ಪುಣೆ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಜಾಧವ್ ಎಂಬಾತನನ್ನು ಮಹಾರಾಷ್ಟ್ರದ ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುಣೆಯಲ್ಲಿ 2021ರ ಕೊಲೆ ಪ್ರಕರಣ ಸಂಬಂಧ ಸಂತೋಷ್ ಜಾಧವ್ ಮತ್ತು ನವ್ನಾಥ್ ಸೂರ್ಯವಂಶಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಸಂತೋಷ್ ಜಾಧವ್ ಬಂಧಿತ ಸಂತೋಷ್ ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ.
ಪುಣೆ ಪೊಲೀಸರಿಂದ ಲಾರೆನ್ಸ್ ಬಿಷ್ಣೋಯ್ ವಿಚಾರಣೆ
ದೆಹಲಿ ಪೊಲೀಸರ ವಶದಲ್ಲಿರುವ ಬಂಧಿತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನನ್ನು ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪುಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ ಸಂತೋಷ್ ಜಾಧವ್ ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ಕೊಲೆಯೊಂದರಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದ. ಅವನ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದ (Maharashtra Control of Organised Crime Act – MCOCA) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಸಿಧು ಮೂಸೆವಾಲಾ ಹತ್ಯೆಯಲ್ಲಿ ಸಂತೋಷ್ ಜಾಧವ್ ಜೊತೆಗೆ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆಯೂ ಮಹಾರಾಷ್ಟ್ರ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ಪುಣೆಗೆ ಬಂದಿರುವ ಪಂಜಾಬ್ ಪೊಲೀಸರು, ಪುಣೆ ಪೊಲೀಸರ ವಶದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಸಹಚರ ಸಿದ್ದೇಶ್ ಕಾಂಬ್ಳೆ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಕೊಲೆಗಾರ ಸಂತೋಷ್ಗೆ ಆಶ್ರಯ ಕೊಟ್ಟ ಆರೋಪ ಕಾಂಬ್ಳೆ ಮೇಲಿದೆ.
ಚಿತ್ರನಟ ಸನ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಪತ್ರ ರವಾನಿಸಿದ ಆರೋಪ ಲಾರೆನ್ಸ್ ಬಿಷ್ಣೋಯ್ ಮೇಲಿದೆ. ಇವರನ್ನು ಬೆದರಿಸಿ ಹಣ ಕಿತ್ತುಕೊಳ್ಳುವ ಯೋಜನೆಯನ್ನು ರೌಡಿ ವಿಕ್ರಮ್ ಬ್ರಾರ್ ರೂಪಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾನನ್ನು ದುಷ್ಕರ್ಮಿಗಳು ಗುಂಡಿನ ಸುರಿಮಳೆಗರೆದು ಹತ್ಯೆ ಮಾಡಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ