ರೈತರಿಗೆ ಬೆಂಬಲ ಸೂಚಿಸಿ ರಾಜೀನಾಮೆ ಸಲ್ಲಿಸಿದ ಪಂಜಾಬ್ ಡಿಐಜಿ ಲಕ್ಷ್ಮೀಂದರ್ ಸಿಂಗ್ ಜಖರ್
ಇಲ್ಲಿದ್ದುಕೊಂಡು ನನಗೆ ರೈತರಿಗೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೊದಲು ನನ್ನ ಕೆಲಸವನ್ನು ತ್ಯಜಿಸುವುದಾಗಿ ಲಕ್ಷ್ಮೀಂದರ್ ಸಿಂಗ್ ಜಖರ್ ಹೇಳಿದ್ದಾರೆ.
ಚಂಡೀಗಢ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಹೋರಾಡುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ, ಪಂಜಾಬ್ ಪೊಲೀಸ್ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಂದರ್ ಸಿಂಗ್ ಜಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅವರ ರಾಜೀನಾಮೆಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಈ ಕುರಿತು ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಕೃಷಿ ಕಾಯ್ದೆಗಳ ವಿರುದ್ಧ ನನ್ನ ರೈತ ಸೋದರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ. ನಾನು ಒಂದು ಶಿಸ್ತುಬದ್ಧ ಪಡೆಯಲ್ಲಿ ಇದ್ದವನು. ಇಲ್ಲಿದ್ದುಕೊಂಡು ನನಗೆ ರೈತರಿಗೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೊದಲು ನನ್ನ ಕೆಲಸವನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆಂದು ಎಎನ್ಐ ವರದಿ ಮಾಡಿದೆ.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಇತರ ಪ್ರದೇಶಗಳ ಸಾವಿರಾರು ರೈತರು ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನಿಂದಾಗಿ ಕನಿಷ್ಠ ಬೆಂಬಲ ಬೆಲೆ ಇಲ್ಲದಾಗುತ್ತದೆ. ಕಾರ್ಪೊರೇಟ್ ಕಂಪನಿಗಳ ಮುಂದೆ ಕೈಚಾಚ ಬೇಕಾಗುತ್ತದೆ ಎಂಬ ಆತಂಕ ರೈತರಿಗಿದೆ.
ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
ಈ ಹಿಂದೆ, ಅಕಾಲಿದಳದ ಮುಖ್ಯಸ್ಥ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ಶಿರೋಮಣಿ ಅಕಾಲಿ ದಳ (ಡೆಮಾಕ್ರಸಿ) ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಕೂಡ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು.
ರೈತರ ಆಂದೋಲನಕ್ಕೆ ಪಂಜಾಬ್ನ ಹಲವು ಕ್ರೀಡಾಪಟುಗಳು ಬೆಂಬಲ ನೀಡಿದ್ದಾರೆ. ಖ್ಯಾತ ಪಂಜಾಬಿ ಕವಿ ಸುರ್ಜಿತ್ ಪಾತರ್ ಕೂಡಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ತಿಳಿಸಿದ್ದಾರೆ.
Farmers have been protesting peacefully for long, nobody heard their problems. I'm from a disciplined force & as per rules, I can't support a protest if am on duty. I've to decide about my job first then decide further course of action:Punjab DIG (Prisons) Lakhminder Singh Jakhar https://t.co/ZUA3F1vNN0 pic.twitter.com/8Mck0KJvEq
— ANI (@ANI) December 13, 2020
Dilli Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ