವಿರೋಧ ಪಕ್ಷಗಳು ಅಧಿಕಾರ ಪಡೆಯಬಹುದೇ? ಪುದುಚೇರಿ ರಾಜಕೀಯ ಪರಿಸ್ಥಿತಿ ಏನಾಗಬಹುದು? ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ

Explainer | ಪುದುಚೇರಿ ರಾಜಕಾರಣದಲ್ಲಿ ಬಹುಮತದ ಆಟ; ಸಾಧ್ಯಾಸಾಧ್ಯತೆಗಳೇನು?
ಬಿಜೆಪಿ ಹಾಗೂ ಕಾಂಗ್ರೆಸ್ ಧ್ವಜ
Follow us on

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದಿಂದ ಶಾಸಕರು ರಾಜೀನಾಮೆ ನೀಡಿ ಹೊರನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿದೆ. 30 ಶಾಸಕರು ಹಾಗೂ 3 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದ್ದ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತ ಕುಸಿದಿದೆ. ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್, ಮತ್ತೆ ಬಹುಮತ ಸಾಬೀತುಪಡಿಸಲು ಕಾದುಕುಳಿತಿದೆ. ನಾಮನಿರ್ದೇಶಿತ ಸದಸ್ಯರು ಬಹುಮತ ಸೂಚಿಸುವಂತಿಲ್ಲ ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ನಡುವೆ, ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಧಿಸಬಹುದೇ? ಇಲ್ಲವೇ? ಪುದುಚೇರಿ ರಾಜಕೀಯ ಪರಿಸ್ಥಿತಿ ಏನಾಗಬಹುದು? ಎಂದು ಇಲ್ಲಿ ಚರ್ಚಿಸಲಾಗಿದೆ.

ವಿಶ್ವಾಸಮತ ಗೆಲ್ಲಲಿದ್ದಾರಾ ನಾರಾಯಣಸ್ವಾಮಿ?

ಪುದುಚೇರಿಯಲ್ಲಿ ವಿರೋಧ ಪಕ್ಷಗಳು ಬಹುಮತಕ್ಕೆ ಬೇಕಾದಷ್ಟು ಸಂಖ್ಯಾಬಲವನ್ನು ಹೊಂದಿಲ್ಲ. ಜತೆಗೆ, 3 ನಾಮನಿರ್ದೇಶಿತ ಬಿಜೆಪಿ ಸದಸ್ಯರಿಗೆ ಬಹುಮತ ಸೂಚಿಸುವ ಹಕ್ಕಿಲ್ಲ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ನಾಮನಿರ್ದೇಶಿತ ಸದಸ್ಯರಿಗೆ ಇತರ ಸನ್ನಿವೇಶಗಳಲ್ಲಿ ಮತ ಚಲಾಯಿಸುವ ಹಕ್ಕಿದೆ. ಆದರೆ, ವಿಶ್ವಾಸ ಮತ ಸಾಧಿಸಬೇಕಾದ ಸಂದರ್ಭದಲ್ಲಿ ಬಹುಮತ ತಿಳಿಸುವ ಹಕ್ಕಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿಕೆಯನ್ನು ಕೂಡ ನಾರಾಯಣಸ್ವಾಮಿ ಉಲ್ಲೇಖಿಸಿದ್ದಾರೆ. ಈ ನೀತಿಯ ಅನ್ವಯ ಸ್ಪೀಕರ್ ವಿ.ಪಿ. ಸಿವಕೋಲುಂದು ಬಿಜೆಪಿ ಪಕ್ಷದ ನಾಮನಿರ್ದೇಶಿತ ಸದಸ್ಯರನ್ನು ಬಹುಮತ ಪ್ರಕ್ರಿಯೆಯಿಂದ ಹೊರಗಿಡಬಹುದು. ಹೀಗಾದರೆ, ಸದ್ಯ 14 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್-ಡಿ.ಎಂ.ಕೆ. ಸರ್ಕಾರ ಮತ್ತೆ ಪೂರ್ಣ ಬಹುಮತ ಪಡೆಯಲಿದೆ. ವಿರೋಧ ಪಕ್ಷಗಳು ಕೇವಲ 11 ಸದಸ್ಯ ಸಂಖ್ಯೆಯಿಂದ ಬಹುಮತ ಕಳೆದುಕೊಳ್ಳಲಿದೆ.

ಒಬ್ಬ ಶಾಸಕರ ರಾಜೀನಾಮೆ ಇನ್ನೂ ಸ್ವೀಕೃತವಾಗಿಲ್ಲ

ಮೂಲಗಳ ಮಾಹಿತಿ ಪ್ರಕಾರ, ಜನವರಿ ಬಳಿಕ ರಾಜೀನಾಮೆ ನೀಡಿರುವ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಒಬ್ಬರ ರಾಜೀನಾಮೆ ಇನ್ನೂ ಸ್ವೀಕೃತವಾಗಿಲ್ಲ. ಮಲ್ಲಾಡಿ ಕೃಷ್ಣ ರಾವ್ ರಾಜೀನಾಮೆಯನ್ನು ಸಭಾಪತಿಗಳು ಸ್ವೀಕರಿಸಿಲ್ಲ. ಅಲ್ಲದೇ, ಕೃಷ್ಣ ರಾವ್ ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಬಗ್ಗೆ ಯೋಚನೆ ಮಾಡಿದ್ದಾರೆ. ಈ ಕಾರಣದಿಂದ ಮಲ್ಲಾಡಿ ಕೃಷ್ಣ ರಾವ್ ಆಡಳಿತ ಸರ್ಕಾರದ ಪರವಾಗಿ ವಿಶ್ವಾಸ ಮತ ನೀಡುವ ಸಾಧ್ಯತೆ ಇದೆ. ಇದರಿಂದಲೂ ನಾರಾಯಣಸ್ವಾಮಿ ಸರ್ಕಾರ ಸ್ಪಷ್ಟ ಬಹುಮತ ಪಡೆಯಬಹುದು.

ನಾರಾಯಣಸ್ವಾಮಿ ಬಹುಮತ ಪಡೆಯಲು ವಿಫಲರಾಗಬಹುದು

ಬಿಜೆಪಿ ನಾಮನಿರ್ದೇಶಿತ ವಿಧಾನಸಭಾ ಸದಸ್ಯರಿಗೆ ಬಹುಮತ ಸೂಚಿಸಲು ಸಭಾಪತಿ ಅವಕಾಶ ನೀಡಿದರೆ, ವಿರೋಧ ಪಕ್ಷಗಳಿಗೆ ಹೆಚ್ಚಿನ ಬಲ ಸಿಕ್ಕಿದಂತೆ ಆಗಲಿದೆ. ಜತೆಗೆ, ಮಲ್ಲಾಡಿ ಕೃಷ್ಣ ರಾವ್ ರಾಜೀನಾಮೆ ಪಡೆಯಲು ಯಶಸ್ವಿಯಾದರೆ ಆಡಳಿತ ಪಕ್ಷಕ್ಕೆ ಮತ್ತಷ್ಟು ಅಪಾಯ ಎದುರಾಗಲಿದೆ. ಈ ಸನ್ನಿವೇಷ ಎದುರಾದರೆ, ನಾರಾಯಣಸ್ವಾಮಿ ನೇತೃತ್ವದ ಪಕ್ಷ ಬಹುಮತ ಸಾಬೀತುಪಡಿಸಲು ವಿಫಲವಾಗಬಹುದು. ಅದಕ್ಕೂ ಮೊದಲು, ನಾರಾಯಣಸ್ವಾಮಿ ಸರ್ಕಾರ ವಿಸರ್ಜನೆ ಮಾಡಲೂಬಹುದು.

AINRC-AIADMK-BJP ಸಮ್ಮಿಶ್ರ ಸರ್ಕಾರ ರಚನೆ

ನಾರಾಯಣಸ್ವಾಮಿ ಸ್ಪಷ್ಟ ಬಹುಮತ ಕಳೆದುಕೊಂಡರೆ, AINRC-AIADMK-BJP ಮೈತ್ರಿ ಸರ್ಕಾರ ರಚಿಸಬಹುದು. ಆದರೆ, ಈ ಸರ್ಕಾರ ಬಹುದಿನಗಳವರೆಗೆ ಆಡಳಿತ ನಡೆಸುವ ಅವಕಾಶ ಪಡೆಯುವುದಿಲ್ಲ. ಮುಂಬರುವ ಏಪ್ರೀಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಸರ್ಕಾರ ಮತ್ತೆ ಸವಾಲು ಎದುರಿಸಬೇಕಾಗಿ ಬರಲಿದೆ.

ಇನ್ನೊಂದು ಯೋಚನೆಯಂತೆ, AINRC-AIADMK-BJP ಸಮ್ಮಿಶ್ರ ಸರ್ಕಾರ ರಚಿಸಿ, ಜನರ ವಿಶ್ವಾಸ, ಅನುಕಂಪ ಕಳೆದುಕೊಂಡರೆ, ಮುಂಬರುವ ಚುನಾವಣೆಗೆ ಪರಿಣಾಮ ಬೀರಬಹುದು. ಹಾಗಾಗಿ, ಸಮ್ಮಿಶ್ರ ಸರ್ಕಾರ ರಚಿಸಲು AINRC-AIADMK-BJP ಕೂಡ ನಾಲ್ಕು ಬಾರಿ ಯೋಚಿಸಬೇಕಾಗಹುದು.

ರಾಷ್ಟ್ರಪತಿ ಆಳ್ವಿಕೆ ಬರಬಹುದೇ?

ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡರೆ ಹಾಗೂ ಸದ್ಯ ವಿರೋಧ ಪಕ್ಷ ಸ್ಥಾನದಲ್ಲಿರುವ ಪಕ್ಷಗಳು ಸರ್ಕಾರ ರಚಿಸಲು ಒಂದಾಗದಿದ್ದರೆ, ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರಪತಿ ಆಡಳಿತವನ್ನು ಸೂಚಿಸಬಹುದು. ಮುಖ್ಯಮಂತ್ರಿ ಸರ್ಕಾರ ವಿಸರ್ಜಿಸುವ ನಿರ್ಧಾರ ಕೈಗೊಂಡರೆ, ಅದು ಬಹುಮತ ಸಾಬೀತುಪಡಿಸದ ಪಕ್ಷದ ನಿರ್ಧಾರ ಎಂಬ ಕಾರಣ ನೀಡಿ, ಲೆಫ್ಟಿನೆಂಟ್ ಗವರ್ನರ್ ಸರ್ಕಾರ ವಿಸರ್ಜಿಸುವ ನಿರ್ಧಾರವನ್ನು ಕೂಡ ಪರಿಗಣಿಸದೇ ಉಳಿಯಬಹುದು. ಹೀಗಾದರೆ, ಮುಂಬರುವ ಪುದುಚೇರಿ ವಿಧಾನಸಭಾ ಚುನಾವಣೆಯು ರಾಷ್ಟ್ರಪತಿ ಆಡಳತದ ಅಡಿಯಲ್ಲಿ ನಡೆಯಬೇಕಾಗಿ ಬರಬಹುದು.

ಪುದುಚೇರಿ ವಿಧಾನಸಭಾ ಸಂಖ್ಯೆಯ ಲೆಕ್ಕಾಚಾರಗಳೇನು?

ಪುದುಚೇರಿ ವಿಧಾನಸಭೆಯಲ್ಲಿ ಒಟ್ಟು 33 ಸ್ಥಾನಗಳಿವೆ. ಅವುಗಳಲ್ಲಿ 30 ಚುನಾಯಿತ ಶಾಸಕರು ಮತ್ತು 3 ನಾಮನಿರ್ದೇಶಿತ ಸದಸ್ಯರು ಇದ್ದಾರೆ. 30 ಮತಕ್ಷೇತ್ರಗಳ ಕೇಂದ್ರಾಡಳಿತ ಪ್ರದೇಶದಲ್ಲಿ ಪೂರ್ಣ ಬಹುಮತ ಪಡೆಯಲು ಪಕ್ಷವೊಂದಕ್ಕೆ 16 ಸ್ಥಾನಗಳು ಬೇಕು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವಿಚಾರದಲ್ಲಿ 33 ಸದಸ್ಯರು ಭಾಗವಾಗುತ್ತಾರೆ. ಆದರೆ, ಈಗ 4 ಶಾಸಕರು ರಾಜೀನಾಮೆ ನೀಡಿದ್ದಾರೆ. ಜತೆಗೆ, ಒಬ್ಬರು ಶಾಸಕರು ಅನರ್ಹಗೊಂಡಿದ್ದಾರೆ. ಅಂದರೆ, 28 ಸದಸ್ಯರು ಇದ್ದಂತಾಯಿತು.

ಜತೆಗೆ, ನಾರಾಯಣಸ್ವಾಮಿ ಹೇಳಿದಂತೆ ಬಿಜೆಪಿಯ 3 ನಾಮನಿರ್ದೇಶಿತ ಸದಸ್ಯರು ವಿಶ್ವಾಸಮತದ ಲೆಕ್ಕಾಚಾರದಿಂದ ಹೊರಗುಳಿದರೆ, ಸದಸ್ಯರ ಸಂಖ್ಯೆ 25 ಆದಂತಾಯಿತು. ಹಾಗಾಗಿ, 25 ವಿಧಾನಸಭಾ ಸದಸ್ಯರು ಮಾತ್ರ ಬಹುಮತ ಸಾಬೀತುಪಡಿಸಲು ಅರ್ಹರಾಗುತ್ತಾರೆ. ಅದರಂತೆ, 13 ಮತ ಪಡೆದ ಪಕ್ಷವು ಬಹುಮತ ಗಳಿಸಿದಂತೆ ಆಗುತ್ತದೆ.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?