ಮೆಡಿಕಲ್ ವಿವಿ ಉಪಕುಲಪತಿಗೆ ಕೊಳಕು ಹಾಸಿಗೆ ಮೇಲೆ ಮಲಗಲು ಹೇಳಿದ ಆರೋಗ್ಯ ಸಚಿವ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jul 30, 2022 | 10:52 AM

Punjab News: ಆರೋಗ್ಯ ಸಚಿವರ ಸೂಚನೆಯಂತೆ ಗಲೀಜಾದ ಹಾಸಿಗೆ ಮೇಲೆ ವಿಶ್ವವಿದ್ಯಾಲಯದ ಉಪ ಕುಲಪತಿ ಮಲಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದ ಬಳಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಾಜ್ ಬಹದ್ದೂರ್ ರಾಜೀನಾಮೆ ನೀಡಿದ್ದಾರೆ.

ಮೆಡಿಕಲ್ ವಿವಿ ಉಪಕುಲಪತಿಗೆ ಕೊಳಕು ಹಾಸಿಗೆ ಮೇಲೆ ಮಲಗಲು ಹೇಳಿದ ಆರೋಗ್ಯ ಸಚಿವ; ವಿಡಿಯೋ ವೈರಲ್
ಮೆಡಿಕಲ್ ವಿವಿ ಉಪಕುಲಪತಿಗೆ ರೋಗಿಯ ಹಾಸಿಗೆ ಮೇಲೆ ಮಲಗಲು ಹೇಳಿದ ಸಚಿವ
Image Credit source: Hindustan Times
Follow us on

ನವದೆಹಲಿ: ಪಂಜಾಬ್​​ನಲ್ಲಿ (Punjab) ಹೊಸ ವಿವಾದವೊಂದು ಹುಟ್ಟಿಕೊಂಡಿದ್ದು, ಶುಕ್ರವಾರ ವೈದ್ಯಕೀಯ ಕಾಲೇಜಿನ ಪರಿಶೀಲನೆಗೆ ಹೋದಾಗ ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಸಿದ್ಧ ಆರೋಗ್ಯ ತಜ್ಞರೂ ಆಗಿರುವ ಡಾ. ರಾಜ್ ಬಹದ್ದೂರ್ ಅವರಿಗೆ ರೋಗಿಯೊಬ್ಬರ ಗಲೀಜಾದ ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ. ಕೊಳಕು ಹಾಸಿಗೆ ಮೇಲೆ ಬಾಬಾ ಫರೀದ್ ಮೆಡಿಕಲ್ ಯುನಿವರ್ಸಿಟಿಯ (Baba Farid medical university) ಉಪ ಕುಲಪತಿಯನ್ನು ಮಲಗಲು ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ವಿರೋಧಪಕ್ಷಗಳು ಹಂಚಿಕೊಂಡಿದ್ದು, ಆರೋಗ್ಯ ಸಚಿವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿವೆ.

ಆರೋಗ್ಯ ಸಚಿವರ ಸೂಚನೆಯಂತೆ ಗಲೀಜಾದ ಹಾಸಿಗೆ ಮೇಲೆ ವಿಶ್ವವಿದ್ಯಾಲಯದ ಉಪ ಕುಲಪತಿ ಮಲಗಿರುವ ವಿಡಿಯೋ ವೈರಲ್ ಆಗಿದೆ. ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಾಜ್ ಬಹದ್ದೂರ್ ಅವರನ್ನು ರೋಗಿಯ ಹಾಸಿಗೆಯ ಮೇಲೆ ಮಲಗಲು ಹೇಳಿದ ದೃಶ್ಯಗಳನ್ನು ಪ್ರತಿಪಕ್ಷಗಳು ಹಂಚಿಕೊಂಡಿದ್ದು, ಆರೋಗ್ಯ ಸಚಿವರನ್ನು ತೀವ್ರವಾಗಿ ಟೀಕಿಸಿವೆ.

ಈ ಘಟನೆ ನಡೆದ ಬಳಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಾಜ್ ಬಹದ್ದೂರ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ವಿಶ್ವವಿದ್ಯಾನಿಲಯವು ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯಲ್ಲಿದೆ. ಈ ಘಟನೆ ವೈದ್ಯರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Bhagwant Mann: ಅನಾರೋಗ್ಯದಿಂದ ರಾತ್ರೋರಾತ್ರಿ ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

ಈ ಬಗ್ಗೆ ಪಂಜಾಬ್ ಸಿವಿಲ್ ಮೆಡಿಕಲ್ ಸರ್ವಿಸಸ್ ಅಸೋಸಿಯೇಷನ್ ​​(ಪಿಸಿಎಂಎಸ್ಎ)ನ ಡಾ. ಅಖಿಲ್ ಸರಿನ್ ಹೇಳಿಕೆ ಪ್ರಕಟಿಸಿದ್ದು, ಆರೋಗ್ಯ ಸಚಿವರು ಉಪಕುಲಪತಿಯನ್ನು ನಡೆಸಿಕೊಂಡ ರೀತಿಯನ್ನು ಪಿಸಿಎಂಎಸ್ಎ ಬಲವಾಗಿ ಖಂಡಿಸುತ್ತದೆ. ಕಾರಣ ಏನೇ ಇರಲಿ, ಒಂದು ಮೆಡಿಕಲ್ ಯೂನಿವರ್ಸಿಟಿಯ ವಿಸಿ ಆಗಿರುವ ಅವರನ್ನು ನಿಂದಿಸಿದ ರೀತಿ ಸರಿಯಲ್ಲ. ಈ ಮೂಲಕ ರಾಜ್ಯದ ಏಕೈಕ ಬೆನ್ನುಮೂಳೆ (ಸ್ಪೈನ್) ಸರ್ಜನ್ ಆಗಿರುವ ರಾವ್ ಬಹದ್ದೂರ್​ ಅವರನ್ನು ಅವಮಾನಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ

ಶುಕ್ರವಾರ ವೈದ್ಯಕೀಯ ಕಾಲೇಜಿನ ಪರಿಶೀಲನೆ ಬಳಿಕ ಮಾತನಾಡಿದ್ದ ಆರೋಗ್ಯ ಸಚಿವರು, ಕೂಡಲೇ ಎಲ್ಲ ಸೌಲಭ್ಯಗಳನ್ನು ಸುಧಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲಾ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. 15 ದಿನಗಳ ನಂತರ ಮತ್ತೊಮ್ಮೆ ಆಸ್ಪತ್ರೆಯನ್ನು ತಪಾಸಣೆ ಮಾಡುತ್ತೇವೆ. ಶೀಘ್ರದಲ್ಲೇ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಔಷಧಿಗಳ ಕೊರತೆ ನಿವಾರಿಸಲಾಗುವುದು ಎಂದಿದ್ದರು.