ನನಗೆ ವಿಷಯ ತಿಳಿಸಿದ್ರೆ ಮದುವೆಯನ್ನೇ ಕ್ಯಾನ್ಸಲ್ ಮಾಡ್ತಿದ್ದೆ, ಆದ್ರೆ ನನ್ನ ಮಗನನ್ನು ಸಿಯಾ ಕೊಂದಿದ್ಯಾಕೆ? ಕೇತನ್ ತಂದೆ ಪ್ರಶ್ನೆ

ಕೇತನ್ ಅಗರ್ವಾಲ್ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಮಗನನ್ನು ಹತ್ಯೆಗೈದ ಸಿಯಾಳ ವಿರುದ್ಧ ಕೇತನ್ ತಂದೆ ವಿಶಾಲ್ ಆಕ್ರೋಶ ಹೊರಹಾಕಿದ್ದಾರೆ. ಸಿಯಾ ಬೇರೊಬ್ಬನೊಂದಿಗೆ ಸಂಬಂಧವಿದ್ದರೆ ತಿಳಿಸಬಹುದಿತ್ತು, ಮದುವೆ ರದ್ದು ಮಾಡುತ್ತಿದ್ದೆವು. ಸಣ್ಣ ಕಾರಣಕ್ಕೆ ನನ್ನ ಮಗನನ್ನು ಕೊಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಸಿಯಾ ಈ ಹಿಂದೆ ಎರಡು ಬಾರಿ ಕೊಲೆ ಯತ್ನ ನಡೆಸಿದ್ದಳು. ಹಂತಕರಿಗೆ ಮರಣದಂಡನೆ ನೀಡಲು ಅವರು ಒತ್ತಾಯಿಸಿದ್ದಾರೆ.

ನನಗೆ ವಿಷಯ ತಿಳಿಸಿದ್ರೆ ಮದುವೆಯನ್ನೇ ಕ್ಯಾನ್ಸಲ್ ಮಾಡ್ತಿದ್ದೆ, ಆದ್ರೆ ನನ್ನ ಮಗನನ್ನು ಸಿಯಾ ಕೊಂದಿದ್ಯಾಕೆ? ಕೇತನ್ ತಂದೆ ಪ್ರಶ್ನೆ
ಕೇತನ್, ಸಿಯಾ, ಚೇತನ್

Updated on: Jun 25, 2026 | 9:42 AM

ಮುಖ್ಯಾಂಶಗಳು

  • ಬೇರೊಬ್ಬನ ಸಂಬಂಧವಿರುವುದು ತಿಳಿಸಿದ್ದರೆ ಮದುವೆ ರದ್ದುಗೊಳಿಸುತ್ತಿದ್ದೆವು ಎಂದು ಕೇತನ್ ತಂದೆ ಕಣ್ಣೀರು
  • ಕೇತನ್ ಸಹೋದರಿ ಕೇಳಿದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಿಕ್ಕಿಬಿದ್ದ ಸಿಯಾ
  • ಮಗನನ್ನು ಕ್ರೂರವಾಗಿ ಕೊಂದ ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ವಿಶಾಲ್ ಒತ್ತಾಯ

ಪುಣೆ, ಜೂನ್ 25: ಸಿಯಾಳಿಗೆ ಬೇರೊಬ್ಬನ ಜೊತೆ ಸಂಬಂಧವಿದ್ದರೆ ಆ ವಿಷಯವನ್ನು ನಮಗೆ ಒಂದು ಮೆಸೇಜ್ ಮೂಲಕ ತಿಳಿಸಬಹುದಿತ್ತು. ನಾವು ಮದುವೆ(Marriage)ಯನ್ನೇ ರದ್ದು ಮಾಡುತ್ತಿದ್ದೆವು. ಆದರೆ, ಇಷ್ಟು ಸಣ್ಣ ವಿಷಯಕ್ಕೆ ನನ್ನ ಮಗನನ್ನು ಆಕೆ ಕೊಂದಿದ್ದೇಕೆ? ಎಂದು ಮೃತ ಕೇತನ್ ತಂದೆ ವಿಶಾಲ್ ಆಕ್ರೋಶ ಹೊರಹಾಕಿದ್ದಾರೆ.

ಫೋನ್ ಯಾವಾಗಲೂ ಬ್ಯುಸಿ ಇರುತ್ತಿತ್ತು: ತಂದೆ ಬಿಚ್ಚಿಟ್ಟ ರಹಸ್ಯ

ವಿಶಾಲ್ ಅಗರ್ವಾಲ್ ಅವರ ಪ್ರಕಾರ, ಸಿಯಾ ತನಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ. ಹೊರಗಣ್ಣಿಗೆ ಆಕೆ ಇಡೀ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಳು.
ಆದರೆ, ಕೇತನ್ ಒಮ್ಮೆ ತನ್ನ ತಂದೆಯ ಬಳಿ, ಸಿಯಾಳ ಫೋನ್ ಯಾವಾಗಲೂ ಬ್ಯುಸಿ ಇರುತ್ತದೆ, ವೇಟಿಂಗ್‌ನಲ್ಲಿ ಬರುತ್ತದೆ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಕೇತನ್ ಪ್ರಶ್ನಿಸಿದಾಗ, ಆಕೆ ತಾನು ಸ್ನೇಹಿತರೊಂದಿಗೆ ಮಾತನಾಡುತ್ತಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದಳು.

ಕೊಲೆಯ ಕಳ್ಳಾಟ ಬಯಲು ಮಾಡಿದ್ದೇ ಕೇತನ್ ಸಹೋದರಿ

ಜೂನ್ 18 ರಂದು ಲೋಹಗಡ ಕೋಟೆಯಲ್ಲಿ ಕೇತನ್ ಕಂದಕಕ್ಕೆ ಬಿದ್ದಾಗ ಸಿಯಾ ಅದನ್ನು ಅಪಘಾತ ಎಂದು ಬಿಂಬಿಸಿದ್ದಳು. ಆದರೆ ಕೇತನ್ ಸಹೋದರಿ ಸಂಜನಾಗೆ ಆಕೆಯ ನಡವಳಿಕೆಯ ಮೇಲೆ ಅನುಮಾನವಿತ್ತು.

ಶವವನ್ನು ಕಂದಕದಿಂದ ಹೊರತೆಗೆದಾಗ ಸಂಜನಾ ಸಿಯಾಳಿಗೆ, ಇದು ಹೇಗೆ ಸಂಭವಿಸಿತು? ಅಣ್ಣ ಅಷ್ಟೊಂದು ಅಂಚಿಗೆ ಏಕೆ ಹೋಗಿದ್ದ ಎಂಬ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದ್ದಳು. ಆದರೆ ಸಿಯಾಳ ಬಳಿ ಯಾವುದೇ ಉತ್ತರಗಳಿರಲಿಲ್ಲ. ಏಕೆಂದರೆ ಬಂಡೆಯ ಅಪಾಯಕಾರಿ ಅಂಚಿನಲ್ಲಿ ನಿಲ್ಲುವ ವ್ಯಕ್ತಿ ಕೇತನ್ ಆಗಿರಲಿಲ್ಲ ಎಂದು ಸಹೋದರಿ ದೃಢವಾದ ನಂಬಿಕೆ ಇತ್ತು. ಇದೇ ಅನುಮಾನ ಮುಂದೆ ಪೊಲೀಸ್ ತನಿಖೆಗೆ ಕಾರಣವಾಗಿ ಕೊಲೆ ಬಯಲಾಯಿತು.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಹೆತ್ತವರ ಒತ್ತಡವೇ ಕೊಲೆಗೆ ಕಾರಣ?

ಸಿಯಾಳ ಹೆತ್ತವರು ಮತ್ತು ಆಕೆಯ ಚಿಕ್ಕಮ್ಮನಿಗೆ ಈ ಕಳ್ಳಪ್ರೇಮದ ವಿಷಯ ಮೊದಲೇ ತಿಳಿದಿತ್ತು ಎಂದು ಕೇತನ್ ತಂದೆ ಶಂಕಿಸಿದ್ದಾರೆ. ಗೋಯಲ್ ಕುಟುಂಬದವರೇ ಶ್ರೀಮಂತ ಉದ್ಯಮಿ ಕೇತನ್ ಜೊತೆ ಮದುವೆಯಾಗುವಂತೆ ಸಿಯಾಳ ಮೇಲೆ ಭಾರಿ ಒತ್ತಡ ಹೇರಿದ್ದರು. ಇದೇ ಕಾರಣಕ್ಕೆ ಆಕೆ ಕೇತನ್‌ನನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಇದರ ಹಿಂದೆ ನಮಗೆ ತಿಳಿಯದ ದೊಡ್ಡ ಪಿತೂರಿ ಇರಬಹುದು, ಪೊಲೀಸರು ಅದನ್ನು ಪತ್ತೆಹಚ್ಚಬೇಕು ಎಂದು ತಂದೆ ಹೇಳಿದ್ದಾರೆ.

ಹಂತಕರಿಗೆ ಮರಣದಂಡನೆ ಶಿಕ್ಷೆಯಾಗಲಿ

ಪೊಲೀಸರ ಪ್ರಕಾರ ಮೇ 31 ರಂದೇ ಮೊದಲ ಕೊಲೆ ಯತ್ನ ನಡೆದಿತ್ತು. ನಂತರ ಜೂನ್ 14 ರಂದು ಸಿಯಾ ಕೋಟೆಯ ಮೇಲಿಂದ ತಳ್ಳಿದಾಗ ಕೇತನ್ ಪೊದೆಯನ್ನು ಹಿಡಿದು ಬದುಕುಳಿದಿದ್ದ. ಆಗ ಸಿಯಾ, ಹಾವಿನಿಂದ ನಿನ್ನನ್ನು ರಕ್ಷಿಸಲು ತಳ್ಳಿದೆ ಎಂದು ನಂಬಿಸಿದ್ದಳು. ಕೊನೆಗೂ ಜೂನ್ 18 ರಂದು ಪ್ರಿಯಕರ ಚೇತನ್ ಜೊತೆ ಸೇರಿ ಆಕೆಯನ್ನು ಕಂದಕಕ್ಕೆ ತಳ್ಳಿದ್ದಾಳೆ.

ಇಷ್ಟು ಕ್ರೂರವಾಗಿ ನನ್ನ ಮಗನನ್ನು ಕೊಂದ ಆ ಇಬ್ಬರು ಹಂತಕರಿಗೆ ಕೋರ್ಟ್ ಮರಣದಂಡನೆ ಶಿಕ್ಷೆಯನ್ನೇ ವಿಧಿಸಬೇಕು ಎಂದು ವಿಶಾಲ್ ಅಗರ್ವಾಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us